ಮಂಗಳಮುಖಿಯೋರ್ವರ ಮೇಲೆ ಹಲ್ಲೆ : ಪರಿವರ್ತನ ಟ್ರಸ್ಟಿನಿಂದ ಪೋಲಿಸ್ ಆಯುಕ್ತರಿಗೆ ಮನವಿ
ಮಂಗಳೂರು: ಮಂಗಳಮುಖಿಯೋರ್ವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಇದರ ಸದಸ್ಯರು ಮಂಗಳೂರು ಪೋಲಿಸ್ ಆಯುಕ್ತ ಚಂದ್ರಶೇಖರ್ ಅವರಿಗೆ ಮನವಿಯನ್ನು ಸಲ್ಲಿಸಿದರು.
ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಸೇರಿದಂತೆ 20 ಮಂದಿ ಸದಸ್ಯರು ಚಂದ್ರ ಶೇಖರ್ ಅವರನ್ನು ಭೇಟಿಯಾಗಿ ಮಂಗಳಮುಖಿಯರ ರಕ್ಷಣೆಗೆ ಒತ್ತಾಯಿಸಿ ಮನವಿಯನ್ನು ಸಲ್ಲಿಸಲಾಯಿತು.
ಮನವಿಯನ್ನು ಸ್ವೀಕರಿಸಿದ ಆಯುಕ್ತರು ಘಟನೆಯ ಕುರಿತು ತನಿಖೆ ನಡೆಸುವುದಾಗಿ ಆಶ್ವಾಸನೆ ನೀಡಿದರಲ್ಲದೆ ಎಸಿಪಿ ಉದಯ್ ನಾಯಕ್ ಅವರಿಗೆ ಘಟನೆಯ ತನಿಖೆ ನಡೆಸುವಂತೆ ನಿರ್ದೇಶನ ನೀಡಿದರು.
ಘಟನೆಯ ವಿವರ: ಘಟನೆಯ ಕುರಿತು ಮಾಹಿತಿ ನೀಡಿದ ಝೋಯಾ ಎಂಬ ಸದಸ್ಯೆ ಸಪ್ಟೆಂಬರ್ 29 ರಂದು ರಾತ್ರಿ 9.30 ರ ಸುಮಾರಿಗೆ ನಾನು ಮತ್ತು ಸಂಧ್ಯಾ ಎನ್ನುವ ಇನ್ನೋರ್ವ ಮಂಗಳ ಮುಖಿ ಪಂಪ್ ವೆಲ್ ಸರ್ಕಲ್ ನಲ್ಲಿ ಕೂಳೂರು ಕಡೆಗೆ ತೆರಳುವುದುದಕ್ಕಾಗಿ ವಾಹನಕ್ಕಾಗಿ ಕಾಯುತ್ತಿದ್ದು, ಅಲ್ಲಿಗೆ ಬಂದ ಮೂರು ಮಂದಿ ಪೋಲಿಸರು ತಮ್ಮನ್ನು ಪಿಸಿಆರ್ ವಾಹನದಲ್ಲಿ ಹಾಕಿಕೊಂಡು ಹೊಡೆಯಲು ಆರಂಭಿಸಿದರು. ಸಂಧ್ಯಾ ಪೋಲಿಸರಿಗೆ ಹೊಡೆಯದಂತೆ ವಿನಂತಿಸಿದ್ದು ಬಳಿಕ ಪೋಲಿಸರು ಲಾಠಿಯಿಂದ ಹೊಡೆಯಲು ಆರಂಭಿಸಿದರು. ಸಂಧ್ಯಾ ಡಯಾಬೆಟಿಸ್ ತೊಂದರೆಯಿಂದ ಬಳಲುತ್ತಿದ್ದು, ಅಲ್ಲಿಂದ ನಾವು ತಪ್ಪಿಸಕೊಂಡು ಒಡಿದ ವೇಳೆ ಕಾಲಿಗೆ ಗಾಯ ಮಾಡಿಕೊಂಡಿದ್ದಾಳೆ ಎಂದರು.
ಪರಿವರ್ತನ ಟ್ರಸ್ಟಿನ ಸದಸ್ಯೆ ಸಿಮ್ರಾನ್ ಮಾತನಾಡಿ ಪೋಲಿಸರು ನಮ್ಮನ್ನು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದು, ಮನೆಯಲ್ಲಿ ನಮ್ಮ ಹೆತ್ತವರು ನಿಲ್ಲಲು ಬಿಡುವುದಿಲ್ಲ ಇದರಿಂದ ಭಿಕ್ಷೆ ಬೇಡುವುದು ಹಾಗೂ ಸೆಕ್ಸ್ ವರ್ಕ್ ಮಾಡುವುದು ನಮಗೆ ಅನಿವಾರ್ಯವಾಗಿದೆ. ನಮ್ಮ ಟ್ರಸ್ಟ್ ಆರಂಭವಾಗಿ ಒಂದು ತಿಂಗಳು ಕಳೆದಿದೆ ಅಷ್ಟೆ, ನಾವು ಸರಕಾರದಿಂದ ದೊರೆಯುವ ಸೌಲಭ್ಯಗಳಿಂದ ಸ್ವಾಭಿಮಾನಿಗಳಾಗಿ ಬದುಕಲು ಪ್ರಯತ್ನಿಸುತ್ತಿದ್ದೇವೆ. ಬದುಕುವುದಕ್ಕಾಗಿ ಭಿಕ್ಷೆ ಬೇಡುತ್ತಿದ್ದು, ನಾವು ತಪ್ಪು ಮಾಡಿದರೆ ಶಿಕ್ಷಿಸಿ ಅದನ್ನು ಬಿಟ್ಟು ವಾಹನಕ್ಕೆ ಕಾಯುವಾಗ ಯಾಕೆ ಹೊಡೆಯಬೇಕು? ವಾಹನಕ್ಕೆ ಕಾಯುವ ಪ್ರತಿಯೊಬ್ಬರಿಗೂ ಪೋಲಿಸರು ಹೊಡೆಯುತ್ತಾರೋ ಎಂದು ಪ್ರಶ್ನಿಸಿದರು.
ನಾವು ಸಹ ಮನುಷ್ಯರು ನಮಗೂ ಬದುಕಲು ಹಣ ಬೇಕು. ಇನ್ನೂ ಕೂಡ ಜನ ನಮ್ಮನ್ನು ನೋಡುವ ಸ್ಥಿತಿ ಬದಲಾಗಿಲ್ಲ. ನಮಗೆ ಉತ್ತಮ ಕೆಲಸ ಸಿಕ್ಕರೆ ನಾವು ಮಾಡಲು ಸಿದ್ದ. ಕಳೆದ ತಿಂಗಳು ಕೂಡ ಇಬ್ಬರಿಗೆ ಪೋಲಿಸರು ಹೊಡೆದಿದ್ದಾರೆ ಕಾನೂನು ಪಾಲಕರೆ ರಕ್ಷಣೆ ನೀಡದೆಹೋದರೆ ನಾವು ಹೇಗೆ ಬದುಕಲಿ ಎಂದು ಪ್ರಶ್ನಿಸುತ್ತಾರೆ ನಯನಾ.
ಉಪಾಧ್ಯಕ್ಷೆ ಸಂಧ್ಯಾ, ಕೋಶಾಧಿಕಾರಿ ಶ್ರೀನಿಧಿ, ಜೋಯಾ, ಝರೀನಾ, ಅರುಂದತಿ, ಸಂಧ್ಯಾ ಇತರರು ಉಪಸ್ಥಿತರಿದ್ದರು.