ಮಂಗಳೂರು: ಸುರತ್ಕಲ್- ಕಾನ – MRPL – ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ಅಯೋಗ್ಯವಾದ ಸ್ಥಿತಿಯಲ್ಲಿದ್ದು ನಿರ್ವಹಣೆಯ ಹೊಣೆ ಹೊತ್ತಿರುವ ಮಹಾನಗರ ಪಾಲಿಕೆ ಅವೈಜ್ಞಾನಿಕ ರೀತಿಯಲ್ಲಿ ದುರಸ್ಥಿಗೊಳಿಸಿರುವುದು ರಸ್ತೆ ಸಮಸ್ಯೆಯನ್ನು ತೀವ್ರಗೊಳಿಸಿದ್ದು ಈ ಹಿನ್ನಲೆಯಲ್ಲಿ ಅಕ್ಟೋಬರ್ 7ರಂದು ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ರಚಿಸಲಾಗಿರುವ ನಾಗರಿಕ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ನಾಗರಿಕ ಸಮಿತಿಯ ಸಂಚಾಲಕ, ಡಿವೈಎಫ್‍ಐ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 10ಕ್ಕೆ ಸುರತ್ಕಲ್ ರೈಲ್ವೇ ಗೇಟ್ ಬಳಿಯಿಂದ ನಗರ ಪಾಲಿಕೆ ಉಪಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಿದ್ದಾರೆ.
MRPL-HPCL-BASF ಹಾಗೂ ಇತರ ಬೃಹತ್ ಕಂಪೆನಿಗಳ ಘನ ವಾಹನಗಳ ಓಡಾಟದಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದೆ. ಜನವಸತಿ ಪ್ರದೇಶಗಳಲ್ಲಿ ಕೈಗಾರಿಕೆಗಳಿಗೆ ಬರುವ ಘನ ವಾಹನಗಳ ಓಡಾಟ ನಡೆಸಬಾರದೆಂಬ ನಿಯಮವಿದ್ದರೂ ಕಂಪೆನಿಗಳು ಕೈಗಾರಿಕೆ ಕಾನೂನುಗಳನ್ನು ಉಲ್ಲಂಘಿಸುತ್ತಿದೆ. ನಗರ ಪಾಲಿಕೆಯೂ ಘನ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲು ಹಿಂದೇಟು ಹಾಕುತ್ತಿದೆ. ಅಲ್ಲದೆ ನಗರ ಪಾಲಿಕೆಗೆ ಈ ಭಾಗದ ನಾಗರಿಕರು ತೆರಿಗೆ ಪಾವತಿಸುತ್ತಿದ್ದರೂ ಪಾಲಿಕೆ ರಸ್ತೆ ಅಭಿವೃದ್ಧಿಗೆ ಕಂಪೆನಿಗಳ ಕಾಲು ಹಿಡಿಯುತ್ತಿರುವುದು ವಿಪರ್ಯಾಸ ಎಂದು ನಾಗರಿಕ ಸಮಿತಿ ಅಭಿಪ್ರಾಯ ಪಟ್ಟಿದೆ.
ಈ ರಸ್ತೆ ಅಭಿವೃದ್ಧಿಯ ಬಗ್ಗೆ ಯಾವುದೇ ನೀಲನಕ್ಷೆ ಮತ್ತು ಕಾಮಗಾರಿಗೆ ಬೇಕಾಗುವ ಅಂದಾಪಟ್ಟಿ ಇಲ್ಲದೆ ಕಂಪೆನಿಗಳ ಮುಂದೆ 50 ಕೋಟಿಯ ಪ್ರಸ್ತಾಪ ಇಟ್ಟಿರುವುದು ಸಂವಿಧಾನಿಕ ಕ್ರಮವಲ್ಲ ಮತ್ತು ಹೋರಾಟವನ್ನು ತಣಿಸುವ ಪ್ರಯತ್ನ ಎಂದು ಹೇಳಿದ್ದಾರೆ. ಸುರತ್ಕಲ್ ಕಾನ ಎಂಆರ್‍ಪಿಎಲ್ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರತಿನಿತ್ಯ ಅಪಘಾತ ಸಂಭವಿಸುತ್ತಿದೆ. ವಾಹನಗಳು ಹಾನಿಗೊಳಗಾಗುತ್ತಿದ್ದು ರಸ್ತೆ ಸಮಸ್ಯೆ ಗಂಭೀರವಾಗಿದ್ದು ಸಾರ್ವಜನಿಕರು ಹೋರಾಟವನ್ನು ಬೆಂಬಲಿಸಬೇಕಾಗಿ ಬಿ.ಕೆ. ಇಮ್ತಿಯಾಜ್ ವಿನಂತಿಸಿದ್ದಾರೆ.