ಮಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ಕಾರ್ಯಾಚರಣೆ, ದಂಡ

Spread the love

ಮಂಗಳೂರು:ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ಕಾರ್ಯಾಚರಣೆ, ದಂಡ

ಮಂಗಳೂರು:  ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ ಆರೋಗ್ಯ ಇಲಾಖೆ ಮತ್ತು ಪೊಲೀಸರ ತಂಡವು, 51 ಪ್ರಕರಣಗಳನ್ನು ದಾಖಲಿಸಿ, ದಂಡ ವಿಧಿಸಿದೆ.

ನಗರದ ಫಳ್ನೀರ್, ಅತ್ತಾವರ, ಹಂಪನಕಟ್ಟೆ, ಆರ್.ಟಿ.ಓ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿದ ತಂಡವು ಹೋಟೆಲ್, ಕೆಫೆ, ಟೀ ಸ್ಟಾಲ್, ಅಂಗಡಿ ವಠಾರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗವಾಗಿ ಸಿಗರೇಟ್ ಸೇದುತ್ತಿದ್ದವರಿಗೆ ತಲಾ ರೂ. 200 ವರೆಗೆ ದಂಡ ವಿಧಿಸಿದೆ.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನ ಕಾಯಿದೆ(ಕೋಪ್ಟಾ) ಅನ್ವಯ, ಸಿಗರೇಟ್ ಇಡೀ ಪ್ಯಾಕ್ ಮಾರಾಟ ಮಾಡಬೇಕಿದ್ದು, ಸಿಂಗಲ್ ಸಿಗರೇಟ್ ಮಾರಲು ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಿಂಗಲ್ ಸಿಗರೇಟ್ ಮಾರಾಟ ಮಾಡುತ್ತಿದ್ದ ಅಂಗಡಿ, ಕೆಫೆಗಳಿಗೆ ದಂಡ ವಿಧಿಸಲಾಯಿತು. ಅದೇ ರೀತಿ ಶಾಲಾ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಸೇರಿದಂತೆ ಧೂಮಪಾನ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳಿಗೆ ದಂಡ ವಿಧಿಸಲಾಯಿತು.

ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು. ಈಗಾಗಲೇ ದಂಡ ವಿಧಿಸಿರುವ ಅಂಗಡಿ, ಕೆಫೆಗಳಲ್ಲಿ ಪ್ರಕರಣ ಪುನರಾವರ್ತನೆಯಾದರೆ ಅಲ್ಲಿನ ಟ್ರೇಡ್ ಲೈಸನ್ಸ್ ರದ್ದುಗೊಳಿಸಲು ಮಹಾನಗರಪಾಲಿಕೆಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಲಾಗಿದೆ.

ತಂಬಾಕು ವ್ಯಸನದಿಂದ ಮುಕ್ತರಾಗಲು ಬಯಸುವವರಿಗೆ ವ್ಯಸನ ಮುಕ್ತ ಹೊಂದಲು ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ತಂಬಾಕು ವ್ಯಸನ ಮುಕ್ತ ಕೇಂದ್ರಕ್ಕೆ ಭೇಟಿ ನೀಡಲು ತಿಳಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಹೆಚ್. ಆರ್. ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಂಡದ ಪುಂಡಲೀಕ ಲಕಾಟೆ, ಶೃತಿ ಹಾಗೂ ಪಾಂಡೇಶ್ವರ ಠಾಣೆ ಪೊಲೀಸರು ಭಾಗವಹಿಸಿದ್ದರು.


Spread the love