ಮಂಗಳೂರು: ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಸಾವಿನ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಅಡ್ಯಾರು ನಿವಾಸಿಗಳು ಸೋಮವಾರ ಪಾಂಡೇಶ್ವರ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಠಾಣಾಧಿಕಾರಿಯನನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ದಿನಕರ್ ಶೆಟ್ಟಿ ಅವರು ಅಕ್ಷತಾ ಸಾವಿನ ಕುರಿತು ಶೀಘ್ರ ತನಿಖೆಯಾಗುವಂತೆ ರಕ್ಷಾಬಂಧನದ ದಿನದಂದು ಪೋಲಿಸ್ ಕಮೀಷನರ್ ಅವರಿಗೆ ಮನವಿಯನ್ನು ಸಲ್ಲಿಸಲಾಗಿದ್ದು, ತನಿಖೆ ನಡೆಸಿ ಅಕ್ಷತಾ ನಿಘೂಡ ಸಾವಿನ ಸತ್ಯವನ್ನು ಬಯಲು ಮಾಡುವುದಾಗಿ ತಿಳಿಸಿದ್ದರು ಆದರೆ ಈ ವರೆಗೆ ಯಾವುದೆ ರೀತಿಯ ಸಕಾರಾತ್ಮಕ ಬೆಳವಣಿಗೆ ಈ ಪ್ರಕರಣದಲ್ಲಿ ಕಂಡುಬಂದಿಲ್ಲ. ಅಲ್ಲದೆ ಆಕೆಯ ಜೊತೆಗೆ ನಾಪತ್ತೆಯಾಗಿದ್ದ ಮದನ್ ಭಂಡಾರಿ ಕೂಡ ಇನ್ನೂ ಪತ್ತೆಯಾಗಿಲ್ಲ, ಪೋಲಿಸರು ಆತನನ್ನು ಕೂಡ ಪತ್ತೆಹಚ್ಚುವಲ್ಲಿ ವಿಫಲರಾಗಿದ್ದು, ಪ್ರಕರಣದ ಕುರಿತು ಶೀಘ್ರ ತನಿಖೆ ನಡೆಸಿ ಅಕ್ಷತಾ ಕುಟಂಬಕ್ಕೆ ನ್ಯಾಯ ಒದಗಿಸಲು ಪೋಲಿಸ್ ಇಲಾಖೆಗೆ ಒಂದು ತಿಂಗಳ ಗಡುವು ನೀಡಿದ್ದು ಇದಕ್ಕೆ ತಪ್ಪಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಪಾಂಡೇಶ್ವರ ಠಾಣೆಯ ಠಾಣಾಧಿಕಾರಿ ದಿನಕರ್ ಮಾತನಾಡಿ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಇಲಾಖೆ ಮಧನ್ ಭಂಡಾರಿಯನ್ನು ಪತ್ತೆಹಚ್ಚುವ ಕೆಲಸವನ್ನು ಮಾಡುತ್ತಿದ್ದು ಶೀಘ್ರವೇ ಪತ್ತೆಹಚ್ಚುವ ವಿಶ್ವಾಸ ಹೊಂದಿದ್ದು, ಅಕ್ಷತಾ ಸಾವಿನ ನಿಜವಾದ ಕಾರಣ ಬಯಲಾಗಲಿದೆ. ಇಲಾಖೆ ನೊಂದ ಕುಟುಂಬಕ್ಕೆ ಶೀಘ್ರವೇ ನ್ಯಾಯದೊರಕಿಸುವ ಭರವಸೆಯನ್ನು ಅವರು ನೀಡಿದರು.
ಬಿಜೆಪಿ ನಾಯಕ ಪ್ರದೀಪ್ ಕುಮಾರ್ ಮಾತನಾಡಿ ಅಕ್ಷತಾ ನಗರದ ವೆಂಕಟರಮಣ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಮಾಡುತ್ತಿದ್ದು, 2013 ಸಪ್ಟೆಂಬರ್ 21 ರಂದು ನಾಪತ್ತೆಯಾಗಿದ್ದು, 24 ರಂದು ಆಕೆಯ ಶವ ಮುಲಿಹಿತ್ಲು ಐಸ್ ಪ್ಲಾಂಟ್ ಬಳಿ ಪತ್ತೆಯಾಗಿತ್ತು. ಬಳಿಕ ಆಕೆಯ ಹೆತ್ತವರು ಶವವನ್ನು ಗುರುತಿಸಿದ್ದು, ಅಕೆ ನಾಪತ್ತೆಯಾಗಿದ್ದ ದಿನವೇ ಆಕೆಯ ಸಹಪಾಠಿ ಮದನ್ ಭಂಡಾರಿ ಕೂಡ ನಾಪತ್ತೆಯಾಗಿದ್ದು ಈ ವರೆಗೆ ಆತನ ಪತ್ತೆಯಿಲ್ಲ. ಎರಡು ವರುಷಗಳು ಕಳೆದರು ಪ್ರಕರಣದ ನಿಜವಾದ ಕಾರಣವನ್ನು ತಿಳಿಯುವಲ್ಲಿ ಪೋಲಿಸರಿಗೆ ಸಾಧ್ಯವಾಗಿಲ್ಲ. ನಮಗೆ ಸಾವಿನ ನಿಜವಾದ ಕಾರಣ ತಿಳಿಯಬೇಕಿದ್ದು, ಪೋಲಿಸರು ನೀಡಿದ ಆಶ್ವಾಸನೆಯಂತೆ ಕೂಡಲೇ ಪ್ರಕರಣವನ್ನು ತನಿಕೆ ನಡೆಸಿ ನಿಜವಾದ ಕಾರಣವನ್ನು ಬಯಲಿಗೆಳೆಯಬೇಕು ಇದಕ್ಕೆ ತಪ್ಪಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುವುದು ಎಂದರು. ಅಲ್ಲದೆ ಪ್ರಕರಣವನ್ನು ಸಿಒಡಿಗೆ ವಹಿಸುವಂತೆ ಅವರು ಒತ್ತಾಯಿಸಿದರು.
ಪ್ರದೀಪ್ ಶೆಟ್ಟಿ ಅಡ್ಯಾರ್, ಪ್ರಸನ್ನ ಕುಮಾರ್, ಸುಚನ್ ಅಡ್ಯಾರ್, ಸುಧಾಕರ್ ಅಡ್ಯಾರ್, ಬ್ರಿಜೇಶ್ ಚೌಟ ಇತರರು ಉಪಸ್ಥಿತರಿದ್ದರು.