Home Mangalorean News Kannada News ಮಂಗಳಮುಖಿಯರ ಹೊಸ ಬದುಕಿಗೆ ನಾಂದಿ ಪರಿವರ್ತನ ಟ್ರಸ್ಟ್ ಅ. 30ರಂದು ಉದ್ಘಾಟನೆ

ಮಂಗಳಮುಖಿಯರ ಹೊಸ ಬದುಕಿಗೆ ನಾಂದಿ ಪರಿವರ್ತನ ಟ್ರಸ್ಟ್ ಅ. 30ರಂದು ಉದ್ಘಾಟನೆ

Spread the love

ಮಂಗಳಮುಖಿಯರ ಹೊಸ ಬದುಕಿಗೆ ನಾಂದಿ  ಪರಿವರ್ತನ ಟ್ರಸ್ಟ್ ಅ. 30ರಂದು ಉದ್ಘಾಟನೆ

ಮಂಗಳೂರು: ನಮ್ಮ ನಿಮ್ಮಲ್ಲೆರ ದಿನನಿತ್ಯದ ಜೀವನದಲ್ಲಿ ಪ್ರತಿನಿತ್ಯ ಬಸ್ಸಲ್ಲಿ ಪ್ರಯಾಣಿಸುವಾಗ, ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ, ಕಚೇರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಒಮ್ಮೆಯಾದರೂ ಇಂತಹ ಮಂಗಳಮುಖಿಯರ ದರ್ಶನ ಆಗುವುದು ಖಂಡಿತ. ಅಂತಹ ಮಂಗಳ ಮುಖಿಯರನ್ನು ಕಂಡಾಗ ಹಲವು ಬಾರಿ ನಾವು ನೀವು ನಮ್ಮ ಮುಖ ತಿರುವಿಸಿ ಸಿಟ್ಟನ್ನು ಪ್ರದರ್ಶಿಸಿರುವುದು ಇದೆ. ಆದರೆ ಅವರಿಗೂ ಕೂಡ ನಮ್ಮ ಹಾಗೆಯೇ ಈ ಭೂಮಿಯ ಮೇಲೆ ಬದುಕಿ ಬಾಳಬೇಕು ಎನ್ನುವ ಕನಸಿದೆ ಎನ್ನುವುದನ್ನು ಕೆಲವೊಮ್ಮೆ ಮರೆತು ಬಿಡುತ್ತೇವೆ.

ಅಂತಹ ನೂರಾರು ಮಂಗಳಮುಖಿಯರನ್ನು ಒಟ್ಟಾಗಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಸದುದ್ದೇಶದೊಂದಿಗೆ ಅವರುಗಳು ಕೇವಲ ಭಿಕ್ಷಾಟನೆ, ಲೈಂಗಿಕ ಅಲ್ಪಸಂಖ್ಯಾತರಾಗಿ ಬಾಳುವೆ ನಡೆಸದೆ ಸಮಾಜದಲ್ಲಿ ತಾವೂ ಕೂಡ ಉನ್ನತ ಸ್ಥಾನದೊಂದಿಗೆ ಸಮಾಜಮುಖಿಯಾಗಿ ಸ್ವಾವಲಂಬಿ ಬದುಕು ನಡೆಸಬೇಕು ಎಂಬ ಸದುದ್ದೇಶದಿಂದಲೇ ಆರಂಭವಾಗಲಿದೆ ಪರಿವರ್ತನ ಚಾರಿಟೇಬಲ್ ಟ್ರಸ್ಟ್.

image002transgender-parivarthan-20160829-002

ಹಲವಾರು ವರ್ಷಗಳಿಂದ ಮಹಿಳೆಯರ ದೀನದಲಿತರ ಏಳಿಗೆಗಾಗಿ ಸಮಾಜದಲ್ಲಿ ಸೇವೆ ನೀಡುತ್ತಾ ಬಂದಿರುವ ಸಮಾಜಸೇವಕಿ ವಾಯ್ಲೆಟ್ ಪಿರೇರಾ ಅವರು ತಾವು ನಡೆಸುತ್ತಿರುವ ಮಾಧ್ಯಮದಲ್ಲಿ ಒಮ್ಮೆ ಮಂಗಳಮುಖಿಯರ  ಕುರಿತು ಸುದ್ದಿ ಮಾಡಿದಾಗ ಅವರುಗಳ ನಿಜವಾದ ಕಷ್ಟ ನೋವುಗಳನ್ನ ಹತ್ತಿರದಿಂದ ಅರಿತುಕೊಂಡರು. ಇಂತಹ ನೋವು ಸಂಕಟಗಳನ್ನು ಅನುಭವಿಸುತ್ತಿರುವ ಮಂಗಳಮುಖಿಯರಿಗಾಗಿ ಏನನ್ನಾದರೂ ಮಾಡಬೇಕು ಎನ್ನುವ ಸದುದ್ದೇಶದಿಂದ ಇನ್ನೋರ್ವ ಸಮಾಜ ಸೇವಕಿ ನಂದಾ ಪಾಯಸ್ ಅವರೊಂದಿಗೆ ಚರ್ಚಿಸಿ ಮಂಗಳಮುಖಿಯರಿಗಾಗಿಯೇ ಒಂದು ಚಾರಿಟೇಬಲ್ ಟ್ರಸ್ಟ್ ರಚಿಸುವ ನಿರ್ಧಾರವನ್ನು ಕೈಗೊಂಡರು. ಇದಕ್ಕಾಗಿ ನಗರವ್ಯಾಪ್ತಿಯಲ್ಲಿರುವ ಮಂಗಳಮುಖಿಯರನ್ನು ಒಗ್ಗೂಡಿಸಿ ಅವರು ಸಮಾಜದಲ್ಲಿ ಯಾವ ರೀತಿಯಲ್ಲಿ ಬದುಕಬೇಕು ಎನ್ನುವ ಮಾಹಿತಿ ನೀಡುವುದರೊಂದಿಗೆ ಟ್ರಸ್ಟ್ ರಚನೆಯ ಕುರಿತು ಅಭಿಪ್ರಾಯವನ್ನು ಅವರುಗಳ ಮುಂದಿಟ್ಟಾಗ ಸಂತೋಷದಿಂದ ಎಲ್ಲರೂ ಒಪ್ಪಿಕೊಂಡರು. ಅದರಂತೆ ಪರಿವರ್ತನ ಎಂಬ ಹೆಸರಿನೊಂದಿಗೆ ಟ್ರಸ್ಟ್ ಆರಂಭಿಸಲು ನಿರ್ಧರಿಸಲಾಯಿತು.

ಪರಿವರ್ತನ ಚಾರಿಟೇಬಲ್ ಟ್ರಸ್ಟನ್ನು ನೋಂದಾವಣೆ ಮಾಡುವುದರೊಂದಿಗೆ ಮಂಗಳಮುಖಯರು ಸಮಾಜದಲ್ಲಿ ಪರಿವರ್ತನೆಯನ್ನು ಕಾಣಲು ಬೇಕಾದ ವ್ಯವಸ್ಥೆಯನ್ನು ಟ್ರಸ್ಟಿನ ವತಿಯಿಂದ ಮಾಡಲು ನಿರ್ದಾರ ಮಾಡಲಾಯಿತು.ಇನ್ನು ಮುಂದೆ ನಮ್ಮ ಜೀವನದ ಕಷ್ಟಗಳಿಗೆ ಪರಿವರ್ತನೆ ಕಾಣುವುದರೊಂದಿಗೆ ಹೊಸ ವ್ಯಕ್ತಿಗಳಾಗಿ ನಾವು ಬದುಕಲು ಈ ಟ್ರಸ್ಟ್  ಸಹಾಯವಾಗಲಿದೆ.

ಪರಿವರ್ತನ ಚಾರೀಟೇಬಲ್ ಟ್ರಸ್ಟಿನ ಅಧಿಕೃತ ಉದ್ಘಾಟನೆಯನ್ನು ಅಗೋಸ್ತ್ 30, 10.30 ಕ್ಕೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಮಾಡಲು ನಿರ್ಧರಿಸಲಾಗಿದೆ.  ಕಾರ್ಯಕ್ರಮವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಲಿದ್ದು, ಮಂಗಳೂರು ದಕ್ಷಿಣ ಶಾಸಕ ಜೆ ಆರ್ ಲೋಬೊ ಟ್ರಸ್ಟನ್ನು ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಟ್ರಸ್ಟಿನ ಪದಾಧಿಕಾರಿಗಳ ಪದಗ್ರಹಣ ನೇರವೇರಿಸಲಿದ್ದು, ಮಂಗಳೂರು ನಗರ ಪೋಲಿಸ್ ಆಯುಕ್ತ ಚಂದ್ರಶೇಖರ್ ಟ್ರಸ್ಟಿನ ಲೋಗೊ ಅನಾವರಣಗೊಳಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಅಭಯಚಂದ್ರಜೈನ್, ಮೋಯ್ದಿನ್ ಬಾವ, ಜಿಲ್ಲಾಧಿಕಾರಿ ಡಾ ಜಗದೀಶ, ಜಿಲ್ಲಾಪಂಚಾಯತ್ ಸಿಇಓ ಶ್ರೀ ವಿದ್ಯಾ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪೂಂಜಾ, ಪೋಲಿಸ್ ವರಿಷ್ಠಾಧಿಕಾರಿ ಭೂಷಣ್ ಭೋರಸೆ, ಡಿಸಿಪಿಗಳಾದ ಸಂಜೀವ್ ಪಾಟೀಲ್, ಶಾಂತರಾಜು, ವಾರ್ತಾಧಿಕಾರಿ ಖಾದರ್ ಶಾ ಭಾಗವಹಿಸಲಿದ್ದಾರೆ.

ಸೋಮವಾರ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕಾರ್ಯಕ್ರದ ಕುರಿತು ಟ್ರಸ್ಟಿನ ಟ್ರಸ್ಟಿ ನಂದಾ ಪಾಯಸ್ ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಅಧ್ಯಕ್ಷೆ ರಾಣಿ, ಶ್ರೀನಿಧಿ, ಚಂದ್ರಕಲ ಮತ್ತು ಸಂಜನಾ ಉಪಸ್ಥಿತರಿದ್ದರು.

 


Spread the love

Exit mobile version