ಮಂಗಳೂರು: ರಾಜ್ಯದ ಆರೋಗ್ಯ ಸಚಿವ ಯುಟಿ ಖಾದರ್ ಮತ್ತೆ ಪುನಃ ಸುದ್ದಿಯಲ್ಲಿದ್ದಾರೆ. ಅವರು ಯಾವುದೋ ಹಗರಣದಲ್ಲಿ ಸಿಲುಕಿ ಹಾಕಿಕೊಂಡು ಸುದ್ದಿಯಲ್ಲಿಲ್ಲ ಬದಲಾಗಿ ಗಾಯಗೊಂಡ ವ್ಯಕ್ತಿಯೋರ್ವರನನು ಸ್ವತಃ ತನ್ನ ಕಾರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಭಾನುವಾರ ಆರೋಗ್ಯ ಸಚಿವ ಯು ಟಿ ಖಾದರ್ ತಮ್ಮ ರಂಜಾನ್ ಉಪವಾಸ ಬಿಟ್ಟ ಬಳಿಕ ಕೊಣಾಜೆಯಲ್ಲಿ ಇತ್ತೀಚೆಗೆ ಅಂಗಡಿಗಳಿಗೆ ನಡೆದ ಅಗ್ನಿ ದುರಂತದ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದ ವೇಳೆ ನಾಟೆಕಲ್ ಕ್ರಾಸ್ ಬಳಿ ಮಾರುತಿ ರಿಟ್ಝ್ ಕಾರೊಂದು ರಸ್ತೆ ಬದಿ ಗೋಡೆಗೆ ಅಪ್ಪಳಿಸಿ ಚಾಲಕ ಕುಲಶೇಖರ ನಿವಾಸಿ ನೀಲು ಗಾಯಗೊಂಡಿದ್ದರು. ಇದನ್ನು ಕಂಡ ಸಚಿವ ಖಾದರ್ ತಕ್ಷಣ ತನ್ನ ಸರಕಾರಿ ಕಾರನಲ್ಲಿ ನೀಲು ಅವರನ್ನು ಹಾಕಿಕೊಂಡು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ, ಮನೆಯವರಿಗೆ ಸುದ್ದಿ ಮುಟ್ಟಿಸಿ, ಮನೆಯವರು ಬರುವ ತನಕ ಕಾದು ಕುಳಿತು ಬಂದ ಬಳಿಕ ಮನೆಯವರಿಗೆ ಸಮಾಧಾನ ತಿಳಿಸಿ ತೆರಳಿದರು.
ಈ ಮೊದಲು ಹಲವು ಬಾರಿ ಇಂತಹ ಘಟನೆಗಳು ಜರುಗಿದಾಗ ಕೂಡ ಯುಟಿ ಖಾದರ್ ಮಾನವೀಯತೆ ಮರೆದಿದ್ದರು. ಅಲ್ಲದೆ ಕಳೆದ ರಂಝಾನ್ ಇಫ್ತಾರ್ ಸಂದರ್ಭ ಇಂತಹುದೇ ಘಟನೆ ಬೆಂಗಳೂರಿನಲ್ಲಿ ನಡೆದಾಗ ಗಾಯಾಳುಗಳನ್ನು ಕಾರಲ್ಲಿ ಕಳುಹಿಸಿ ಯು.ಟಿ.ಖಾದರ್ ಇಫ್ತಾರ್ ಗೆ ಆಟೋದಲ್ಲಿ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು.