ಮಂಗಳೂರಿನಲ್ಲಿ ಬಂಟಿಂಗ್ಸ್ ಅಳವಡಿಸಲು ಕಾಂಗ್ರೆಸ್ಸಿಗೆ ಪ್ರತ್ಯೇಕ ಕಾನೂನು ಇದೆಯೇ? – ವೇದವ್ಯಾಸ್ ಕಾಮತ್
ಮಂಗಳೂರು: ಮಹಾನಗರ ಪಾಲಿಕೆಯ ನೀತಿ ನಿಯಮಗಳು ನಮ್ಮಂತಹ ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲವೇ ಅಲ್ಲ ಎಂದು ಕಳೆದೆರಡು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಾಂಗ್ರೆಸ್ ಜನಪ್ರತಿನಿಧಿಗಳಂತೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಂತ ಸಂಬಂಧಪಟ್ಟ ಅಧಿಕಾರಿಗಳೂ ಕಣ್ಣು ಮುಚ್ಚಿ ಕೂತರೆ ಹೇಗೆ? ಎಂದು ಮಂಗಳೂರು ನಗರ ದಕ್ಷಿಣ ಮಂಡಲದ ಬಿಜೆಪಿ ಅಧ್ಯಕ್ಷ ಡಿ.ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಆಗಮಿಸುವ ದಿನದಂದು ಹಾಕಲಾಗಿದ್ದ ಬಿಜೆಪಿ ಪಕ್ಷದ ಬ್ಯಾನರ್ ಬಂಟಿಂಗ್ಸ್ ಗಳನ್ನು ತೆಗೆಸಲು ಇನ್ನಿಲ್ಲದಂತೆ ಉತ್ಸಾಹ ತೋರಿ “ಕೈ” ಹಾಕಿದ್ದ ಕಾಂಗ್ರೆಸ್ ನೇತೃತ್ವದ ಮಹಾನಗರ ಪಾಲಿಕೆ ಇಂದು ಮಂಗಳೂರಿನ ಪಂಪ್’ವೆಲ್, ನಂತೂರು, ಜ್ಯೋತಿ ಸೇರಿದಂತೆ ಹಲವೆಡೆ ಕಾಂಗ್ರೆಸ್ ಪಕ್ಷದ ಬಂಟಿಂಗ್ಸ್ ಗಳು ಹಾರಾಡುವಾಗ ಮೌನ ವಹಿಸಿರುವುದೇಕೆ?
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಂಗಳೂರಿಗೆ ಬಂದಾಗ ಅವರನ್ನು ಸ್ವಾಗತಿಸಬಾರದು ಎಂದು ನಾವು ಹೇಳುತ್ತಿಲ್ಲ. ಆದರೆ ಆ ನೆಪದಲ್ಲಿ ಕಾಂಗ್ರೆಸ್ಸಿಗೆ ಒಂದು ನ್ಯಾಯ, ಸಾರ್ವಜನಿಕರೂ ಸೇರಿದಂತೆ ಬಿಜೆಪಿಗೆ ಇನ್ನೊಂದು ನ್ಯಾಯ ಎಂಬ ಮಾನಸಿಕತೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಒಂದು ವೇಳೆ ನಿಷ್ಠಾವಂತ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಇಲ್ಲಿ ಕಾರ್ಯನಿರ್ವಹಿಸಿದರೆ ಕೂಡಲೇ ಅವರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಅದಕ್ಕೂ ಬಗ್ಗದಿದ್ದರೆ ವರ್ಗಾವಣೆ ಮಾಡಿ ಬಿಡುತ್ತಿದ್ದಾರೆ. ಹೀಗಾಗಿ ನಿಷ್ಠಾವಂತ ಅಧಿಕಾರಿಗಳನ್ನು ಮಂಗಳೂರು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ಸಿಗರು ತಮಗಿಷ್ಟ ಬಂದಂತೆ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮಾನ್ಯ ಜಿಲ್ಲಾಧಿಕಾರಿಗಳು ಇಂತಹ ಬಂಟಿಂಗ್ಸ್, ಫ್ಲೆಕ್ಸ್ ವಿಚಾರದಲ್ಲಿ ಆದೇಶವೊಂದನ್ನು ಹೊರಡಿಸಿದ್ದಾರೆಂದು ಪತ್ರಿಕೆಗಳಲ್ಲಿ ಓದಿದ್ದೆ. ಅದರ ಪ್ರಕಾರ, ಅನುಮತಿ ಇಲ್ಲದೇ ಯಾವುದೇ ರೀತಿಯ ಬಂಟಿಂಗ್ಸ್, ಫ್ಲೆಕ್ಸ್ ಗಳನ್ನು ಅಳವಡಿಸಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇದೆ.
ಹಾಗಾಗಿದ್ದರೂ ಕಾಂಗ್ರೆಸ್ಸಿಗರು ಜಿಲ್ಲಾಧಿಕಾರಿಗಳ ಆದೇಶವನ್ನೇ ಧಿಕ್ಕರಿಸಿದ್ದಾರೆ. ಇನ್ನು ಜನಸಾಮಾನ್ಯರು ಹಾಗೂ ಬಿಜೆಪಿಯವರನ್ನು ಧಿಕ್ಕರಿಸದೇ ಇರುತ್ತಾರೆಯೇ?
ಒಟ್ಟಿನಲ್ಲಿ ಕಾಂಗ್ರೆಸ್ಸಿಗರು ಯಾವ ರೀತಿ ಜನರ ಕಣ್ಣಿಗೆ ಮಣ್ಣೆರಚಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂಬುದನ್ನು ಸಾರ್ವಜನಿಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನೂ ಅವರೇ ನೀಡುತ್ತಾರೆ ಎಂದು ವೇದವ್ಯಾಸ್ ಕಾಮತ್ ಅವರು ತಿಳಿಸಿದರು