Home Mangalorean News Kannada News ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ : ಉಡುಪಿ ಜಿಲ್ಲಾ ಕಾಂಗ್ರೆಸ್

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ : ಉಡುಪಿ ಜಿಲ್ಲಾ ಕಾಂಗ್ರೆಸ್

Spread the love

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕ : ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಅವೈಜ್ಞಾನಿಕವಾಗಿದ್ದು, ಕೃಷಿಕರ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಮಸೂದೆಗಳು ರೈತರ ಆದಾಯ ಭದ್ರತೆ ಹಾಗೂ ದೇಶದ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.

ಭೂ ಸುದಾರಣೆ ಕಾಯಿದೆಗೆ ತಿದ್ದುಪಡಿ ತಂದು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡುವಂತೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ಸರಕಾರ ಮುಂದಾಗಿರುವುದು ಅವೈಜ್ಞಾನಿಕ. ಸರಕಾರ ಕೃಷಿ ಭೂಮಿ ಮುಕ್ತ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧ ತೆರವುಗೊಳಿಸುವ ಮೂಲಕ ರಾಜ್ಯದ ರೈತರನ್ನು ಒಕ್ಕೆಲೆಬ್ಬಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ತಿದ್ದುಪಡಿಯಿಂದ ಕೈಗಾರಿಕೋದ್ಯಮಕ್ಕೆ ಉತ್ತೇಜನ ನೀಡುತ್ತದೆ ಎಂದು ಸರಕಾರ ಸಮರ್ಥಿಸಿಕೊಂಡರೂ ಕೈಗಾರಿಕೆ ಹೆಸರಲ್ಲಿ ಜಮೀನು ಖರೀದಿಸಿದವರು ರಿಯಲ್ ಎಸ್ಟೇಟ್ ದಂಧೆಯನ್ನು ಪ್ರಾರಂಭಿಸಬಹುದು. ಇದರಿಂದ ಇಷ್ಟರವರೆಗೆ ಉಳುವವನೇ ಹೊಲದೊಡೆಯ ಎಂದಿರುವುದನ್ನು ಉಳ್ಳವನೇ ಭೂಮಿ ಒಡೆಯ ಎಂದು ಬದಲಾಯಿಸಲಾಗಿದೆ.

ಕೃಷಿಕರಲ್ಲದವರು ಕೃಷಿ ಜಮೀನು ಖರೀದಿಸಿದಾಗ ಕೃಷಿ ಮತ್ತು ಅದಕ್ಕೆ ಸಂಬಂಧಪಟ್ಟ ಉಪ ಕಸುಬುಗಳಿಗೆ ಮಾತ್ರ ಬಳಸಬೇಕು ಎಂದು ತಿದ್ದುಪಡಿಯಲ್ಲಿ ನಮೂದಿಸದೆ ಇದ್ದುದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ರಿಯಲ್ ಎಸ್ಟೇಟ್ಗೆ ಕೃಷಿ ಭೂಮಿ ಬಳಕೆಯಾಗುವುದರಲ್ಲಿ ಸಂಶಯವಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಈ ಮೊದಲು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಈಗ ಕೃಷಿ ಭೂಮಿ ಒಡೆಯರಾಗಲು ಮತ್ತೊಂದು ತಿದ್ದುಪಡಿ ತರಲಾಗಿದೆ. ಇದರಿಂದಾಗಿ ಸರಕಾರ ನಿರಂತರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಕೃಷಿಕರ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಮಸೂದೆಗಳು ರೈತರ ಆದಾಯ ಭದ್ರತೆ ಹಾಗೂ ದೇಶದ ಆಹಾರ ಭದ್ರತೆಯ ಮೇಲೂ ಪರಿಣಾಮ ಬೀರಲಿದೆ ಎಂದು ರಾಜ್ಯ ಸರಕಾರ ತರಲು ಉದ್ದೇಶಿಸಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಿಲ್ಲಾ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ವಿರೋಧ ವ್ಯಕ್ತಪಡಿಸಿದ್ದಾರೆ.


Spread the love

Exit mobile version