ಭೂಸುಧಾರಣೆ ಕಾಯ್ದೆ ತಿದ್ದುಪಡಿ; ಬಡವರಿಂದ ಭೂಮಿ ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವ ಹುನ್ನಾರ – ಹರಿಪ್ರಸಾದ್ ಶೆಟ್ಟಿ

Spread the love

ಭೂಸುಧಾರಣೆ ಕಾಯ್ದೆ ತಿದ್ದುಪಡಿ; ಬಡವರಿಂದ ಭೂಮಿ ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವ ಹುನ್ನಾರ – ಹರಿಪ್ರಸಾದ್ ಶೆಟ್ಟಿ

ಕುಂದಾಪುರ : ರಾಜ್ಯದಲ್ಲಿ ಕೊರೊನಾ ಸೋಂಕು ತೀವೃವಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಬಡವರಿಂದ ಭೂಮಿ ಕಿತ್ತುಕೊಂಡು ಬಂಡವಾಳ ಶಾಹಿಗಳಿಗೆ ನೀಡುವ ಹುನ್ನಾರ ನಡೆಸುತ್ತಿದೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಆರೋಪಿಸಿದ್ದಾರೆ.

ಸುಗ್ರೀವಾಜ್ಞೆ ಹೊರಡಿಸಿದ ದಿನ ರಾಜ್ಯದ ಬಡವರ ಮತ್ತು ಕೃಷಿಕರ ಪಾಲಿಗೆ ಕರಾಳ ದಿನವಾಗಿದೆ. ತನ್ನ ಸರ್ವಾಧಿಕಾರ ಬಳಸಿ ತಂದಿರುವ ಈ ಕಾಯಿದೆ ಜನವಿರೋಧಿಯಾಗಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ .ಇದರಿಂದಾಗಿ ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ಕಪಟ ನಾಟಕ ಎನ್ನುವುದು ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

1974 ರಲ್ಲಿ ದೇವರಾಜ ಅರಸು ಅವರು, ಭೂಸುಧಾರಣೆ ಕಾಯ್ದೆ(1961)ಯ ಸೆಕ್ಷನ್ 63, 79 ಎ , 79 ಬಿ , 79 ಸಿ ಹಾಗೂ 80 ನ್ನು ಸೇರ್ಪಡೆಗೊಳಿಸಿ ಸಾಮಾಜಿಕ ನ್ಯಾಯದಿಂದ ಕೂಡಿದಂತಹ ‘ ಉಳುವವನೇ ಹೊಲದೊಡೆಯ ‘ ಎನ್ನುವ ಘೋಷವಾಕ್ಯದ ಕ್ರಾಂತಿಕಾರಕ ನಿರ್ಣಯ ತೆಗೆದುಕೊಂಡು, ಗೆಣಿಗೆ ಹೊಲ ಉಳುತ್ತಿದ್ದ ರೈತರಿಗೆ ಭೂಮಿಯ ಮಾಲಿಕತ್ವದ ಹಕ್ಕು ನೀಡಿದ್ದರು.

ದೇಶಕ್ಕೆ ಮಾದರಿಯಾಗಿ ಈ ತಿದ್ದುಪಡಿಯಲ್ಲಿ ಹಲವು ಕ್ರಾಂತಿಕಾರಕ ನಿಲುವು ತೆಗೆದುಕೊಳ್ಳಲಾಗಿತ್ತು. ಸೆಕ್ಷನ್ 79 (ಎ) ಪ್ರಕಾರ ಜಮೀನುದಾರರಿಗೆ ಕೃಷಿಯೇತರ ಆದಾಯ 25 ಲಕ್ಷಕ್ಕಿಂತ ಮೀರಿರಬಾರದು. ಸೆಕ್ಷನ್ 79 (ಬಿ) ಪ್ರಕಾರ ರೈತರಲ್ಲದೆ ಬೇರೆ ಯಾರೂ ಕೂಡ ಕೊಂಡು ಕೊಳ್ಳುವಂತಿಲ್ಲ. ಸೆಕ್ಷನ್ 79 (ಸಿ) ರಲ್ಲಿ, ಸಲ್ಲಿಸಿದ ಅಫಿಡವಿಟ್ನಲ್ಲಿ ಸುಳ್ಳು ಕಂಡುಬಂದರೆ ಶಿಕ್ಷೆಗೆ ಒಳಪಡಿಸಬಹುದು ಹಾಗೂ ಸೆಕ್ಷನ್ 80 ಪ್ರಕಾರ ಕೃಷಿಕರಲ್ಲದಿರೋರು ಕೊಂಡುಕೊಳ್ಳಕೂಡದು ಎನ್ನುವುದು ಅಡಕವಾಗಿತ್ತು.

ಇದೀಗ ರಾಜ್ಯ ಸರ್ಕಾರ ಈ ನಿರ್ಣಯಗಳನ್ನು ರದ್ದು ಗೊಳಿಸುತ್ತಿದೆ. ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ 118 ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. ಯಾವ ರೈತ ಇಷ್ಟೊಂದು ವಿಸ್ತೀರ್ಣದ ಜಮೀನು ಕೊಂಡುಕೊಳ್ಳಲು ಸಾಧ್ಯ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಹಾಗೂ ಬಂಡವಾಳಶಾಹಿಗಳಿಗೆ ಅನುಕೂಲ ಆಗಲಿದೆ. ಆಹಾರ ಉತ್ಪಾದನೆ ಕುಂಠಿತವಾಗಲಿದೆ .

ರಾಜ್ಯದ ಜನರನ್ನು ಕೋವಿಡ್-19 ಸಂಕಷ್ಟದಿಂದ ಪಾರು ಮಾಡುವ ಜನಪರವಾದ ಸುಗ್ರೀವಾಜ್ಞೆ ತರುವ ಬದಲು, ದೇಶದ ಬೆನ್ನೆಲುಬಾದ ರೈತಾಪಿ ಹಾಗೂ ಬಡವರ ವಿರುದ್ಧದ ಸುಗ್ರೀವಾಜ್ಞೆ ತಂದಿರುವುದು ನಾಚಿಗೆಗೇಡಿನ ಮತ್ತು ವಿಷಾದನೀಯ ಸಂಗತಿಯಾಗಿದ್ದು ಸರ್ಕಾರ ಕೂಡಲೇ ಈ ಸುಗ್ರೀವಾಜ್ಞೆಯನ್ನು ಹಿಂಪಡೆಯುವಂತೆ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love