ಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಚಾಲಿತ ದಳ: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಮಂಗಳೂರು: ಮಂಗಳೂರು ಉಪವಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಯನ್ನು ಪರಿಣಾಮಕಾರಿಯಾಗಿ ತಡೆಯಲು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಚಾಲಿತ ದಳವನ್ನು ರಚಿಸಿ ಆದೇಶ ನೀಡಿದ್ದಾರೆ.
ಚಾಲಿತ ದಳವು ಅನಧಿಕೃತ ಮರಳುಗಾರಿಕೆ ಮತ್ತು ಸಾಗಣಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಸರಕಾರದ ಆದೇಶವನ್ನು ಪಾಲನೆ ಮಾಡದೆ ರಾತ್ರಿ ವೇಳೆ ಅಕ್ರಮವಾಗಿ ಮರಳು ಗಣಿಗಾರಿಕೆ, ದಾಸ್ತಾನು ಮತ್ತು ಸಾಗಾಟ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಜಿಲ್ಲಾಧಿಕಾರಿ ಕಚೇರಿಗೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ಅಕ್ರಮ ಗಣಿಗಾರಿಕೆಯನ್ನು ತಡೆಯಲು ತಂಡ ವನ್ನು ರಚಿಸಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಭೂ ವೈಜ್ಞಾನಿಕ ಮತ್ತು ಆಡಳಿತಾತ್ಮಕ ಹಿನ್ನೆಲೆಯನ್ನು ಪರಿಗಣಿಸಿ ಸರಕಾರಿ ಮತ್ತು ಸಾರ್ವಜನಿಕ ನಿರ್ಮಾಣ ಕಾಮಗಾರಿಗಳಿಗೆ ನಿಯಮಿತವಾಗಿ ಮತ್ತು ಸುಲಭವಾಗಿ ಕೈಗೆಟುಕುವ ದರದಲ್ಲಿ ಮರಳು ದೊರೆಯುವಂತೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ವೈಜ್ಞಾನಿಕವಾಗಿ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಹೊಸ ಮರಳು ನೀತಿ -2020ನ್ನು ಜಾರಿಗೊಳಿಸಲಾಗುತ್ತದೆ. ಕರ್ನಾಟಕ ಉಪ ಖನಿಜ ರಿಯಾಯತಿ ನಿಯಮಗಳು 1994ರಂತೆ 31 ಆರ್ ಮತ್ತು 31 ಝೆಡ್ ಎಲ್ ವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮರಳು ಗಣಿಗಾರಿಕೆಯನ್ನು ಏಲಂ ಮೂಲಕ ಮಾರಾಟ ಮಾಡಲು ಅವಕಾಶವಿರುತ್ತದೆ. ಅದರಂತೆ ವಾರ್ಷಿಕವಾಗಿ ಏಲಂ ಮಾಡಿ ಮರಳು ಗಣಿಗಾರಿಕೆಗೆ ಜಿಲ್ಲಾ ಸಮಿತಿಯು ಅನುಮತಿ ನೀಡಲಾಗಿರುತ್ತದೆ.
ಅಡ್ಡೂರು ಮೂಳೂರಿನಿಂದ ಗುರುಪುರ ಸೇತುವೆ ವರೆಗೆ(ದೋಣಿಂಜೆ,ಕೆಳಗಿನ ಕೆರೆ, ಫಲ್ಗುಣಿ ನದಿ ತೀರ, ಮಲ್ಲೂರು ಮತ್ತು ಮಳವೂರು) ಈ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಗಾಣಿಕೆಯನ್ನು ತಡೆಗಟ್ಟಲು ರಚಿಸಲಾದ ಸಮಿತಿಗೆ ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಮರನಾಥ ಜೈನ್ ನೋಡಲ್ ಅಧಿಕಾರಿ ಆಗಿರುತ್ತಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಗಿರೀಶ್ ಮೋಹನ್, ಬಜ್ಪೆ ಪೊಲೀಸ್ ಠಾಣೆಯ ನಿರೀಕ್ಷಕ ಸಂದೀಪ್ ಜಿಎಸ್, ಗುರುಪುರ ಹೋಬಳಿಯ ಕಂದಾಯ ನಿರೀಕ್ಷಕ ಪೂರ್ಣಚಂದ್ರ ತೇಜಸ್ವಿ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರೀತಮ್, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ಸಮಿತಿಯ ಸದಸ್ಯರು.
ಗುರುಪುರ ಸೇತುವೆಯಿಂದ ಆದ್ಯಪಾಡಿ ತನಕ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ನೇಮಕ ಮಾಡಲಾದ ಸಮಿತಿಗೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸಯ್ಯದ್ ಅಥಿಕ್ ನೋಡಲ್ ಅಧಿಕಾರಿ. ಮೂಡಬಿದ್ರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಸತ್ಯಭಾಮ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಕುಮಾರ್, ಸಣ್ಣ ನೀರಾವರಿ ಇಲಾಖೆಯ ಎಇಇ ತಾಜುದ್ದೀನ್, ಗುರುಪರ ಹೋಬಳಿ ಉಪತಹಶೀಲ್ದಾರ್ ಸ್ಟೀಫನ್ ಮತ್ತು ಮಂಗಳೂರು ತಾ.ಪಂ. ಇಒ ಮಹೇಶ್ ಕುಮಾರ್ ಸದಸ್ಯರಾಗಿದ್ದಾರೆ.
ತುಂಬೆ -ಅರ್ಕುಳ-ಫರಂಗಿಪೇಟೆ-ವಳಚ್ಚಿಲ್-ಅಡ್ಯಾರು -ಕಣ್ಣೂರು -ಪಡೀಲ್ ಪ್ರದೇಶಕ್ಕೆ ನಿಯೋಜಿಸಲಾದ ತಂಡಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ನೋಡಲ್ ಅಧಿಕಾರಿ. ಬಂಟ್ವಾಳದ ಭೂ ವಿಜ್ಞಾನಿ ಡಾ ಮಹದೇಶ್ವರ ಎಚ್‌ಎಸ್, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಶಿವಕುಮಾರ್, ಬಂಟ್ವಾಳ ಉಪತಹಶೀಲ್ದಾರ್ ದಿವಾಕರ, ಬಂಟ್ವಾಳ ಉಪ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಚರಣ್, ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನೀಲ್ ಜೆ.ಬಿ. ಡಿ ಸೋಜ (ಸದಸ್ಯರು.)
ಕೊಟ್ಟಾರ, ಸುರತ್ಕಲ್ , ಮುಕ್ಕ ಪಾವಂಜೆ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದ ತಡೆಗೆ ನಿಯೋಜಿಸಲಾದ ಅಧಿಕಾರಿಗಳ ತಂಡಕ್ಕೆ ಪಣಂಬೂರು ಉಪ ಪೊಲೀಸ್ ಆಯುಕ್ತ ಶ್ರೀಕಾಂತ್ ನೋಡಲ್ ಅಧಿಕಾರಿ. ಮುಲ್ಕಿ ಭೂ ವಿಜ್ಞಾನಿ ಸತ್ಯಭಾಮ, ಸುರತ್ಕಲ್ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಪರಿಸರ ಅಧಿಕಾರಿ ಪ್ರಕಾಶ್, ಸುರತ್ಕಲ್ ಹೋಬಳಿ ಉಪತಹಶೀಲ್ದಾರ್ ನವೀನ್, ಮನಪಾ ಎಇಇ ರಾಜೇಶ್ ಸದಸ್ಯರು.
ಬೋಳೂರು , ಜೆಪ್ಪಿನಮೊಗರು, ಕಣ್ಣೂರು, ಕೂಳೂರು , ಸುಲ್ತಾನ್ ಬತ್ತೇರಿ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಗಟ್ಟಲು ನಿಯೋಜಿಸಲಾದ ಅಧಿಕಾರಿಗಳ ತಂಡಕ್ಕೆ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ವಿ ಪಾಟೀಲ್ ನೋಡಲ್ ಅಧಿಕಾರಿಯಾಗಿದ್ದಾರೆ. ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ ಮಲ್ಲಾಡ್, ಉಳ್ಳಾಲ ಗಣಿ ಇಲಾಖೆಯ ಭೂ ವಿಜ್ಞಾನಿ ಗಿರೀಶ್ ಮೋಹನ್, ಪಾಂಡೇಶ್ವರ ಠಾಣೆ ಪೊಲೀಸ್ ನಿರೀಕ್ಷಕ ಗುರುರಾಜ್, ಮಂಗಳೂರು ತಾಲೂಕು ಉಪತಹಶೀಲ್ದಾರ್ ಜಯಂತ್ ಮತ್ತು ಮಂಗಳೂರು ಉಪವಲಯ ಅರಣ್ಯಾಧಿಕಾರಿ ಮೋಹನ್ ಸದಸ್ಯರಾಗಿದ್ದಾರೆ.