ಮಂಗಳೂರಿನಲ್ಲಿ ಸೌಹಾರ್ದ ದಸರಾ ಹುಲಿ ವೇಷ- ಫ್ರೆಂಡ್ಸ್ ಟೈಗರ್ಸ್ ವಿಭಿನ್ನ ಪ್ರಯೋಗ
ಮಂಗಳೂರುಃ ಸ್ನೇಹ ಸೌರ್ಹಾದತೆಯೇ ಜೀವಾಳ ಆಗಿರುವ ಕರಾವಳಿಯಲ್ಲಿ ಸರ್ವಧರ್ಮಿಯರು ಸಾಂಪ್ರದಾಯಿಕ ಹುಲಿ ವೇಷ ಹಾಕುವ ಮೂಲಕ ಸೌಹಾರ್ದ ದಸರಾ ಆಚರಣೆಗೆ ಚಾಲನೆ ನೀಡಿದ್ದಾರೆ.
ತುಳುನಾಡಿನಲ್ಲಿ ದಸರಾ ಮಹೋತ್ಸವಕ್ಕೆ ಮೆರಗು ನೀಡುವುದೇ ಹುಲಿವೇಷ. ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಮುಳಿಹಿತ್ಲು ವತಿಯಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನದೇ ಸರ್ವಧರ್ಮಿಯರು ಹುಲಿ ವೇಷ ಹಾಕಿಕೊಂಡು ದಸರಾ ಹಬ್ಬದ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ.
ಹತ್ತಾರು ಯುವಕರಿಂದ ಸ್ಥಾಪನೆಗೊಂಡ ಮಂಗಳೂರು ಫ್ರೆಂಡ್ಸ್ ಟೈಗರ್ಸ್ ಹಬ್ಬ ಹರಿದಿನಗಳ ಸಮಯದಲ್ಲಿ ಹುಲಿವೇಶ ಹಾಕುತ್ತಾರೆ. ಕಳೆದ ಮೂರು ವರ್ಷಗಳಿಂದ ದಸರಾ ಸಮಯದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯುವಕರು ಜೊತೆಗೂಡಿ ಹುಲಿವೇಷ ಹಾಕುತ್ತಾರೆ. ಈ ಹುಲಿವೇಷ ಹಾಕುವಾಗ ಯಾವೊರೊಬ್ಬರೂ ಮದ್ಯಪಾನ, ದೂಮಪಾನ, ಮಾಂಸಾಹಾರವನ್ನು ಸೇವಿಸುವುದಿಲ್ಲ ಎನ್ನುತ್ತಾರೆ ಫ್ರೆಂಡ್ಸ್ ಟೈಗರ್ಸ್ ರೂವಾರಿ ನಿತಿನ್ ಆರ್ ಸಾಲ್ಯಾನ್.
ದಸರಾದ ಹುಲಿ ಮಾತ್ರವಲ್ಲದೆ, ಗಣೇಶ ಚತುರ್ಥಿ, ಇಫ್ತಾರ್ ಕೂಟವನ್ನೂ ಸಹ ಸೌಹಾರ್ದವಾಗಿ ಆಚರಿಸುತ್ತಾರೆ. ಹಬ್ಬಗಳ ಆಚರಣೆ ಮಾತ್ರವಲ್ಲದೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ತಂಡ ಯುವಕರು
ತಮ್ಮ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುತ್ತಾ ಅನ್ಯ ಧರ್ಮದ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿರುವ ಈ ತಂಡದಲ್ಲಿ ಎಲ್ಲ ಧರ್ಮದ ಯುವಕರು ಇರುವುದು ವಿಶೇಷತೆಯಾಗಿದೆ.
ಹುಲಿ ನೃತ್ಯ ವಿಭಿನ್ನ ಪ್ರಯತ್ನ
ದಸರಾ ಸಮಯದಲ್ಲಿ ಹುಲಿಗಳು ಸ್ಟಂಟ್, ವಿಭಿನ್ನ ವೇಷಗಳೊಂದಿಗೆ ಕಾಣಸಿಗುತ್ತದೆ. ಆದರೆ ಈ ಯುವಕರ ತಂಡ ಪ್ರತಿವರ್ಷವೂ ಒಂದೊಳ್ಳೆ ವಿಷಯ ಇಟ್ಟುಕೊಂಡು ಹುಲಿ ನೃತ್ಯ ಮಾಡುತ್ತಿದೆ. ಅಂತೆಯೇ ಈ ಸಾರಿಯೂ ಹುಲಿ ನೃತ್ಯವನ್ನು ವಿನೂತನವಾಗಿ ರೂಪಿಸಿದ್ದಾರೆ. ಮಹಿಷಾಸುರ ವಧೆಯ ಕಥಾನಕವನ್ನು ಇರಿಸಿಕೊಂಡು ಹುಲಿ ನೃತ್ಯ ಮಾಡಿದ್ದಾರೆ. ಮಂಗಳಾದೇವಿ ದೇವಸ್ಥಾನದಲ್ಲಿ ಪ್ರಾರಂಭಿಸಿ, ಮಹಿಷಮರ್ಧಿನಿ ಕ್ಷೇತ್ರ ಬೋಳಾರ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿ ಜನರ ಪ್ರಶಂಸೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗುವ ಈ ಮುಳಿಹಿತ್ಲು ಫ್ರೆಂಡ್ಸ್ ಟೈಗರ್ಸ್‍ನ ನಡೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ.