ಮಂಗಳೂರು: ಅಪಘಾತ ಸೇರಿದಂತೆ ಹಲವಾರು ಕಾರಣಗಳಿಂದ ಮೃತಪಟ್ಟ ಜನರ ವಿವಿಧ ಅಂಗಾಂಗ ಇನ್ನೊಬ್ಬರ ಬಾಳು ಬೆಳಗಲು ಸಹಕಾರಿಯಾಗುತ್ತವೆ ಆದ್ದರಿಂದ ಅಂಗಾಂಗ ದಾನದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಹೇಳಿದರು.
ಅವರು ಶನಿವಾರ ನಗರದ ರೊಸಾರಿಯೊ ಹಾಲ್‍ನಲ್ಲಿ ಮ್ಯಾಂಗಲೋರಿಯನ್ ಡಾಟ್ ಕಾಂ ಹಾಗೂ ಕೆಎಮ್‍ಸಿ ಆಸ್ಪತ್ರೆ ಜಂಟಿಯಾಗಿ ಆಯೋಜಿಸಿದ ಅಂಗಾಂಗಗಳ ದಾನದ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮ್ಯಾಂಗಲೋರಿಯನ್ ಡಾಟ್ ಕಾಂನ ನವೀಕೃತ ವಿನ್ಯಾಸದ ವೆಬ್‍ಸೈಟ್ ಹಾಗೂ ಲಾಂಛನ ಅನಾವರಣಗೊಳಿಸಿ ಮಾತನಾಡಿದರು.
ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರೊಸಾರಿಯೊ ಕ್ಯಾಥೆಡ್ರಲ್ ಇದರ ಧರ್ಮಗುರು ವಂ ಜೆ. ಬಿ ಕ್ರಾಸ್ತಾ ಮಾತನಾಡಿ ದೇವರು ಮಾನವನಿಗೆ ನೀಡಿದ ಜೀವದ ಅಂಗಾಂಗಗಳನ್ನು ದಾನ ಮಾಡಿ ಇನ್ನೊಬ್ಬರಿ ಜೀವಕ್ಕೆ ಜೀವವಾಗುವುದು ಉತ್ತಮ ಕೆಲಸವಾಗಿದೆ. ಅಂಗಾಗ ದಾನದ ಮೂಲಕ ಇತರರ ಜೀವ ಉಳಿಸುವುದು ಮಹಾನ್ ಕಾರ್ಯವಾಗಿದ್ದು ಇಂತಹ ಮಾಹಿತಿ ಕಾರ್ಯಗಾರಗಳ ಮೂಲಕ ಹೆಚ್ಚಿನ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮಂಗಳೂರು ಮಹಾನಗರಪಾಲಿಕೆಯ ಮಾಜಿ ಮೇಯರ್ ಜಸಿಂತಾ ವಿಜಯ ಆಲ್ಫ್ರೆಡ್ ಅಂಗಾಂಗ ದಾನ ಅಭಿಯಾನದ ಫಾರಂ ಬಿಡುಗಡೆಗೊಳಿಸಿ ಮ್ಯಾಂಗಲೋರಿಯನ್ ಡಾಟ್ ಕಾಂನ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕೆಎಂಸಿ ಮಣಿಪಾಲ ಇದರ ಯುರೋಲಿಜಿ ವಿಭಾಗದ ಮುಖ್ಯಸ್ಥರದಾ ಡಾ ಜಿ ಜಿ ಲಕ್ಷ್ಮಣ್ ಪ್ರಭು ಅಂಗಾಂಗ ದಾನದ ಉಪಯೋಗ ಹಾಗೂ ಇತರ ವಿಷಯಗಳ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ 50 ಮಂದಿ ಅಂಗಾಂಗ ದಾನದ ಪ್ರತಿಜ್ಞೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ 102 ವರ್ಷದ ಮೈಕಲ್ ಡಿ’ಸೋಜಾ ಅಂಗಾಂಗ ದಾನದ ಪ್ರತಿಜ್ಞೆ ಮಾಡಿದ್ದು ವಿಶೇಷವಾಗಿತ್ತು.
ಉಡುಪಿ ವಿಭಾಗ ಮುಖ್ಯಸ್ಥ ಮೈಕಲ್ ರೊಡ್ರಿಗಸ್ ಸ್ವಾಗತಿಸಿ, ಮ್ಯಾಂಗಲೋರಿಯನ್ ಡಾಟ್ ಕಾಂ ಸಂಪಾದಕಿ ಹಾಗೂ ಮುಖ್ಯಸ್ಥೆ ವೈಲೆಟ್ ಪಿರೇರಾ ವಂದಿಸಿದರು. ರೋಶನಿ ನಿಲಯ ವಿದ್ಯಾರ್ಥಿಗಳು ಸ್ವಾಗತಿಸಿ ಸಾಹಿಲ್ ರೈ ಕಾರ್ಯಕ್ರಮ ನಿರೂಪಿಸಿದರು.