Home Mangalorean News Kannada News ಮಂಗಳೂರಿನಲ್ಲಿ ಪತ್ತೆಯಾಗಿದ್ದು ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಮಾಜಿ ಸಿಎಂ ಕುಮಾರಸ್ವಾಮಿ

ಮಂಗಳೂರಿನಲ್ಲಿ ಪತ್ತೆಯಾಗಿದ್ದು ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಮಾಜಿ ಸಿಎಂ ಕುಮಾರಸ್ವಾಮಿ

Spread the love

ಮಂಗಳೂರಿನಲ್ಲಿ ಪತ್ತೆಯಾಗಿದ್ದು ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಮಾಜಿ ಸಿಎಂ ಕುಮಾರಸ್ವಾಮಿ

ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದಲ್ಲಿನ ಬಾಂಬ್ ಪತ್ತೆ ಪ್ರಕರಣ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಪೊಲೀಸರು ಜಾಗೃತಿಗಾಗಿ ಮಾಡಿಸುವ ಅಣಕು ಪ್ರದರ್ಶನ‌ವಿದ್ದಂತಿದ್ದು, ಹುಡುಗಾಟದಂತೆ ಕಾಣುತ್ತಿದೆ. ಇಂತಹ ವಿಷಯದಲ್ಲಿ ಸರ್ಕಾರ ಘನತೆ ಮತ್ತು ಗಂಭೀರತೆಯಿಂದ ವರ್ತಿಸಬೇಕು ಎಂದು ಮಾಜಿ ಮುಖ್ಯಮಂತ್ರಿ. ಜೆಡಿಎಸ್ ಮುಖಂಡ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಜನತೆಯ ಸರ್ಕಾರ ಇರಬೇಕು. ಆದರೆ ಇಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್ತಿನ ಅಣತಿಯಂತೆ ಸರ್ಕಾರವನ್ನು ನಡೆಸಬಾರದು. ಜನರ ಭಾವನೆಗಳ ಜತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರನ್ನು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಂಬ್ ಪತ್ತೆ ಪ್ರಕರಣದಿಂದ ಸಮಾಜ ಸಮಾಜಗಳ ನಡುವೆ ಆತಂಕ ಕಂದಕ ಸೃಷ್ಟಿಸುವ ಕೆಲಸವಾಗುತ್ತಿದೆ. ಮಂಗಳೂರು ಬಾಂಬ್ ಪ್ರಕರಣದ ಬಗ್ಗೆ ಪೊಲೀಸರು ಸತ್ಯಾಸತ್ಯತೆ ಹೇಳಬೇಕು. ವಾಸ್ತವಾಂಶವನ್ನು ಜನರ ಮುಂದಿಡಬೇಕು. ಯಾವುದೇ ಕಾರಣಕ್ಕೂ ಸುಳ್ಳುಕಥೆ ಹೇಳಬಾರದು. ಸಜೀವ ಬಾಂಬ್ ನಿಷ್ಕ್ರಿಯದ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಜನತೆಗೆ ವಾಸ್ತವದ ಅರಿವಾಗುತ್ತಿದೆ ಎಂದರು.

ಹತ್ತು ಕೆಜಿ ತೂಕದ ಸಜೀವ ಬಾಂಬ್ ಮಂಗಳೂರು ಸೇರಿದಂತೆ ರಾಜ್ಯದ ಜನರನ್ನು ಗಾಬರಿಗೊಳಿಸಿದೆ. ಕಬ್ಬಿಣ್ಣದ ಪೆಟ್ಟಿಗೆಯಲ್ಲಿ ಪಟಾಕಿ ತಯಾರಿಸುವ ಸ್ಪೋಟ ಪುಡಿ, ಕೆಲ ವೈರ್‌ಗಳಿದ್ದವು ಎಂಬ ಮಾಹಿತಿ ದೊರೆತಿದೆ. ಪೆಟ್ಟಿಗೆಯಲ್ಲಿ ಅಪಾಯಕಾರಿ ಸ್ಫೋಟಕ ವಸ್ತು ಇರಲಿಲ್ಲ ಮತ್ತು ಅದು ಸಜೀವ ಬಾಂಬ್ ಅಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ನಿಷ್ಕ್ರಿಯಗೊಳಿಸಿದ ಪೊಲೀಸರಿಗೆ ಬಹುಮಾನ ನೀಡಲೇಬೇಕು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಇತ್ತೀಚಿಗೆ ಮಂಗಳೂರು ನಗರದಲ್ಲಿ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇವೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರ ಮಂಗಳೂರಿನಲ್ಲಿ ಪುನಃ ಆತಂಕದ ದಿನಗಳು‌ ಸೃಷ್ಟಿಯಾಗುತ್ತಿವೆ. ಮೈತ್ರಿ ಸರ್ಕಾರದ ಹದಿನಾಲ್ಕು ತಿಂಗಳು ಇಲ್ಲಿ ಶಾಂತಿ ಸುವ್ಯವಸ್ಥೆ ಇತ್ತು. ಆದರೆ ಇತ್ತೀಚೆಗೆ ಕೇಂದ್ರದ ಸಿಎಎ ಎನ್‌ಆರ್‌ಸಿ ತೀರ್ಮಾನಗಳಿಂದಾಗಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಡಿ.19ರಂದು ನಡೆದ ಗಲಭೆಯ ಬಳಿಕ ಪರಸ್ಪರ ನಂಬಿಕೆಗೆ ಕುಂದುಂಟಾಗುತ್ತಿದೆ ಎಂದರು.

ಕೆಲವರು ಸಿಎಎ ಪರ ಆಂದೋಲನ ನಡೆಸುತ್ತಿದ್ದು, ದೇಶ ರಾಜ್ಯಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಭಯದ ವಾತಾವರಣ ಸೃಷ್ಟಿಸಿ, ಹಲವೆಡೆ ಭಯೋತ್ಪಾದನಾ ಚಟುವಟಿಕೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದರು.

ಹಿಂದೆ 2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚರ್ಚ್ ಮೇಲೆ ದಾಳಿ ನಡೆದಿತ್ತು. ಈಗ ಮಂಗಳೂರು ಗಲಭೆಯ ಒಂದು ತಿಂಗಳ ನಂತರ ಆರು ಜನರ ಬಂಧನವಾಗಿದೆ ಎನ್ನುತ್ತಿದ್ದಾರೆ. ಸಿಸಿಟಿವಿ ದೃಷ್ಯದಲ್ಲಿ ಸಾಕ್ಷಿಯಿದೆ ಎಂದಿದ್ದಾರೆ. ನೋಡೋಣ ಪೊಲೀಸರು ಇನ್ನೂ ಯಾವಯಾವ ಸಾಕ್ಷಿ ಇಡುತ್ತಾರೆಯೋ ಎಂದು ಮಾರ್ಮಿಕವಾಗಿ ನುಡಿದ ಅವರು, ಯಾವುದೇ ಫಲಾಪೇಕ್ಷೆಯಿಲ್ಲದೇ ಸತ್ಯಾಸತ್ಯತೆ ಪತ್ತೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆಯೇ ಹೊರತು ಇನ್ಯಾರನ್ನೋ ಮೆಚ್ವಿಸಲು ಅಲ್ಲ ಎಂದರು.

ಸಂಸದೆ ಶೋಭಾ ಕರಂದ್ಲಾಜೆ ಮಂಗಳೂರಿಗೆ ಕುಮಾರಸ್ವಾಮಿ ಏಕೆ ಬರುತ್ತಾರೆ?. ಅವರಿಗೇನು ಇಲ್ಲಿ ಕೆಲಸ ಎನ್ನುತ್ತಾರೆ. ಮಂಗಳೂರನ್ನು ಶೋಭಾ ಕರಂದ್ಲಾಜೆ ಅವರಂತಹ ನಾಯಕರು ಸರಿಯಾಗಿ ನೋಡಿಕೊಂಡರೆ ತಮಗೆ ಇಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಮಂಗಳೂರು ವಾಣಿಜ್ಯ ಕ್ಷೇತ್ರದಲ್ಲಿ ವಿಶ್ವಕ್ಕೆ ಸ್ಪರ್ಧೆ ಒಡ್ಡುತ್ತಿರುವ ನಗರ. ಜನರ ವಿಶ್ವಾಸಕ್ಕೆ ಧಕ್ಕೆಯಾಗುವಂತಹ ಘಟನೆಗಳನ್ನು ಸೃಷ್ಟಿಸಬಾರದು ಎಂದು ಎಚ್ಚರಿಸಿದರು.

ಇಂತಹ ಘಟನೆಗಳಿಗೆ ಸಹಕರಿಸುವವರಿಗೆ ಯಾರೂ ಸಹಕಾರ ನೀಡಬಾರದು‌. ಸಮಾಜ ಸಮಾಜಗಳ ನಡುವೆ ಕಂದಕ ಸೃಷ್ಟಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ‌‌‌‌‌. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕು ಎಂದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ದೊರೆತ ಬಾಂಬ್ ಹಿನ್ನಲೆಯಲ್ಲಿ ಕುಮಾರಸ್ವಾಮಿ ಮಂಗಳವಾರ ಮೇಲ್ಮನೆ ಸದಸ್ಯ ಬಿ.ಎಂ.ಫಾರುಖ್ ಜೊತೆಗೂಡಿ ಮಂಗಳೂರು ಪೊಲೀಸ್ ಆಯುಕ್ತ ಹರ್ಷಾ ಅವರನ್ನು ಭೇಟಿ ಮಾಡಿ ಬಾಂಬ್ ಪತ್ತೆ ಸಂಬಂಧ ಮಾಹಿತಿ ಪಡೆದರು.

ಕಳೆದೆರಡು ದಿನಗಳಿಂದ ಶೃಂಗೇರಿಯಲ್ಲಿ ಕುಟುಂಬದಿಂದ ನೆರವೇರಿದ ಧಾರ್ಮಿಕ ಹೋಮ ಬಳಿಕ ಉಳ್ಳಾಲದಲ್ಲಿನ ಫಾರುಖ್ ನಿವಾಸಕ್ಕೆ ಆಗಮಿಸಿ ಅಲ್ಲಿ ಮುಸ್ಲಿಂ ಮುಖಂಡರ ಜೊತೆ ಮಂಗಳೂರು ಸಿಎಎ ಗಲಭೆ ಕುರಿತು ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪೊಲೀಸ್ ಆಯುಕ್ತ ಹರ್ಷಾ ಅವರೊಂದಿಗೆ ಚರ್ಚಿಸಿದ್ದೇನೆ‌. ಅವರು ತಂದಿರುವ ವಿಷಯಗಳನ್ನು ಸದ್ಯಕ್ಕೆ ಬಹಿರಂಗಪಡಿಸುವುದಿಲ್ಲ. ಆದರೆ ಈ ಘಟನೆಯಲ್ಲಿ ತಮ್ಮ ಪಾತ್ರ ಏನು ಇಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ ಎಂದರು.


Spread the love

Exit mobile version