ಮಂಗಳೂರು: ಮಂಗಳೂರು ತಾಲೂಕಿನ ಬಜ್ಪೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಜ್ಪೆ, ಕರಂಬಾರ್, ಪೆರ್ಮುದೆ, ಪೋಕೊಡಿ ಇನ್ನಿತರ ಊರುಗಳ ಜೀವ ಜಲಗಳು ವಿಷಮಯವಾಗುತ್ತಿದ್ದು ಜನರರಲ್ಲಿ ಚರ್ಮ ಮತ್ತಿತರ ರೋಗಗಳು ಕಾಣಿಸಿಕೊಳ್ಳುತ್ತಿವೆ.
ಇದಕ್ಕೇ ಕಾರಣವಾದರೂ ಏನು…?
ಬಜ್ಪೆ ಸಮೀಪ ಜೆಬಿಎಸ್, ಕೊಡ್ಲೈಟ್ ಕೆಮಿಕಲ್ ಫಾಕ್ಟರಿಗಳು ಕಾರ್ಯಾಚರಿಸುತ್ತಿದ್ದು ಅಕ್ರಮವಾಗಿ ಅಪಾಯಕಾರಿ ವೆಸ್ಟ್ ಕೆಮಿಕಲ್ಗಳನ್ನು ಇಲ್ಲಿನ ನೀರಿನ ತೋಡಿಗೆ ಬೀಡಲಾಗುತ್ತಿದೆ.ಇದರಿಂದ ತೋಡಿನ ಸಮೀಪವಿರುವ ಬಜ್ಪೆ ಗ್ರಾಮದ ಹಲವು ಊರುಗಳ ನೀರಿನ ಮೂಲಗಳಿಗೆ ವಿಷಕಾರಿ ಕೆಮಿಕಲ್ಗಳು ಸೇರಿಕೊಳ್ಳುತ್ತಿವೆ. ಬೇಸಗೆ ಕಾರಣ ತೋಡಿಗೆ ಬೀಡಲಾಗುವ ಕೆಮಿಕಲ್ ಪೂರಿತ ನೀರು ಸ್ವಲ್ಪ ದೂರ ಹರಿದು ನಂತರ ಸಾಗದೇ ಭೂಮಿಯಲ್ಲಿ ಇಂಗುತ್ತಿದೆ. ಇದರಿಂದ ಇಲ್ಲಿನ 20-30ರಷ್ಟು ಬಾವಿ ನೀರುಗಳಲ್ಲಿ ಕೆಮಿಕಲ್ ಆಯಿಲ್ಗಳು ಸೇರಿದ್ದು ವಿಷಯುಕ್ತವಾಗಿದೆ.
ಡೈನೇಜ್ ನೀರನ್ನೂ ಅಕ್ರಮವಾಗಿ ಬೀಡಲಾಗುತ್ತಿದೆ: ಇನ್ನುಳಿದ ಬಜ್ಪೆ, ಕೆಂಜಾರು, ಜೊಕುಲ್ ಕಟ್ಟೆ ಇನ್ನಿತರ ಕಡೆಗಳಲ್ಲಿ ಬಹುಮಹಡಿ ಪ್ಲಾಟುಗಳನ್ನು ಕಟ್ಟಲಾಗಿದ್ದು ಇದಕ್ಕೆ ಸೂಕ್ತ ಡೈನೆಜ್ ವ್ಯವಸ್ಥೆಯಿಲ್ಲ. ಹೀಗಾಗಿ ಪ್ಲಾಟಿನ ಡೈನೇಜನ್ನು ಟ್ಯಾಂಕರ್ ನಲ್ಲಿ ತುಂಬಿಸಿ ರಾತ್ರಿ 12 ಗಂಟೆ ಸಮಯದಲ್ಲಿ ಅಕ್ರಮವಾಗಿ ತೋಡಿಗೆ ಬೀಡಲಾಗುತ್ತಿದೆ. ಈಗಾಗಲೇ ಈ ಬಗ್ಗೆ ಏಚ್ಚೆತ್ತ ಗ್ರಾಮಸ್ಥರು ಅಕ್ರಮವಾಗಿ ತೋಡಿಗೆ ಡೈನೇಜ್ ಬೀಡುತ್ತಿದ್ದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆದರೂ ಎಲೆ ಮರೆಯಲ್ಲಿ ಅಕ್ರಮವಾಗಿ ಡೈನೇಜ್ ನೀರನ್ನು ಬೀಡುವುದು ಮುಂದುವರೆದಿದೆ. ಕೆಮಿಕಲ್ ಫಾಕ್ಟರಿಗಳ ಕೆಮಿಕಲ್ ನೀರು ಹಾಗೂ ಡೈನೇಜ್ ನೀರಿನಿಂದಾಗಿ ಗ್ರಾಮಗಳ ಜಲ, ಕೃಷಿ ಭೂಮಿ ವಿಷಮಯವಾಗಿದೆ.
ಏನೆಲ್ಲಾ ದುಷ್ಪರಿಣಾಮವಾಗ್ತಿದೆ…? : ಗ್ರಾಮಗಳ ನೀರಿನ ಮೂಲಗಳಿಗೆ ವಿಷಯುಕ್ತ ಕೆಮಿಕಲ್ಗಳು ಸೇರುವುದರಿಂದ ಇಲ್ಲಿನ ಜನರು ನೀರನ್ನು ದೂರದ ಊರುಗಳಿಂದ ತರುತ್ತಿದ್ದಾರೆ. ಇಲ್ಲಿನ ನೀರಿನಲ್ಲಿದ್ದ ಜಲಚರಗಳಾದ ಮೀನು ಮತ್ತಿತರ ಜೀವಿಗಳು ಸಾವನ್ನಪ್ಪಿದೆ. ಈ ಭಾಗದಲ್ಲಿ ಅನೇಕ ದನಕರುಗಳು, ಪಕ್ಷಿಗಳು ವಿಷಪೂರಿತ ನೀರನ್ನು ಕುಡಿದು ಮರಣಿಸುತ್ತಿವೆ. ಇನ್ನು ಸಾಗುವಳಿ ಮಾಡಲೆಂದು ಕೃಷಿ ಭೂಮಿ ಇಳಿದರೆ ಸಾಕು ಕಾಲಿನಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಅಲ್ಲದೇ ಇಲ್ಲಿನ ಹಲವರಲ್ಲಿ ಈಗಾಗಲೇ ಚರ್ಮ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಬದುಕು ದುಸ್ಥರವಾಗಿದೆ. ಸಮೀಪದ ದೇವಸ್ಥಾನಗಳ ಬಾವಿಗಳೂ ವಿಷಮಯವಾಗಿದ್ದು ದೇವತಾ ಕಾರ್ಯಕ್ಕೂ ತೊಂದರೆಯಾಗಿದೆ.
ಈ ಕುರಿತಂತೆ ಮಾತನಾಡಿದ ಗ್ರಾಮಸ್ಥರು, ಕೆಮಿಕಲ್ ಫಾಕ್ಟರಿಗಳು ನಿಯಮಗಳನ್ನು ಗಾಳಿಗೆ ತೂರಿ ನೀರು, ಕೃಷಿ ಭೂಮಿಯನ್ನು ವಿಷಯಮಯ ಮಾಡುತ್ತಿದೆ. ಅಲ್ಲದೇ ಸೂಕ್ತ ಡೈನೇಜ್ ವ್ಯವಸ್ಥೆಯಿಲ್ಲದ ಅಪಾರ್ಟ್ಮೆಂಟ್ ಗಳು ತಮ್ಮ ಕೊಳಚೆ ನೀರನ್ನು ಅಕ್ರಮವಾಗಿ ಇಲ್ಲಿಗೆ ತಂದು ಬೀಡುತ್ತಿದ್ದಾರೆ. ಇದರಿಂದ ಇಲ್ಲಿ ಜೀವನ ನಡೆಸುವುದು ಕಷ್ಟವಾಗಿದ್ದು, ಜನಪ್ರತಿನಿಧಿಗಳಿಗೆ ಈ ಬಗ್ಗೆ ದೂರನ್ನು ನೀಡಲಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವ ಏಚ್ಚರಿಕೆ ನೀಡಿದ್ದಾರೆ.
ಮಳೆಗಾಲದಲ್ಲಿ ನದಿಗೆ ಈ ನೀರು ಸೇರುವ ಸಾಧ್ಯತೆ: ಇಲ್ಲಿನ ತೋಡಿನಲ್ಲಿ ಹರಿಯುವ ನೀರು ಮಳೆಗಾಲದಲ್ಲಿ ವಿವಿಧ ಗ್ರಾಮಗಳ ಮೂಲಕ ಸಾಗಿ ಮಳವೂರಿನಲ್ಲಿ ನದಿಯನ್ನು ಸೇರುತ್ತದೆ. ಒಂದು ವೇಳೆ ಈ ವಿಷಯುಕ್ತ ನೀರು ನದಿನ್ನು ಸೇರಿದ್ದೇ ಆದಲ್ಲಿ ಪರಿಸರದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿರುವ ಜನರು ಸಂಬಂಧಪಟ್ಟವರು ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ವಿನಂತಿಸಿದ್ದಾರೆ.