Home Mangalorean News Kannada News ಮಂಗಳೂರಿಗೆ ಬಂದಿದ್ದು ಮೆರ್ಸ್ ಅಲ್ಲ : ವೈದ್ಯರ ಸ್ಪಷ್ಟನೆ

ಮಂಗಳೂರಿಗೆ ಬಂದಿದ್ದು ಮೆರ್ಸ್ ಅಲ್ಲ : ವೈದ್ಯರ ಸ್ಪಷ್ಟನೆ

Spread the love

ಮಂಗಳೂರು: ಮಂಗಳೂರಿನಲ್ಲಿ ಮಾರಕ ರೋಗವೊಂದು ಹರಡಿದೆ ಎಂಬ ವದಂತಿ ಇಡೀ ರಾಜ್ಯದಲ್ಲಿ ಶನಿವಾರ ಗೊಂದಲ ಹಾಗೂ ಕೋಲಾಹಲ ಉಂಟು ಮಾಡಿತು. ಆದರೆ, ವೈದ್ಯರು ಇದು ಮಾರಕ ರೋಗ ಅಲ್ಲ, ಬದಲಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸೋಂಕು ಎಂದು ಸ್ಪಷ್ಟನೆ ನೀಡುವ ಮೂಲಕ ಆತಂಕ ನಿವಾರಣೆಯಾಗಿದೆ.

ಆತಂಕ ಯಾಕೆ?: ನಗರದ ಬಲ್ಮಠ- ಬೆಂದೂರ್ ರಸ್ತೆಯ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್‌ನ ವಿದ್ಯಾರ್ಥಿಗಳಲ್ಲಿ ಕೆಲವು ದಿನಗಳಿಂದ ಎಂಆರ್‌ಎಸ್‌ಎ (ಮೆಥಿಸಿಲಿನ್ ರೆಸಿಸ್ಟೆಂಟ್ ಸ್ಟಫಲೋಕಾಕಸ್ ಆರಿಯಸ್) ಸೋಂಕು ಕಾಣಿಸಿಕೊಂಡಿತ್ತು. ಇದಕ್ಕೆ ಆಡಳಿತ ವರ್ಗ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ನರ್ಸಿಂಗ್ ವಿದ್ಯಾರ್ಥಿಗಳು ಶನಿವಾರ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರು.

ಸಂಸ್ಥೆಯ ವಿದ್ಯಾರ್ಥಿಗಳಿಗೆ ತಪಾಸಣೆ ವೇಳೆ ಸುಮಾರು 60 ಮಂದಿಯಲ್ಲಿ ಎಂಆರ್‌ಎಸ್‌ಎ ಪಾಸಿಟಿವ್ ಕಂಡುಬಂದಿದ್ದು, ಇದು ಹರಡುವುದು ತಪ್ಪಿಸುವಲ್ಲಿ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಸಂಸ್ಥೆ ವಿಫಲವಾಗಿದೆ. ನಾಲ್ಕು ದಿನದಿಂದ ಹೇಳುತ್ತಿದ್ದರೂ ಗಮನ ನೀಡುತ್ತಿಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ದೂರಿದರು.

ಗೊಂದಲಕ್ಕೆ ಕಾರಣ: ಪ್ರತಿಭಟನೆಯನ್ನು ಆಧಾರವಾಗಿ ಇಟ್ಟುಕೊಂಡು ‘ಮಂಗಳೂರಿನಲ್ಲಿ ಮಹಾ ಮಾರಿ ಕಾಯಿಲೆ ಕಾಣಿಸಿಕೊಂಡಿದೆ, ಇದು ಮಾರಣಾಂತಿಕ, ಗಾಳಿಯಲ್ಲಿ ಹರಡುತ್ತದೆ’ ಮುಂತಾಗಿ ಕೆಲವು ದೃಶ್ಯ ಮಾಧ್ಯಮಗಳು ರಾಜ್ಯಾದ್ಯಂತ ವರದಿ ಬಿತ್ತರಿಸಿದವು. ಇದು ತೀವ್ರ ಗೊಂದಲಕ್ಕೆ ಕಾರಣವಾಯಿತು.

ಇನ್ನು ಕೆಲವು ಮಾಧ್ಯಮಗಳಲ್ಲಿ ಇದು ಮಧ್ಯ ಪ್ರಾಚ್ಯದಲ್ಲಿ ಕಾಣಿಸಿಕೊಂಡಿರುವ ಎಂಇಆರ್‌ಎಸ್ ಎಂದು ವರದಿ ಮಾಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಯಿತು. ಈ ಘಟನೆ ನಡೆದ ತಕ್ಷಣ ಜಿಲ್ಲಾ ಆರೋಗ್ಯ ಅಧಿಕಾರಿ ಸೇರಿದಂತೆ ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಇದು ಎಂಇಆರ್‌ಎಸ್ ಅಲ್ಲ, ಬದಲಾಗಿ ಎಂಆರ್‌ಎಸ್‌ಎ ಎಂಬ ಮಾಹಿತಿ ನೀಡಿದರು.

ajhospital-mrsa-20150613-003

ವೈದ್ಯರ ಸ್ಪಷ್ಟನೆ: ಈ ಗೊಂದಲ ಕುರಿತಂತೆ ಸಂಜೆ ವೇಳೆಗೆ ಲಕ್ಷ್ಮೀ ಕಾಲೇಜ್ ಆಫ್ ನರ್ಸಿಂಗ್‌ನ ಆಡಳಿತ ಸಂಸ್ಥೆಯಾದ ಎ.ಜೆ.ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಇದರಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ವೈದ್ಯರ ತಂಡ, ಎಂಆರ್‌ಎಸ್‌ಎ ಸೋಂಕು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಇದು ಮಾರಣಾಂತಿ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್ ಮಾತನಾಡಿ, ಎಂಇಆರ್‌ಎಸ್ ಸೋಂಕು ತಡೆಯಲು ಕೆಲವು ವರ್ಷಗಳಿಂದ ವಿಮಾನ ನಿಲ್ದಾಣದಲ್ಲಿ ತಪಾಸಣೆ ವ್ಯವಸ್ಥೆ ಮಾಡಿದ್ದು, ಇಷ್ಟರ ತನಕ ಯಾರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ. ಇದೀಗ ನರ್ಸಿಂಗ್ ಕಾಲೇಜಿನಲ್ಲಿ ಪತ್ತೆಯಾಗಿರುವ ಎಂಆರ್‌ಎಸ್‌ಎ ಯಾವುದೇ ಮಾರಣಾಂತಿಕ ಅಲ್ಲ. ಸಂವಹನದ ಕೊರತೆಯಿಂದ ಗೊಂದಲ ಸೃಷ್ಟಿಯಾಗಿದ್ದು, ಯಾರೂ ಭಯ, ಆತಂಕಪಡುವ ಅಗತ್ಯವಿಲ್ಲ ಎಂದರು.

ಎ.ಜೆ.ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಮಾತನಾಡಿ, ನರ್ಸಿಂಗ್ ಕಾಲೇಜಿನ ಯಾವುದೇ ವಿದ್ಯಾರ್ಥಿ ಚಿಕಿತ್ಸೆಗೆ ದಾಖಲಾಗಿಲ್ಲ. ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ತಪಾಸಣೆ ಮಾಡುವ ಕ್ರಮವಿದೆ. ಹಿಂದೆಯೂ ಎಂಆರ್‌ಎಸ್‌ಎ ಪಾಸಿಟಿವ್ ಪತ್ತೆಯಾಗಿತ್ತು. ಅದೇ ಮಾದರಿಯಲ್ಲಿ ಈಗಲೂ ಕೆಲವು ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದಂತೆ ಒಂದು ವಾರದ ರಜೆ ನೀಡಲಾಗಿದೆ. ಈ ಗೊಂದಲ ಯಾಕೆ ಸೃಷ್ಟಿಯಾಯಿತು ಎಂದು ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದರು.

ಭಯ ಬೇಡ: ಪ್ರಸಿದ್ಧ ವೈದ್ಯ ಡಾ.ಶ್ರೀನಿವಾಸ ಕಕ್ಕಿಲ್ಲಾಯ ಮಾತನಾಡಿ, ಮಂಗಳೂರಿನಲ್ಲಿ ಮಧ್ಯ ಪ್ರಾಚ್ಯದ ಶ್ವಾಸಾಂಗ ಸೋಂಕಿನ ವೈರಸ್(ಎಂಇಆರ್‌ಎಸ್) ಪತ್ತೆಯಾಗಿಲ್ಲ. ಯಾರನ್ನೂ ಈ ವೈರಸ್ ಸೋಂಕಿನ ಪರೀಕ್ಷೆಗೆ ಒಳಪಡಿಸಲಾಗಿಲ್ಲ, ಅದನ್ನು ದೃಢಪಡಿಸುವ ಯಾವುದೇ ವರದಿಯೂ ಇಲ್ಲ. ವಿದ್ಯಾರ್ಥಿಯಲ್ಲಿ ಎಂಆರ್‌ಎಸ್‌ಎ (ಮೆಥಿಸಿಲಿನ್ ರೆಸಿಸ್ಟೆಂಟ್ ಸ್ಟಫಲೋಕಾಕಸ್ ಆರಿಯಸ್) ಬ್ಯಾಕ್ಟೀರಿಯಾದ ಸೋಂಕು ಪತ್ತೆಯಾಗಿದೆ. ಈ ಬ್ಯಾಕ್ಟೀರಿಯಾ ಹೊಸದೇನೂ ಅಲ್ಲ; ಅತ್ಯಂತ ಸಾಮಾನ್ಯವಾಗಿರುವ ‘ರೋಮ ಕುರು’ವನ್ನು ಉಂಟು ಮಾಡುವ ಬ್ಯಾಕ್ಟೀರಿಯಾ ಅದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮೆಥಿಸಿಲಿನ್ ಎಂಬ ಪ್ರತಿಜೈವಿಕಕ್ಕೆ ಬಗ್ಗದ ಆ ಬ್ಯಾಕ್ಟೀರಿಯಾ (ಎಂಆರ್‌ಎಸ್‌ಎ ) ಕಂಡುಬರುತ್ತಿದ್ದು, ಅದನ್ನು ಗುಣಪಡಿಸಬಲ್ಲ ಇತರ ಪ್ರತಿಜೈವಿಕಗಳೂ ಲಭ್ಯವಿವೆ. ಈ ಎಂಆರ್‌ಎಸ್‌ಎ ಒಬ್ಬರಿಂದೊಬ್ಬರಿಗೆ ಹಾಗೇ ಹರಡುವ ಸಾಂಕ್ರಾಮಿಕವೂ ಅಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಸಾಂಕ್ರಾಮಿಕ ರೋಗಗಳ ಸರ್ವೇಕ್ಷಣಾಧಿಕಾರಿ ಡಾ.ರಾಜೇಶ್, ಸೂಕ್ಷ್ಮಜೀವಾಣುಶಾಸ್ತ್ರ ವಿಭಾಗದ ಡಾ.ಅನಿತಾ ಕೆ.ಪಿ., ಡಾ.ರೂಪಾ ಭಂಡಾರಿ ಉಪಸ್ಥಿತರಿದ್ದು, ಪೂರಕ ಮಾಹಿತಿ ನೀಡಿದರು.

ಎಂಆರ್‌ಎಸ್‌ಎ ಅಂದರೇನು?: * ಎಂಆರ್‌ಎಸ್‌ಎ (ಮೆಥಿಸಿಲಿನ್ ರೆಸಿಸ್ಸೆಂಟ ಸ್ಟಾಫಿಲೋಕೋಕಸ್ ಓರಸ್- Methicillin resistant staphylococcus aureus). ). ಮಾನವ ದೇಹದಲ್ಲಿ ಸಾಮಾನ್ಯವಾಗಿ ಲಕ್ಷಾಂತರ ಬ್ಯಾಕ್ಟೀರಿಯಾಗಳು ಮನೆ ಮಾಡಿರುತ್ತವೆ. ಅಂತಹ ಒಂದು ಬ್ಯಾಕ್ಟೀರಿಯಾ ಸ್ಟಾಫಿಲೋಕೋಕಸ್ ಓರಸ್ ( (staphylococcus aureus). ಎಂಆರ್‌ಎಸ್‌ಎ ಅಥವಾ ((Methicillin resistant staphylococcus aureus)) ಎಂಬುದು ಸ್ಟಾಫಿಲೋಕೋಕಸ್ ಓರಸ್‌ನ ಒಂದು ಪ್ರಭೇದವಾಗಿದೆ. ಇದು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಕಾಯಿಲೆಗಳಿಗೆ ನೀಡುವ ಸಾಮಾನ್ಯ ಔಷಧಗಳಿಗೆ ಪ್ರತಿರೋಧ ಶಕ್ತಿಯನ್ನು ಬೆಳೆಸಿಕೊಂಡಿದೆ. ಸ್ಟಾಫ್ (Staph), ಓರಸ್ (Aureus) ಮತ್ತು ಎಂಆರ್‌ಎಸ್‌ಎ ಪ್ರಭೇದದ ಬ್ಯಾಕ್ಟೀರಿಯಾಗಳು ಮಾನವ ದೇಹದಲ್ಲಿ ವಸಾಹತು (Colonization) ಸ್ಥಾಪಿಸಿಕೊಳ್ಳುವುದು ಸಾಮಾನ್ಯ ಸಂಗತಿ. ಅವುಗಳು ಸೋಂಕು ಹರಡುವ ವಾಹಕಗಳಲ್ಲ. ಇನ್‌ಫೆಕ್ಷನ್ (ಸೋಂಕು) ಅಂದರೆ- ಬ್ಯಾಕ್ಟೀರಿಯಾದಿಂದ ಹಾನಿಗೀಡಾದ ಅಂಗಾಂಶಗಳಲ್ಲಿ ಉರಿ ಅಥವಾ ಅಸ್ವಸ್ಥತೆಯ ವೈದ್ಯಕೀಯ ಲಕ್ಷಣಗಳು. ಇದು ಸಾಮಾನ್ಯವಾಗಿ ಮನುಷ್ಯನ ಮೂಗು, ಹೊಕ್ಕುಳ, ಕಂಕುಳ ಮುಂತಾದ ಜಾಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎಂಆರ್‌ಎಸ್‌ಎ ಬ್ಯಾಕ್ಟೀರಿಯಾಗಳು ದೇಹದಲ್ಲಿ ನೆಲೆಸಿದ ಮಾತ್ರಕ್ಕೆ ಅದು ಸೋಂಕಿನ ಲಕ್ಷಣವಲ್ಲಅಥವಾ ಆರೋಗ್ಯವಂತ ವ್ಯಕ್ತಿಗೆ ಅದರಿಂದ ಯಾವುದೇ ಅಪಾಯವೂ ಇಲ್ಲ. ಈ ಬ್ಯಾಕ್ಟೀರಿಯಾಗಳು ನೆಲೆಸಿದ್ದರೂ ಪೂರ್ಣ ಆರೋಗ್ಯವಂತರಾಗಿರುವ ಶೇ.23-30ರಷ್ಟು ವ್ಯಕ್ತಿಗಳನ್ನು ಕಾಣಬಹುದು. ಆರೋಗ್ಯ ಕಾರ್ಯಕರ್ತರ ಪೈಕಿ ಶೇ.50-74ರಷ್ಟು ಮಂದಿಯಲ್ಲಿ ಈ ಬ್ಯಾಕ್ಟೀರಿಯಾ ನೆಲೆಸಿರುತ್ತದೆ. ಈ ರೀತಿ ಬ್ಯಾಕ್ಟೀರಿಯಾ ದೇಹದಲ್ಲಿ ಕಾಣಿಸಿಕೊಂಡ ಮಾತ್ರಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಎಷ್ಟೋ ಮಂದಿಗೆ ಈ ಬ್ಯಾಕ್ಟೀರಿಯಾ ತಮ್ಮ ದೇಹದಲ್ಲಿ ನೆಲೆಸಿದೆ ಎಂಬುದು ಗೊತ್ತೇ ಇರುವುದಿಲ್ಲ. ಏಕೆಂದರೆ ಅವರಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಂಡಿರುವುದಿಲ್ಲ ಎಂದು ಎ.ಜೆ.ಆಸ್ಪತ್ರೆಯ ಡೀನ್ ಡಾ.ರಮೇಶ್ ಪೈ ವಿವರಿಸಿದರು. ತಡೆ ಹೇಗೆ ?: ಆಗಾಗ ಕೈಗಳನ್ನು ತೊಳೆದುಕೊಳ್ಳುವ ಮೂಲಕ ಸ್ವಚ್ಛತೆಯನ್ನು ಸರಿಯಾಗಿ ಕಾಪಾಡಿಕೊಳ್ಳುವುದೊಂದೇ ಎಂಆರ್‌ಎಸ್‌ಎ ಹರಡುವುದನ್ನು ತಡೆಯಲು ಇರುವ ಏಕೈಕ ಪರಿಣಾಮಕಾರಿ ವಿಧಾನ.

ಆರೋಗ್ಯ ಸಚಿವ ಯು ಟಿ ಖಾದರ್ ಪ್ರತಿಕ್ರಿಯೆ ನೀಡಿ ಮಂಗಳೂರಿನಲ್ಲಿ ವರದಿಯಾಗಿರುವ ಎಂಆರ್‌ಎಸ್‌ಎ ಸೊಂಕು, ಚರ್ಮ ಸಂಬಂಧಿಯಾಗಿದ್ದು, ಚಿಕಿತ್ಸೆಯಿಂದ ಗುಣಪಡಿಸಬಹುದು. ಇದು ಎಂಇಆರ್‌ಎಸ್ ಎಂದು ತಪ್ಪಾಗಿ ಗ್ರಹಿಸಲಾಗಿದೆ. ಈ ಸಂಬಂಧ ಮಂಗಳೂರು, ಬೆಂಗಳೂರಿನಲ್ಲಿ, ವಿಮಾನ ನಿಲ್ದಾಣಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ. ಮಂಗಳೂರಿನಲ್ಲಿ ಎಂಆರ್‌ಎಸ್‌ಎ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಜಾಗರೂಕತೆಯಿಂದ ಇದೆ. ಪರಿಸ್ಥಿತಿ ಮೇಲೆ ನಿಗಾ ಇಟ್ಟಿದೆ. ರೋಗ ಪತ್ತೆಯಾಗಿರುವ ಕಾಲೇಜಿಗೆ ಇಲಾಖಾ ತಂಡ ಭೇಟಿ ನೀಡಿದೆ. ವಿದ್ಯಾರ್ಥಿಗಳ ಬಗ್ಗೆ ಎಲ್ಲ ರೀತಿಯ ಜವಾಬ್ದಾರಿ ವಹಿಸುವಂತೆ ಸೂಚಿಸಲಾಗಿದೆ ಎಂದರು.


Spread the love

Exit mobile version