ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನ-ಮಾನ ನೀಡುವಂತೆ ಸಿಎಂಗೆ ಸಂಸದ ಕ್ಯಾ. ಚೌಟ ಆಗ್ರಹ
ಬಾಲಕನ ಜೀವ ಉಳಿಸಿದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಗೆ ಸಂಸದರ ಪ್ರಶಂಸೆ
ಮಂಗಳೂರು: ಮಡಿಕೇರಿಯಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರ ಬಾಲಕನ ಎದೆಗೂಡಿನ ಭಾಗಕ್ಕೆ ಚುಚ್ಚಿಕೊಂಡಿದ್ದ ತೆಂಗಿನ ದಿಂಡು ಹಾಗೂ ಲೋಹದ ಸರವನ್ನು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಾಣ ಉಳಿಸಿದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘಿಸಿದ್ದಾರೆ.
ಅಸ್ಸಾಂ ಮೂಲದ 12 ವರ್ಷದ ಬಾಲಕ ಆಟವಾಡುತ್ತಿದ್ದ ವೇಳೆ ಅವಘಡ ಸಂಭವಿಸಿ ಎದೆಗೂಡಿಗೆ ತೆಂಗಿನ ದಿಂಡು ಹಾಗೂ ಲೋಹದ ಸರ ಸೇರಿಕೊಂಡಿತ್ತು. ವೆನ್ಲಾಕ್‌ಗೆ ಕರೆತರಲಾಗಿದ್ದ ಬಾಲಕನಿಗೆ ಕಾರ್ಡಿಯೋಥೋರಾಸಿಕ್ ಮತ್ತು ವ್ಯಾಸ್ಕ್ಯುಲರ್ ಸರ್ಜರಿ ವಿಭಾಗದ ಡಾ. ಸುರೇಶ್ ಪೈ ನೇತೃತ್ವದ ತಂಡವು ಕೂಡಲೇ ಸಮಯಪ್ರಜ್ಞೆ ಮೆರೆದು ಬಹಳ ಸಂಕೀರ್ಣವಾದ ಮತ್ತು ಅತ್ಯಂತ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆ ಮೂಲಕ ದೇಹ ಸೇರಿದ್ದ ಚುಚ್ಚಿಕೊಂಡಿದ್ದ ವಸ್ತುಗಳನ್ನು ಹೊರತೆಗೆದು ಬಾಲಕನ ಪ್ರಾಣ ಉಳಿಸಿದ್ದಾರೆ. ಇದು ವೆನ್ಲಾಕ್‌ನಂಥ ಸರ್ಕಾರಿ ವಲಯದ ಆಸ್ಪತ್ರೆಯಲ್ಲಿ ಲಭ್ಯವಿರುವ ಚಿಕಿತ್ಸಾ ಗುಣಮಟ್ಟ ಹಾಗೂ ಅಲ್ಲಿನ ನುರಿತ ವೈದ್ಯರ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ. ಹೀಗಿರುವಾಗ, ಈ ಅಪರೂಪದ ಹಾಗೂ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಬಾಲಕನ ಜೀವ ಉಳಿಸುವಲ್ಲಿ ಕೈಜೋಡಿಸಿರುವ ವೆನ್ಲಾಕ್‌ನ ಇಡೀ ವೈದ್ಯರ ತಂಡ ಹಾಗೂ ಸಿಬ್ಬಂದಿ ವರ್ಗವನ್ನು ಅಭಿನಂದಿಸುವುದಾಗಿ ಕ್ಯಾ. ಚೌಟ ತಿಳಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆ ವೈದ್ಯರ ಈ ಸಾಧನೆಯು ನಮ್ಮ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿರುವ ವೃತ್ತಿಪರರ ಕೌಶಲ್ಯ, ಸಮರ್ಪಣೆ ಮತ್ತು ಅಚಲ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳನ್ನು ಹೆಚ್ಚು ದೂಷಿಸಲಾಗುತ್ತದೆ. ಆದರೆ ಈ ಪ್ರಕರಣವು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಚಿಕಿತ್ಸಾ ಗುಣಮಟ್ಟದಲ್ಲಿ ಎಷ್ಟೊಂದು ಸುಧಾರಣೆಗಳು ಆಗುತ್ತಿವೆ ಎಂಬುದಕ್ಕೆ ಇಂಥಹ ಪ್ರಕರಣಗಳೇ ಸಾಕ್ಷಿ. ಅಷ್ಟೇ ಅಲ್ಲದೇ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತುರ್ತು ಸ್ಪಂದನೆ ಹಾಗೂ ಸಮಯೋಚಿತ ನಿರ್ಧಾರವು ನಮ್ಮಲ್ಲಿರುವ ಇತರೆ ಸರ್ಕಾರಿ ಆಸ್ಪತ್ರೆಗಳಿಗೂ ಸ್ಪೂರ್ತಿಯಾಗಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ವೆನ್ಲಾಕ್ ಆಸ್ಪತ್ರೆಯನ್ನು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಸುಮಾರು 90 ಕೋಟಿಗೂ ಅಧಿಕ ಮೊತ್ತ ಹಾಗೂ ಎಂ.ಆರ್.ಪಿ.ಎಲ್ ಸೇರಿದಂತೆ ವಿವಿಧ ಸಿಎಸ್‌ಆರ್ ನಿಧಿಯಡಿ ಹಂತ-ಹಂತವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯ 60 ಕೋಟಿ ಸುಮಾರಿನ ಅನುದಾನದಲ್ಲಿ ನಿರ್ಮಾಣಗೊಂಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಗೊಂಡಿತ್ತು ಹಾಗೂ ಕೇಂದ್ರ ಸರಕಾರದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್‌ಫ್ರಾಸ್ಟ್ರಕ್ಚರ್ ಮಿಷನ್-PMABHIM ಯೋಜನೆಯಡಿ ದ.ಕ. ಜಿಲ್ಲೆ ಒಟ್ಟು 25.11 ಕೋಟಿ ರೂ. ಬಿಡುಗಡೆಯಾಗಿತ್ತು. ಆ ಪೈಕಿ 24 ಕೋಟಿ ರೂ. ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಹಾಗೂ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಟ್ರಮಾ ಕೇರ್ ಸೆಂಟರ್ನ 2ನೇ ಮಹಡಿಯಲ್ಲಿ ಜಿಲ್ಲಾ ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್ (IPHL) ಕಟ್ಟಡ ನಿರ್ಮಾಣಕ್ಕೆ 1.11 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಘಟಕಗಳು ಕಾರ್ಯಾರಂಭಿಸಿದರೆ ವೆನ್ಲಾಕ್‌ನಲ್ಲಿ ಮತ್ತಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಕರಾವಳಿ ಜನತೆಗೆ ದೊರೆಯಲಿದೆ.
ಇದಲ್ಲದೇ ಕ್ಯಾ.ಚೌಟ ಇತ್ತೀಚೆಗೆ ಎಂಆರ್‌ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಭೇಟಿ ಮಾಡಿ ವೆನ್ಲಾಕ್ ಗೆ ಸಿಎಸ್‌ಆರ್ ಫಂಡ್ ನಡಿ ಮತ್ತಷ್ಟು ಅನುದಾನ ನೀಡುವಂತೆ ಮನವಿ ಮಾಡಿದ್ದು ಸರ್ಕಾರಿ ಸಂಸ್ಥೆಗಳ ನಡುವಿನ ಇಂತಹ ಸಹಯೋಗಗಳು ಅತ್ಯಗತ್ಯ. ನಿರಂತರ ಹೂಡಿಕೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳೊಂದಿಗೆ, “ಮಂಗಳೂರು” ಆರೋಗ್ಯ ರಕ್ಷಣೆ ಮತ್ತು ಸೇವೆಯಲ್ಲಿ ಮಾದರಿ ನಗರವಾಗಿ ಹೊರಹೊಮ್ಮಬಹುದು, ಇದರಿಂದ ಲಕ್ಷಾಂತರ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದ್ದರು.
ವೆನ್ಲಾಕ್ ಗೆ ರೀಜನಲ್ ಆಸ್ಪತ್ರೆ ಸ್ಥಾನ-ಮಾನ ನೀಡಲು ಆಗ್ರಹ
ವೆನ್ಲಾಕ್ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ಸೂಕ್ತ ಅನುದಾನ ಲಭ್ಯವಾಗುತ್ತಿದ್ದು, ರಾಜ್ಯದ ಮುಂಚೂಣಿಯ ಸುಸಜ್ಜಿತ ಸರ್ಕಾರಿ ಆಸ್ಪತ್ರೆಯಾಗಿ ಮಾರ್ಪಾಡಿಸುವುದಕ್ಕೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ, ಮೂಲಸೌಕರ್ಯ ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ವೆನ್ಲಾಕ್‌ನಲ್ಲಿ ಮತ್ತಷ್ಟು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಮಾದರಿ ಆಸ್ಪತ್ರೆಯಾಗಿ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲದೆ, ವೆನ್ಲಾಕ್‌ಗೆ ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ ಸುತ್ತಮುತ್ತಲಿನ ಸುಮಾರು 7-8 ಜಿಲ್ಲೆಯ ರೋಗಿಗಳು ಚಿಕಿತ್ಸೆಗಾಗಿ ಅವಲಂಬಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿ ಕೊರತೆ ಸಹಿತ ಕೆಲವು ಸಮಸ್ಯೆಯನ್ನು ಈ ಜಿಲ್ಲಾಸ್ಪತ್ರೆ ಎದುರಿಸುತ್ತಿದ್ದು ಇವುಗಳನ್ನು ನಿವಾರಿಸಿ ಸಮಗ್ರ ಅಭಿವೃದ್ದಿ ಮಾಡುವುದಕ್ಕೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯ. ಈ ಹಿನ್ನಲೆಯಲ್ಲಿ ಮುಂದಿನ ರಾಜ್ಯ ಬಜೆಟ್‌ನಲ್ಲಿ ವೆನ್ಲಾಕ್ ನ್ನು ಪ್ರಾದೇಶಿಕ(ರಿಜನಲ್) ಆಸ್ಪತ್ರೆಯನ್ನಾಗಿ ಘೋಷಿಸಬೇಕು. ಜೊತೆಗೆ ಆಸ್ಪತ್ರೆಗೆ ಮತ್ತಷ್ಟು ಉನ್ನತ ಸ್ಥಾನಮಾನ ಒದಗಿಸಬೇಕು. ಪ್ರಾದೇಶಿಕ ಆಸ್ಪತ್ರೆ ಮಾನ್ಯತೆ ನೀಡುವುದರಿಂದ ಹೆಚ್ಚಿನ ಅನುದಾನ, ವೈದ್ಯಕೀಯ ಮೂಲಸೌಕರ್ಯ ಸುಧಾರಿಸುವ ಮೂಲಕ ಹೆಚ್ಚಿನ ಪ್ರದೇಶಕ್ಕೆ ಆರೋಗ್ಯ ಸೇವೆಗಳನ್ನು ವಿಸ್ತರಿಸಲು ಅನುಕೂಲವಾಗುತ್ತದೆ. ಈ ಸಂಬಂಧ ಕ್ಯಾ. ಚೌಟ ಅವರು ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಕೂಡ ಬರೆದು ಒತ್ತಾಯಿಸಿದ್ದಾರೆ.