ಉಡುಪಿ: ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಅವರು ಬುಧವಾರ ಭೈರಂಪಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ 4.5 ಕೋಟಿ ರೂ ಮೊತ್ತದ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆಯನ್ನು ನೆರವೇರಿಸಿದರು.
ಅಣ್ಣಾಲು-ಕುಂಟಾಲಕಟ್ಟೆಗೆ ಕುಡಿಯುವ ನೀರು ಸರಬರಜು ಮಾಡುವ 4.50 ಲಕ್ಷ ರೂ ಮೊತ್ತದ ಯೋಜನೆಯನ್ನು ಉದ್ಘಾಟಿಸಿದ ಸಚಿವರು, ಪಂಚಾಯತ್ಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಸೂಚಿಸಿದ ಸಚಿವರು , ನೀರು ಸರಬರಾಜು ಕುರಿತಂತೆ ಅನುದಾನದ ಕೊರತೆಯಿಲ್ಲ, ಈ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಬರಾಜಿಗೆ ಓವರ್ ಹೆಡ್ ಟ್ಯಾಂಕ್ ನಿರ್ಮಿಸುವಂತೆ ಹಾಗೂ ಉತ್ತಮ ರಸ್ತೆಗಳಿದ್ದರೂ ಸಾರಿಗೆ ಇಲ್ಲದ ಕುರಿತ ಸಾರ್ವಜನಿಕರ ಮನವಿ ಆಲಿಸಿದ ಸಚಿವರು, ಕೂಡಲೆ ಈ ಭಾಗಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಒದಗಿಸುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಬಾರ್ಡ್ ಯೋಜನೆಯಡಿ ಭೈರಂಪಳ್ಳಿ ಹನೈಡ್ಕ ರಸ್ತೆ ಅಭಿವೃದ್ಧಿಗಾಗಿ 37 ಲಕ್ಷ ರೂ ಮೊತ್ತದ ಕಾಮಗಾರಿಗೆ ಶಿಲಾನ್ಯಾಸ,ಶಿರೂರು ಹರಿಖಂಡಿಗೆ ಜನತಾ ಕಾಲೋನಿ ರಸ್ತೆ ಅಭಿವೃದ್ಧಿಗೆ 23 ಲಕ್ಷ ರೂ ಮೊತ್ತದ ಕಾಮಗಾರಿ ಶಿಲಾನ್ಯಾಸ, ಕೊಡ್ಸರಬೆಟ್ಟು ರಸ್ತೆ ಕಾಂಕ್ರೀಟೀಕರಣಕ್ಕೆ 10 ಲಕ್ಷ ರೂ ಕಾಮಗಾರಿ ಶಿಲಾನ್ಯಾಸ, ಕೆಂಬುಕಲ್ಲು ರಸ್ತೆಯ ಮಠದ ಪಾಲು ರಸ್ತೆ ಕಾಂಕ್ರೀಟೀಕರಣಕ್ಕೆ 30 ಲಕ್ಷ ರೂ ಕಾಮಗಾರಿ ಶಿಲಾನ್ಯಾಸ ಸೇರಿದಂತೆ ಒಟ್ಟು 4.5 ಕೋಟಿ ಮೊತ್ತದ ವಿವಿದ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ತಾ.ಪಂ ಅಧ್ಯಕ್ಷೆ ನಳಿನಿ ಪ್ರದೀಪ್,ಜಿ.ಪಂ. ಸದಸ್ಯೆ ಚಂದ್ರಿಕಾ, ಭೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಸದಾಶಿವ ಪೂಜಾರಿ, ಉಪಾಧ್ಯಕ್ಷ ಸತೀಶ್ ಶೆಟ್ಟಿ ಕುತ್ಯಾರು ಬೀಡು, ತಾ.ಪಂ. ಸದಸ್ಯೆ ಸುಗಂಧಿ ಹೆಗ್ಡೆ, ವಿವಿಧ ಇಲಾಖೆಯ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.