Home Mangalorean News Kannada News ಮಂಗಳೂರಿನ ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್ ಮಚಾದೊ

ಮಂಗಳೂರಿನ ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್ ಮಚಾದೊ

Spread the love

ಮಂಗಳೂರಿನ ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ: ಆರ್ಚ್ ಬಿಷಪ್ ಪೀಟರ್ ಮಚಾದೊ

ಬೆಂಗಳೂರು: ಮಂಗಳೂರಿನ ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ಕ್ರೈಸ್ತ ಸಮುದಾಯಕ್ಕೆ ನೋವಾಗಿದೆ ಎಂದು ಬೆಂಗಳೂರು ಮಹಾ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಡಾ|ಪೀಟರ್ ಮಚಾದೊ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಇತ್ತೀಚೆಗೆ ಮಂಗಳೂರಿನ ಸಂತ ಜೆರೋಸ ಕಾನ್ವೆಂಟ್ ಶಾಲೆಯಲ್ಲಿ ನಡೆದ ಘಟನೆಯ ನಂತರ ಅಲ್ಲಿನ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಜನರ ಗುಂಪು ಹಿಂದೂ ಧರ್ಮದ ಬಗ್ಗೆ ಹಾಗೂ ರಾಷ್ಟ್ರೀಯ ನಾಯಕರ ವಿರುದ್ಧ ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಲಾಗಿರುವ ಸಿಸ್ಟರ್ (ಧಾರ್ಮಿಕ ಭಗಿನಿ) ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಪ್ರತಿಭಟನೆಯನ್ನು ನಡೆಸಿದೆ. ವಾಸ್ತವಿಕವಾಗಿ ನಿಜವಾಗಿಯೂ ಆ ಸಿಸ್ಟರ್ ಏನು ಹೇಳಿದರು ಹಾಗೂ ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ಇದನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಿದರು ಮತ್ತು ಸಾರ್ವಜನಿಕರು ಇದಕ್ಕೆ ಆಕ್ರೋಶದಿಂದ ವರ್ತಿಸಿದ್ದು ಏಕೆ ಎಂದು ವಸ್ತುನಿಷ್ಠವಾಗಿ ಯಾರಿಗೂ ಗೊತ್ತಿಲ್ಲ.

ಸುಮಾರು ನೂರು ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಜೆರೋಸ ಕಾನ್ವೆಂಟ್ ಶಾಲೆಯನ್ನು ಯಾವುದೋ ಒಂದು ಯಕಶ್ಚಿತ್ ಘಟನೆಯಿಂದ, ಯಾವುದೇ ತನಿಖೆ ನಡೆಸದೆ ಅವಮಾನಕ್ಕೆ ಒಳಪಡಿಸಿರುವುದು ಕ್ರೈಸ್ತ ಸಮುದಾಯಕ್ಕೆ ನೋವನ್ನು ಉಂಟು ಮಾಡಿದೆ. ಮಂಗಳೂರಿನ ಜನತೆಗೆ ಗೊತ್ತಿರುವಂತೆ ಈ ಶಿಕ್ಷಣ ಸಂಸ್ಥೆಯು ಸಮಾಜದ ವಿವಿಧ ಕ್ಷೇತ್ರಗಳಿಗೆ ಅನೇಕ ಮಹನೀಯರನ್ನು ಕೊಡುಗೆಯಾಗಿ ನೀಡಿದೆ. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಮಾಜದ ಎಲ್ಲಾ ಧರ್ಮಗಳ, ಎಲ್ಲಾ ಜಾತಿಗಳ ಜನರಿಗೆ ಯಾವುದೇ ಭೇದ ಭಾವವಿಲ್ಲದೆ ನಮ್ಮ ಕ್ರೈಸ್ತ ಸಂಸ್ಥೆಗಳು ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವುದು ಸಾರ್ವತ್ರಿಕ ಸತ್ಯವಾಗಿದೆ. ಪ್ರಸ್ತುತ ದೇಶ ಹಾಗೂ ವಿದೇಶಗಳಲ್ಲಿ ನೆಲೆಸಿ, ದೊಡ್ಡ ಹುದ್ದೆಗಳಲ್ಲಿರುವ ಹಾಗೂ ಬದುಕಿನಲ್ಲಿ ಯಶಸ್ವಿಯಾಗಿರುವ ಸಾವಿರಾರು ಕ್ರೈಸ್ತೇತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ನಮ್ಮ ಅಲ್ಪಸಂಖ್ಯಾತ ಸಂಸ್ಥೆಗಳು ಅವರ ಬದುಕನ್ನು ರೂಪಿಸಿವೆ. ಅವರೆಲ್ಲರೂ ಈಗಲೂ ಸಹ ತಾವು ಕಲಿತ ವಿದ್ಯಾಸಂಸ್ಥೆಗೆ ಕೃತಜ್ಞರಾಗಿದ್ದಾರೆ.

ಈ ಪ್ರಕರಣದಲ್ಲಿ ಯಾವುದೇ ಸರ್ಕಾರದ ತನಿಖೆ ಇಲ್ಲದೆ ಇದ್ದರೂ ಸಹ, ಈ ಘಟನೆಗೆ ಸಂಬಂಧಿಸಿದ ಶಿಕ್ಷಕಿಯನ್ನು ಅಮಾನತ್ತು ಮಾಡಲಾಗಿದೆ ಮಾತ್ರವಲ್ಲದೆ, ಈ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಅವರು ಪ್ರತಿಭಟನಾಕಾರರ ಕ್ಷಮೆಯನ್ನು ಯಾಚಿಸಿದ ನಂತರವೂ, ಸಂಪೂರ್ಣ ನಿಜಾಂಶ ಹೊರಗೆ ಬರುವವರೆಗೂ ಸ್ಥಳೀಯ ಶಾಸಕರಿಗೂ ಹಾಗೂ ಅವರ ಜೊತೆಗೆ ಬದ್ದಿದ್ದ ಜನರ ಗುಂಪಿಗೂ ತಾಳ್ಮೆ ಇರಲಿಲ್ಲ. ಈ ಘಟನೆಗೆ ಸಂಬಂಧಪಟ್ಟ ಸಿಸ್ಟರ್ ಅವರು ಆಸ್ಪತ್ರೆಗೆ ದಾಖಲಾಗಿದ್ದರೂ ಸಹ, ಸ್ಥಳೀಯ ಶಾಸಕರ ನೇತೃತ್ವದ ಜನಗಳ ಗುಂಪು ಸದರಿ ಸಿಸ್ಟರ್ ಅನ್ನು ತಮ್ಮಲ್ಲಿಗೆ ಕರೆಸಬೇಕು ಎಂದು ಬಲವಂತ ಮಾಡಿದ್ದು ಅಲ್ಲದೆ ಈ ಉದ್ದೇಶಕ್ಕಾಗಿ ಮಕ್ಕಳನ್ನು ಸಹ ಬಳಸಿಕೊಂಡಿದೆ. ಕ್ರೈಸ್ತ ಸಮುದಾಯವಾದ ನಾವು, ವಿಶೇಷವಾಗಿ ಗುರುಗಳು ಧಾರ್ಮಿಕ ಬಕಿನರು ಎಂದಿಗೂ ಎಲ್ಲಾ ಧರ್ಮಗಳನ್ನು ಗೌರವಿಸಿ ಅವುಗಳ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಕೆಲವೊಮ್ಮೆ ಕೆಲವು ಧಾರ್ಮಿಕ ಮೂಲಭೂತವಾಗಿ ಗುಂಪುಗಳು ಮತ್ತೊಂದು ಧರ್ಮದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಅವರ ಮೇಲೆ ಸುಳ್ಳು ಆರೋಪಗಳನ್ನು ಹಬ್ಬಿಸುವ ಮೂಲಕ ಸಾರ್ವಜನಿಕರಲ್ಲಿ ವಿಭಜನೆಯನ್ನು ಸೃಷ್ಟಿಸುತ್ತಿದ್ದಾರೆ. ಇದು ಸಹ ಈ ಘಟನೆಗೆ ಕಾರಣವಾಗಿರಬಹುದು.

ರಾಜಕೀಯವಾಗಿ ಆಯ್ಕೆಯಾದ ನಾಯಕರು ಸಮಾಜದಲ್ಲಿ ಸಾಮರಸ್ಯ ಹಾಗೂ ಏಕತೆಯ ಪ್ರತಿನಿಧಿಗಳಾಗುವ ಬದಲು ಅನೇಕ ಬಾರಿ ವಿಭಜನೆಯ ನಾಯಕರಾಗುತ್ತಿದ್ದಾರೆ. ಕ್ರಿಸ್ಮಸ್ ಹಬ್ಬದ ದಿನ ದೆಹಲಿಯಲ್ಲಿ ಪ್ರಧಾನಮಂತ್ರಿಗಳು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯವು ನೀಡಿರುವ ನಿಸ್ವಾರ್ಥ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ನಂತರವೂ ಸಹ ಅವರ ಪಕ್ಷದ ಸದಸ್ಯರು ದೇಶದಾದ್ಯಂತ ಇದನ್ನು ಅರ್ಥ ಮಾಡಿಕೊಳ್ಳುವ ಬದಲಿಗೆ, ದ್ವೇಷ ಭಾಷಣ ಮಾಡುವುದರಲ್ಲಿ ನಿರತರಾಗಿದ್ದಾರೆ ಮಾತ್ರವಲ್ಲದೆ ಸಂಕುಚಿತ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ. ಗುಂಪು ರಾಜಕೀಯವೇ ದೇಶದಲ್ಲಿ ಕಾನೂನಾಗಿದೆಯೇ? ಅಥವಾ ಸಮಾಜದಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ನ್ಯಾಯದ ಪ್ರಕ್ರಿಯೆಯಲ್ಲಿ ನಂಬಿಕೆಯನ್ನು ಇಡಬಹುದೇ? ಈ ಪ್ರಕರಣದಲ್ಲಿ ಸರ್ಕಾರಿ ಅಧಿಕಾರಿಗಳ ಪಾತ್ರವನ್ನು ಸಹ ನಾವು ವಿಮರ್ಶೆಗೆ ಒಳಪಡಿಸಬೇಕು. ನಾಗರೀಕರು ಹಾಗೂ ಸಂಸ್ಥೆಗಳು ಅಸಹಾಯಕ ಸ್ಥಿತಿಯಲ್ಲಿರುವಾಗ ಮಧ್ಯಪ್ರವೇಶಿಸಿ, ಸಮಸ್ಯೆಯನ್ನು ನ್ಯಾಯಾತ್ಮಕವಾಗಿ ಬಗೆಹರಿಸಿ, ಇವರ ಬೆಂಬಲಕ್ಕೆ ನಿಲ್ಲುವುದು ಅವರ ಕರ್ತವ್ಯವಲ್ಲವೇ?

ಕ್ರೈಸ್ತ ಸಮುದಾಯದ ಹಾಗೂ ಅದರ ನಾಯಕರ ವಿರುದ್ಧ ಸುಳ್ಳು ಆರೋಪಗಳು ಹೊರಿಸಿದ ಹಾಗೂ ಅವಮಾನ ಮಾಡಿದ ನಂತರವೂ ಸಹ ನಾವು ಸಮಾಜಕ್ಕೆ ಸೇವೆ ಮಾಡುವುದನ್ನು ಮುಂದುವರಿಸುತ್ತೇವೆ. ವಿಶೇಷವಾಗಿ ಬಡವರು, ಶೋಷಿತರು ಹಾಗೂ ದಮನಿತರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತೇವೆ ಮಾತ್ರವಲ್ಲದೆ ನಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವವರಿಗೆ ಹಾಗೂ ನಮಗೆ ನೋವನ್ನು ಉಂಟುಮಾಡುವವರಿಗೆ ಯೇಸುಕ್ರಿಸ್ತರೇ ಹೇಳಿದಂತೆ ‘ತಂದೆಯೇ ಇವರನ್ನು ಕ್ಷಮಿಸಿರಿ ಇವರು ಏನು ಮಾಡುತ್ತಿದ್ದಾರೆಂದು ಅರಿಯರು” ಎಂದು ಹೇಳಿ ಪ್ರಾರ್ಥಿಸುತ್ತೇವೆ.


Spread the love

Exit mobile version