ಮಂಗಳೂರು : ಆದೇಶ ಉಲ್ಲಂಘಿಸಿ ಮೀನುಗಾರಿಕೆ ನಡೆಸಿದರೆ ಸೂಕ್ತ ಕ್ರಮ
ಮಂಗಳೂರು: ಕರ್ನಾಟಕ ಕರಾವಳಿ ಮೀನುಗಾರಿಕೆ (ನಿಯಂತ್ರಣ) ಕಾಯ್ದೆ, 1986 ಅನ್ವಯ ಕೋವಿಡ್-19 (ಕೋರೋನಾ ಸಾಂಕ್ರಾಮಿಕ ಕಾಯಿಲೆ) ಲಾಕ್‍ಡೌನ್ ಹಿನ್ನಲೆಯಲ್ಲಿ ಮೀನುಗಾರಿಕೆ ನಿಷೇಧ ಅವಧಿಯನ್ನು ಪರಿಷ್ಕರಿಸಿದ್ದು ಅದರಂತೆ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಯಾವುದೇ ಬಲೆಗಳನ್ನು / ಸಾಧನಗಳನ್ನು ಉಪಯೋಗಿಸಿ ಎಲ್ಲಾ ಯಾಂತ್ರೀಕೃತ ದೋಣಿಗಳ ಮುಖಾಂತರ ಹಾಗೂ 10 ಅಶ್ವಶಕ್ತಿ ಸಾಮಥ್ರ್ಯಕ್ಕಿಂತ ಮೇಲ್ಪಟ್ಟ ಇನ್‍ಬೋರ್ಡ್ ಅಥವಾ ಔಟ್‍ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕೆ ಚಟುವಟಿಕೆಯನ್ನು ಜೂನ್ 15 ರಿಂದ ಜುಲೈ 31 ರವರೆಗೆ (ಉಭಯ ದಿನಗಳು ಸೇರಿ) ಒಟ್ಟು 47 ದಿನಗಳ ನಿಷೇಧವನ್ನು ಹೇರಿ ಆದೇಶ ಹೊರಡಿಸಿದೆ.
ದೋಣಿಯನ್ನು ಸಾಗಿಸುವ ಉದ್ದೇಶಕ್ಕಾಗಿಯೇ 10 ಅಶ್ವಶಕ್ತಿಯವರೆಗಿನ ಸಾಮಥ್ರ್ಯದ ಮೋಟಾರೀಕೃತ ಇಂಜಿನ್ ಹಾಗೂ ಸಾಂಪ್ರದಾಯಿಕ / ನಾಡದೋಣಿಗಳು ಕರಾವಳಿ ಮೀನುಗಾರಿಕೆಯನ್ನು ಕೈಗೊಳ್ಳಲು ಅನುಮತಿಸಿದೆ.
ಮೀನುಗಾರಿಕೆ ನಿಷೇಧಿಸಿದ ಸರ್ಕಾರದ ಆದೇಶವನ್ನು ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕೆ ಕಾಯ್ದೆ-1986ರಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುವುದಲ್ಲದೇ ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುತ್ತಾರೆ. ಕರಾವಳಿ ಪ್ರದೇಶದ ಎಲ್ಲಾ ಮೀನುಗಾರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಿರುವುದರಿಂದ ಎಲ್ಲಾ ಮೀನುಗಾರರು ಈ ಆದೇಶವನ್ನು ಪಾಲಿಸಿ ಸರ್ಕಾರದೊಂದಿಗೆ ಸಹಕರಿಸುವಂತೆ ಮಂಗಳೂರು ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.