ಮಂಗಳೂರು : ಮಂಗಳೂರು ಆಕಾಶವಾಣಿಯು ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಬೆಳಿಗ್ಗೆ 9.30ರಿಂದ 10 ಗಂಟೆಯವರೆಗೆ ಕರಾವಳಿ ಮತ್ತು ಒಳನಾಡು ಮೀನುಗಾರಿಕೆ ಇಲಾಖೆಯ ಯೋಜನೆಗಳು, ಇಲಾಖೆಯ ಸೌಲಭ್ಯಗಳು, ಜವಾಬ್ದಾರಿಯುತ ಮೀನುಗಾರಿಕೆಯಲ್ಲಿ ಮಹಿಳೆಯರ ಪಾತ್ರ ಕುರಿತು “ಜಲಸಿರಿ” ವಿನೂತನ ಕಾರ್ಯಕ್ರಮವನ್ನು ಪ್ರಸಾರಮಾಡುತ್ತದೆ. ಮೀನುಗಾರರ ಕಲ್ಯಾಣ ಕಾರ್ಯಕ್ರಮಗಳೂ, ಮತ್ಸ್ಯಾಶ್ರಯ, ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆಗಳು, ಮೀನು ಮಾರಾಟ ವ್ಯವಸ್ಥೆ, ಒಳನಾಡು ಮೀನುಗಾರಿಕೆಯ ಆಭಿವೃದ್ಧಿ, ಅಲಂಕಾರಿಕ ಮೀನು ಕೃಷಿಯಲ್ಲಿ ಇರುವ ಅವಕಾಶಗಳು ಮತ್ಸ್ಯ ಸಂಪನ್ಮೂಲದ ಸಂರಕ್ಷಣೆ ಮುಂತಾದ ವಿಷಯಗಳ ಕುರಿತು ಚರ್ಚೆ, ಸಂವಾದ ಕಾರ್ಯಕ್ರಮ ಹಾಗೂ ಫೋನ ಇನ್ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮದಲ್ಲಿ ಶ್ರೋತೃಗಳು ನೇರವಾಗಿ ಭಾಗವಹಿಸಲು 0824-2211999 ಅಥವಾ 8277038000 ದೂರವಾಣಿ ಸಂಖ್ಯೆಗೆ ಕರೆಮಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಮೇ 13ರಂದು ಪ್ರಸಾರವಾಗುವ ಕಾಯಕ್ರಮದಲದಲ್ಲಿ ಮೀನುಗಾರ ಮಹಿಳೆಯರ ಸಾಮಾಜಿಕ ಸಬಲೀಕರಣದ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರು ಮೀನುಗಾರಿಕಾ ಕಾಲೇಜಿನ ನಿವೃತ್ತ ಪ್ರೊಫೆಸರ್ ಡಾ. ರಾಮಚಂದ್ರ ಭಟ್, ನಂತರ ಮೇ 16ರ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕು ಹಸಿ ಮೀನುಗಾರರ ಮಾರಾಟಗಾರರ ಸಂಘದ ಅದ್ಯಕ್ಷರಾದ ಎ.ಬಿ.ಹೆಚ್. ಸುವರ್ಣ ಸಾಲಿಯಾನ್ ಅವರೊಡನೆ ಸಂದರ್ಶನ ಕಾರ್ಯಕ್ರಮ ಪ್ರಸಾರವಾಗುತ್ತದೆ. ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ದಿವ್ಯಾ ಬಿ.ಎಲ್ ಅವರು ಮತ್ಸ್ಯ ಮಹಿಳಾ ಸ್ವಾವಲಂಬನಾ ಯೋಜನೆ, ಕೆ.ಎಫ್.ಡಿ.ಯ ವ್ಯವಸ್ಥಾಪನಾ ನಿರ್ದೇಶಕರಾದ ವಿ.ಕೆ. ಶೆಟ್ಟಿ ಅವರು ಮೀನು ಮಾರಾಟ ವ್ಯವಸ್ಥೆಯ ಅಭಿವೃದ್ಧಿ ಯೋಜನೆಗಳ ಕುರಿತು ತಿಳಿಸಲಿದ್ದಾರೆ.
ಸಹಾಯಕ ನಿಲಯ ನಿರ್ದೇಶಕ ಹಾಗೂ ಕಾರ್ಯಕ್ರಮ ಮುಖ್ಯಸ್ಥರಾದ ಡಾ ವಸಂತಕುಮಾರ ಪೆರ್ಲ ಅವರು ಮೀನುಗಾರಿಕೆಯ ಉಪನಿರ್ದೇಶಕರಾದ ಕೆ. ಗಣೇಶ ಅವರ ಜೊತೆಗೂಡಿ ಕಾರ್ಯಕ್ರಮದ ರೂಪುರೇಷೆಯನ್ನು ತಯಾರಿಸಿದ್ದಾರೆ. ನಿಲಯದ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಹೊಳ್ಳ ಹಾಗೂ ಡಾ ಟಿ. ಶ್ಯಾಂಪ್ರಸಾದ ಅವರು ಒಟ್ಟು 15 ಕಂತುಗಳಲ್ಲಿ ಪ್ರಸಾರವಾಗುವ “ಜಲಸಿರಿ” ಕಾರ್ಯಕ್ರಮವನ್ನು ಸಂಯೋಜಿಸಿ, ಧ್ವನಿ ಮುದ್ರಿಸಿ, ವಿಶೇಷ ವಿನ್ಯಾಸದಲ್ಲಿ ಪ್ರಸ್ತುತ ಪಡಿಸುತ್ತಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಮೀನುಗಾರಿಕಾ ಮಹಾವಿಶ್ವವಿದ್ಯಾನಿಲಯ, ಕರ್ನಾಟಕಾ ಮೀನುಗಾರಿಕಾ ಅಭಿವೃದ್ಧಿ ನಿಗಮ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್ ಹಾಗೂ ಮೀನುಗಾರಿಕೆ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಒಟ್ಟು 15 ದಿನಗಳ ಕಾಲ ನಿರಂತರವಾಗಿ ಮಂಗಳೂರು ಆಕಾಶವಾಣಿಯಿಂದ ಬಿತ್ತರವಾಗುವ ಈ ಕಾರ್ಯಕ್ರಮವನ್ನು ಎಫ್.ಎಮ್. ತರಂಗಾಂತರ 100.3 ಮೆ.ಹ. ಮೇಡಿಯಂ ವೇವ್ ತರಂಗಾಂತರ 1089 ಕಿ. ಹ. ಅಥವಾ 272.5 ಮೀಟರ್ಸ್‍ನಲ್ಲಿ ಕೇಳಬಹುದು.