ಮಂಗಳಮುಖಿಯರಿಗೂ ಮತದಾನದ ಹಕ್ಕು; ಚುನಾವಣಾ ಆಯೋಗ ನೀಡಿದ ಬಹುದೊಡ್ಡ ಗೌರವ; ಜಿಪಂ. ಸಿಇಒ ಡಾ|ರವಿ
ಮಂಗಳೂರು: ಮತ ಚಲಾಯಿಸುವುದು ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯ. ಮಂಗಳಮುಖಿಯರಿಗೂ ಕೂಡ ಚುನಾವಣೆಯ ಹಕ್ಕನ್ನು ನೀಡುವುದರೊಂದಿಗೆ ಅವರ ಹಕ್ಕಿಗೂ ಗೌರವ ನೀಡಿರುವುದು ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ರವಿ ಹೇಳಿದರು.
ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಮಂಗಳಮುಖಿಯರಿಗೆ ಚುನಾವಣಾ ಜಾಗೃತಿ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು. ಚುನಾವಣಾ ಆಯೋಗ ವಿಶೇಷ ಚೇತನರಿಗೆ ಹಾಗೂ ಮಂಗಳಮುಖಿಯರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ನಿರ್ಧರಿಸಿದೆ, ಪ್ರತಿಯೊಬ್ಬರೂ ಕೂಡ ಚುನಾವಣೆಯ ಮಹತ್ವವನ್ನು ಅರಿಯಬೇಕಾಗಿದೆ ಅದು ಕೂಡ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಪ್ರತಿಯೊಬ್ಬ ಮಂಗಳಮುಖಿಯರನ್ನು ಚುನಾವಣಾ ಪಟ್ಟಿಯಲ್ಲಿ ನೋಂದಣಿ ಮಾಡಿಸುವುದು ಸರಕಾರಕ್ಕೆ ಅಸಾಧ್ಯವಾದ ಮಾತು. ಆದರೆ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ವಾಯ್ಲೆಟ್ ಪಿರೇರಾ ಮೂಲಕ ನಿಮ್ಮೆಲ್ಲರಿಗೆ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದು ನಿಜಕ್ಕೂ ಅಬಿನಂದನಾರ್ಹ ಸಂಗತಿಯಾಗಿದೆ. ದಕ ಜಿಲ್ಲೆಯಲ್ಲಿ ಒಟ್ಟು 153 ಮಂದಿ ಮಂಗಳ ಮುಖಯರು ಅಥವಾ ತೃತೀಯ ಲಿಂಗಿಗಳು ನೋಂದಣಿಯಾಗಿದ್ದು ಅವರಲ್ಲಿ ಹಲವರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದುವರೆಗೆ ಮಂಗಳಮುಖಿಯರನ್ನು ಸಮಾಜ ನಿರ್ಲಕ್ಷಿಸಿದೆ. ಸಮಾಜ ಅವರನ್ನು ನಡೆಸಿಕೊಳ್ಳುವ ರೀತಿಯ ಸಮಾಧಾನಕರವಾಗಿಲ್ಲ. ದೇಶದ ಸರ್ವೊಚ್ಚ ನ್ಯಾಯಲಯ ಮಂಗಳಮುಖಿಯರಿಗೆ ಅವರುಗಳ ಹಕ್ಕುಗಳನ್ನು ಪಡೆಯಲು ಸಮಾನರು ಎಂದು ಹೇಳಿದ್ದು, ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ಮಂಗಳಮುಖಿ ಕೂಡ ಸಮಾಜದಲ್ಲಿ ಸಮಾನವಾಗಿ ಕಾಣುವಂತಾಗಬೇಕು ಎಂದರು.
ದೇಶದ ಸಂವಿಧಾನ 18 ವರ್ಷ ತುಂಬಿದವರಿಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದು ಇದು ಚುನಾವಣಾ ಆಯೋಗ ಮತ್ತು ಸರ್ವೊಚ್ಚ ನ್ಯಾಯಲಯ ನೀಡಿದ ಐತಿಹಾಸಿ ತೀರ್ಪಿನಂತೆ ಮಂಗಳಮುಖಿಯರಿಗೂ ಕೂಡ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ಮಾಡಿಕೊಟ್ಟಿದೆ. ಸರಕಾರಗಳೂ ಕೂಡ ಮಂಗಳಮುಖಿಯರಿಗೆ ಪ್ರತಿಯೊಂದು ಯೋಜನೆಗಳನ್ನು ಪ್ರಾಮಾಣಿಕವಾಗಿ ನೀಡುವತ್ತಾ ಪ್ರಯತ್ನಿಸಬೇಕು. ಅದನ್ನು ಪಡೆಯುವಲ್ಲಿ ಮಂಗಳಮುಖಿಯರ ಬೆಂಬಲಕ್ಕೆ ನಿಂತಿರುವ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಪ್ರಯತ್ನ ನಿಜಕ್ಕೂ ಶ್ಲಾಘನಾರ್ಹ ಎಂದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಸ್ಥಾಪಕರೂ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ವಾಯ್ಲೆಟ್ ಪಿರೇರಾ, ಕಾರ್ಯದರ್ಶಿ ಸಂಜನಾ, ಕೋಶಾಧಿಕಾರಿ ಶ್ರೀನಿಧಿ, ಸ್ವೀಪ್ ಸಮಿತಿಯ ಸುಧಾಕರ್ ಬಿಂದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಂದರ ಪೂಜಾರಿ ಉಪಸ್ಥಿತರಿದ್ದರು.