ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಹೊಸ ಮನೆಯ ಕನಸು 2015 ರ ಕ್ರಿಸ್ಮಸ್ ವೇಳೆಗೆ ನನಸಾಗಲು ಸಜ್ಜಾಗಿದೆ. ಮಂಗಳೂರಿನ ಯುನಾಯ್ಟೆಡ್ ಕ್ರಿಶ್ಚಿಯನ್ ಎಸೊಶೀಯೇಶನ್ ಸಂಘಟನೆ ನೇತೃತ್ವದಲ್ಲಿ ಹಾಜಬ್ಬರಿಗೆ ಸುಮಾರು 10 ಲಕ್ಷ ವೆಚ್ಚದ ಮನೆಯನ್ನು ನಿರ್ಮಿಸಿಕೊಡಲು ಭಾನುವಾರ ಚಾಲನೆ ನೀಡಿದೆ.
ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ವ್ಯಾಪಾರ ಮಾಡಿ ತನಗೆ ಲಭಿಸಿದ ಪ್ರಶಸ್ತಿ ಪುರಸ್ಕಾರಗಳ ಮೊತ್ತವನ್ನೆಲ್ಲಾ ತನ್ನ ಊರಿನ ಶಾಲೆಗೆ ಸುರಿದ ಹಾಜಬ್ಬಗೆ ಇದುವರೆಗೂ ತನ್ನ ವಾಸಕ್ಕೆ ಯೋಗ್ಯವಾದ ಮನೆಯನ್ನು ಹೊಂದುವುದು ಸಾಧ್ಯವಾಗಿರಲಲಿಲ್ಲ. ಶಿಥಿಲಗೊಂಡ ಮನೆಯನ್ನು ಒಮ್ಮೆ ದುರುಸ್ತಿ ಮಾಡಿದರೂ ತನಗೊಂದು ಹೊಸ ಮನೆಯನ್ನು ಕಟ್ಟಿಕೊಳ್ಳುವ ಯೋಚನೆಯನ್ನೇ ಮಾಡದ ಹಾಜಬ್ಬ, ತನ್ನ ಊರಿಗೆ ಒಂದು ಶಾಲೆಯನ್ನು ನಿರ್ಮಿಸಿ ಇಂದು ಪಿಯುಸಿ ಹಂತಕ್ಕೆ ತಲುಪಿದೆ.
ಇವರ ಮನೆಯ ಶಿಥಿಲಾವಸ್ಥೆಯನ್ನು ಮನಗಂಡ ಯುನಾಯ್ಟೆಡ್ ಕ್ರಿಶ್ಚಿಯನ್ ಎಸೊಸೀಯೇಶನ್ ಸುಮಾರು 10 ಲಕ್ಷ ವೆಚ್ಚದಲ್ಲಿ ಕೊಣಾಜೆಯ ಹರೇಕಳ ನ್ಯೂ ಪಡ್ಪು ಹಾಜಬ್ಬರ ಮನೆಯ ಪಕ್ಕದಲ್ಲಿ ಹೊಸ ಮನೆ ನಿರ್ಮಿಸಲಾಗುತ್ತಿದ್ದು, ಸುಮಾರು 860 ಚದರ ಅಡಿ ವಿಸ್ತಿರ್ಣದಲ್ಲಿ ತಾರಸಿಯ ಮನೆಯನ್ನು ನಿರ್ಮಿಸಲು ಸಂಘಟನೆ ಚಿಂತನೆ ನಡೆಸಲಿದ್ದಾರೆ. ಮನೆಯ ಕೆಲಸವನ್ನು ಸಂಘಟನೆಯ ಸದಸ್ಯರು ಸ್ವತಃ ಶ್ರಮದಾನದ ಮೂಲಕ ಮನೆಯ ಕೆಲಸ ಪೂರ್ತಿಗೊಳಿಸಲಿದ್ದಾರೆ. ಇದೇ ಡಿಸೆಂಬರ್ ಕ್ರಿಸ್ಮಸ್ ಸಮಯದಲ್ಲಿ ಹೊಸ ಮನೆಯನ್ನು ಹಾಜಬ್ಬರಿಗೆ ಹಸ್ತಾಂತರಿಸಲು ಸಂಘಟನೆ ಉದ್ದೇಶವನ್ನು ಹೊಂದಿದೆ.
ಹಾಜಬ್ಬರ ಮನೆ ನಿರ್ಮಾಣ ಕಾರ್ಯದಲ್ಲಿ ಹಿಂದೂ ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದವರು ಜೊತೆ ಸೇರಿರುವುದು ಎಲ್ಲಾ ಧರ್ಮಗಳ ಸಂಗಮ ಎನ್ನಬಹುದು. ಹಾಜಬ್ಬರ ಮನೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಹಿಂದೂ ಸ್ವಾಮೀಜಿ ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿಯಾದರೆ, ಮನೆ ನಿರ್ಮಾಣಕ್ಕೆ ಹಣಕಾಸು ಜವಾಬ್ದಾರಿ ನಿರ್ವಹಿಸುತ್ತಿರುವುದು ಕ್ರಿಶ್ಚಿಯನ್ ಸಮುದಾಯದ ಸಂಘಟನೆ. ಎರಡು ಸಮುದಾಯವರ ನೆರವನ್ನು ಪಡೆಯುವುದು ಮುಸ್ಲಿಂ ಸಮುದಾಯದ ಹಾಜಬ್ಬ.
ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಕೇಮಾರು ಸ್ವಾಮೀಜಿ ಇಂದು ಭಾವನಾತ್ಮಕ ಸನ್ನೀವೇಶವಾಗಿದ್ದು, ದ.ಕ ಜಿಲ್ಲೆಯ ಕೋಮುಸಾಮರಸ್ಯದ ಭಾಂದವ್ಯಕ್ಕೆ ಅಡಿಗಲ್ಲಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪೆರ್ಮನ್ನೂರು ಚರ್ಚಿನ ಧರ್ಮಗುರು ವಂ ಜೆ ಬಿ ಸಲ್ಡಾನಾ, ಹರೇಕಳ ಮಸೀದಿಯ ಖಾಝೀ ಶರೀಫ್ ನಂದಾವರ, ರಾಜ್ಯ ಆರೋಗ್ಯ ಸಚಿವ ಯು ಟಿ ಖಾದರ್, ಯುಸಿಎ ಅಧ್ಯಕ್ಷ ಆಲ್ಬನ್ ಮಿನೇಜಸ್, ತಾಲೂಕು ಪಂಚಾಯ್ತಿ ಸದಸ್ಯ ಮಹಮ್ಮದ್ ಮುಸ್ತಾಫ, ಹರೇಕಳ ಪಂಚಾಯತಿ ಅಧ್ಯಕ್ಷೆ ಅನಿತಾ ಡಿ’ಸೋಜಾ, ಪಾನಿರು ಚರ್ಚಿನ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಕಾರ್ಯದರ್ಶಿ ಫಿಲಿಪ್ ಡಿ’ಸೋಜಾ, ಪಿಯೂಸ್ ಡಿ’ಸೋಜಾ ಪೆರ್ಮನ್ನೂರು ಉಪಸ್ಥಿತರಿದ್ದರು.
ಅಕ್ಷರ ಸಂತ ಹಾಜಬ್ಬ ಮ್ಯಾಂಗಲೋರಿಯನ್ ಡಾಟ್ ಕಾಮ್ ಇದರ ದಶಮಾನೋತ್ಸವ ವರ್ಷದ ಅಕ್ಷರ ಕ್ರಾಂತಿ ಸಂತ ಎಂದು ಸನ್ಮಾನಿತರಾಗಿದ್ದು ಅವರ ನೂತನ ಮನೆಯ ಕನಸು ಶೀಘ್ರವೇ ನನಸಾಗಲಿ ಎಂಬುದು ನಮ್ಮ ಹಾರೈಕೆ.