ಮಂಗಳೂರು:ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

Spread the love

ಮಂಗಳೂರು:ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಮಂಗಳೂರು: ಮಹಿಳೆಯೊಬ್ಬರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ತೆಲಂಗಾಣ ಮೂಲದ, ಸದ್ಯ ಮಂಗಳೂರಿನಲ್ಲಿ ಪತಿ ತೇಜ ಜತೆ ನೆಲೆಸಿರುವ ಬನೊತ್ ದುರ್ಗಾರವರ ನವಜಾತ ಶಿಶುಗಳಲ್ಲಿ ಎರಡು ಹೆಣ್ಣು ಮತ್ತು ಎರಡು ಗಂಡು ಆಗಿದ್ದು, ಮಕ್ಕಳ ತೂಕ 1.2 ಕೆಜಿ, 1.1 ಕೆಜಿ, 900 ಗ್ರಾಂ ಹಾಗೂ 800 ಗ್ರಾಂ.ಗಳಾಗಿವೆ.


ಈ ರೀತಿಯ ಹೆರಿಗೆ ಕ್ಲಿಷ್ಟಕರ ಹಾಗೂ ಅಪರೂಪ ಎಂದು ಹೇಳಲಾಗಿದೆ. ಅಂದಾಜು 7 ಲಕ್ಷದಲ್ಲಿ ಒಂದು ಈ ರೀತಿ ನಾಲ್ಕು ಮಕ್ಕಳ ಜನನ ಸಂಭವಿಸುತ್ತದೆ. ಈ ರೀತಿಯ ಹೆರಿಗೆಯು ಪ್ರಸವ ಪೂರ್ವ ಹಾಗೂ ಕಡಿಮೆ ತೂಕದಿಂದ ಕೂಡಿರುವ ಕಾರಣ, ಹೆರಿಗೆಯು ಅತ್ಯಂತ ಕ್ಲಿಷ್ಟಕರವಾಗಿರುತ್ತದೆ. ಗರ್ಭಾವಸ್ಥೆಯ ಸಂದರ್ಭ ಅಲ್ಟಾ ಸೌಂಡ್ ನಡೆಸುವ ಸಂದರ್ಭದಲ್ಲಿ ಈ ವಿಚಾರ ತಿಳಿದು ದಂಪತಿ ಅಚ್ಚರಿಗೊಳಗಾಗಿದ್ದರು. ಪ್ರಸವಪೂರ್ವ ಆರೈಕೆ ಮಾಡಿದ್ದ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಜಾಯ್ಲಿನ್ ಡಿಅಲ್ಮೇಡಾ ಅವರು ಪ್ರತಿ ಹಂತದಲ್ಲಿಯೂ ದಂಪತಿಗೆ ಧೈರ್ಯವನ್ನು ತುಂಬಿದ್ದರು. ಆರಂಭದಲ್ಲಿ ದಂಪತಿ ಸಂತಸದ ನಡುವೆ ಆತಂಕಕ್ಕೆ ಒಳಗಾಗಿದ್ದರೂ, ಅಪಾಯದ ಸಾಧ್ಯತೆಯ ನಡುವೆಯೂ ನಾಲ್ಕು ಮಕ್ಕಳನ್ನು ಉಳಿಸಿ ಕೊಳ್ಳುವ ನಿರ್ಧಾರ ಮಾಡಿದ್ದರು. 30 ವಾರಗಳ ಗರ್ಭಾವಸ್ಥೆಯ ಬಳಿಕ ನ. 9ರಂದು ಬನೊತ್ ದುರ್ಗಾ ಅವರಿಗೆ ಇಲೆಕ್ಟಿವ್ ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ.

ಫೀಟಲ್ ಮೆಡಿಸಿನ್ ಮತ್ತು ಸೋನಾಲಜಿ ತಂಡದಲ್ಲಿ ಡಾ. ಮುರಳೀಧರ್, ಡಾ. ರಾಮ್ ಬಸ್ತಿ ಮತ್ತು ಡಾ. ಮಹೇಶ್ ಸಹಕರಿಸಿದರೆ, ಪ್ರಸೂತಿ ತಂಡದಲ್ಲಿ ಡಾ. ಸುಜಯಾ ರಾವ್ ಮತ್ತು ತಂಡಕ್ಕೆ ಡಾ. ವಿಸ್ಮಯ, ಡಾ. ಏಕ್ತಾ, ಡಾ. ದಿಯಾ ಮತ್ತು ಡಾ ನಯನ ಅವರು ಅಗತ್ಯ ಆರೈಕೆ ಮತ್ತು ಸಲಹೆಯನ್ನು ಗರ್ಭಾವಸ್ಥೆಯಲ್ಲಿ ನೀಡಿದ್ದಾರೆ.

ಮಕ್ಕಳ ತೂಕ ಅತೀ ಕಡಿಮೆ ಇದ್ದ ಕಾರಣ ಹೆರಿಗೆ ಬಳಿಕ ಶಿಶು ತಜ್ಞೆ ಡಾ. ಚಂದನ ಪೈ ಅವರ ನೇತೃತ್ವದ ತಂಡದ ಸಹಕಾರದಲ್ಲಿ ಆಸ್ಪತ್ರೆಯ ಎನ್‌ಐಸಿಯುನಲ್ಲಿ ಸಮರ್ಪಕ ಆರೈಕೆ ಮಾಡಲಾಯಿತು. ಡಾ. ಪ್ರವೀಣ್ ಬಿ.ಕೆ. ಮತ್ತು ಅವರ ಶಿಶು ತಜ್ಞ ತಂಡವೂ ಸೂಕ್ತ ವೈದ್ಯಕೀಯ ಸಲಹೆ, ಮಾರ್ಗದರ್ಶದನೊಂದಿಗೆ ನವಜಾತ ಶಿಶುಗಳ ಆರೈಕೆ ಮಾಡಿದ್ದಾರೆ ಎಂದು ಆಸ್ಪತ್ರೆ ಪ್ರಕಟನೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments