ಮಂಗಳೂರು| ಆರೋಪಿ ಜೊತೆ ಸೆಲ್ಫಿ: ಪೊಲೀಸ್ ಕಾನ್ ಸ್ಟೇಬಲ್ ಅಮಾನತು

Spread the love

ಮಂಗಳೂರು| ಆರೋಪಿ ಜೊತೆ ಸೆಲ್ಫಿ: ಪೊಲೀಸ್ ಕಾನ್ ಸ್ಟೇಬಲ್ ಅಮಾನತು

ಮಂಗಳೂರು: ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಜೊತೆಗೆ ಇಲ್ಲಿಯ ಉರ್ವ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಪೀಟರ್ ಡಿಸೋಜ ಸೆಲ್ಪಿ ತೆಗೆಸಿಕೊಂಡಿದ್ದು, ಈ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಪೀಟರ್ ಡಿಸೋಜ ಅವರನ್ನು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಅಮಾನತು ಮಾಡಿದ್ದಾರೆ. ಈ ಘಟನೆ ಸಂಬಂಧ ಉರ್ವ ಠಾಣೆಯ ಇನ್ಸ್ಪೆಕ್ಟರ್ (ಭಾರತಿ) ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮಕೈಗೊಂಡಿದ್ದಾರೆ.

ತನಿಖೆಗೆ ತೆರಳಿದ್ದ ಸಮಯದಲ್ಲಿ ಆರೋಪಿ ರಾಜ್ ಕುಮಾರ್ ಜೊತೆ ಪೀಟರ್ ಡಿಸೋಜ ಸೆಲ್ಪಿ ತೆಗೆಸಿಕೊಂಡಿರುವುದು ಇಲಾಖಾ ಶಿಸ್ತಿನ ಉಲ್ಲಂಘನೆ. ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಠಾಣೆಯ ಇನ್ಸ್ಪೆಕ್ಟರ್ ಅವರು ಈ ಘಟನೆಯ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಹಾಗಾಗಿ ಅವರ ವಿರುದ್ಧವೂ ಶಿಸ್ತು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಇ-ವಾಣಿಜ್ಯ ಸಂಸ್ಥೆ ಅಮೆಜಾನ್ಗೆ ವಂಚಿಸಿದ್ದ ಪ್ರಕರಣ ಸಂಬಂಧ ಆರೋಪಿಗಳಾದ ರಾಜಸ್ಥಾನದ ರಾಜ್ಕುಮಾರ್ ಮೀನಾ (23) ಹಾಗೂ ಸುಭಾಷ್ ಗುರ್ಜರ್ (27) ಎಂಬುವರನ್ನು ತಮಿಳುನಾಡಿನ ಸೇಲಂ ಪೊಲೀಸರು ಬಂಧಿಸಿದ್ದರು. ನಕಲಿ ಗುರುತು ತೋರಿಸಿ ಅಮೆಜಾನ್ನಿಂದ ₹11.45 ಲಕ್ಷ ಮೌಲ್ಯದ ಸಾಮಗ್ರಿ ತರಿಸಿಕೊಂಡು, ಅದನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸಿದ ಪ್ರಕರಣ ಸಂಬಂಧ ಉರ್ವ ಠಾಣೆಯ ಪೊಲೀಸರು ಈ ಇಬ್ಬರು ಆರೋಪಿಗಳನ್ನು 2024ರ ನವೆಂಬರ್ನಲ್ಲಿ ವಾರಂಟ್ ಮೇಲೆ ನಗರಕ್ಕೆ ಕರೆತಂದಿದ್ದರು.

ತನಿಖೆ ಸಲುವಾಗಿ ಆರೋಪಿಗಳನ್ನು ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ಕರೆದೊಯ್ಯಲಾಗಿತ್ತು. ‘ವಿಮಾನಯಾನದ ವೆಚ್ಚವನ್ನು ಆರೋಪಿಗಳೇ ಭರಿಸಿದ್ದರು. ತನಿಖೆಗೆ ರಾಜಸ್ಥಾನಕ್ಕೆ ಹೋಗಿದ್ದಾಗ ಅಲ್ಲಿನ ಕೆಲವು ಪ್ರವಾಸಿ ತಾಣಗಳಿಗೂ ಪೊಲೀಸ್ ಇನ್ಸ್ಪೆಕ್ಟರ್ ಭಾರತಿ ಹಾಗೂ ಸಿಬ್ಬಂದಿ ಆರೋಪಿಗಳ ಜೊತೆ ಭೇಟಿ ನೀಡಿದ್ದರು’ ಎಂಬ ಆರೋಪವಿದೆ. ಆದರೆ, ಪೊಲೀಸ್ ಕಮಿಷನರ್ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

‘ಪ್ರಕರಣದ ತನಿಖಾಧಿಕಾರಿಯಾಗಿದ್ದ ಇನ್ಸ್ಪೆಕ್ಟರ್ ಅವರು ಸಿಬ್ಬಂದಿ ಜೊತೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜಸ್ಥಾನದ ಜೈಪುರಕ್ಕೆ ವಿಮಾನದಲ್ಲಿ ತೆರಳಿದ್ದರು. ಅದಕ್ಕೆ ಪರಿಚಯದ ವ್ಯಕ್ತಿಯ ಮೂಲಕ ವಿಮಾನದ ಟಿಕೆಟ್ ಕಾಯ್ದಿರಿಸಿದ್ದ ಅವರು ನಂತರ ಹಣ ಪಾವತಿಸಿದ್ದಾರೆ. ಆರೋಪಿಯ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಲ್ಲ’ ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

‘ಪ್ರಕರಣ ಆರೋಪಿಗಳನ್ನು ಜೈಲಿನಲ್ಲಿಡುವ ಬದಲು ಠಾಣೆಯಲ್ಲೇ ಇಟ್ಟುಕೊಂಡು ಅವರಿಗೆ ಐಷಾರಾಮಿ ವ್ಯವಸ್ಥೆ ಕಲ್ಪಿಸಲಾಗಿದೆ. ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಆರೋಪಿಗಳಿಂದಲೇ ಕಾರ್ಯಾಗಾರ ನಡೆಸಲಾಗಿದೆ’ ಎಂಬ ಆರೋಪಗಳೂ ಉರ್ವ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಮೇಲಿವೆ. ಕುರಿತ ಚಿತ್ರಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.

ಉರ್ವ ಠಾಣೆಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಗಳನ್ನು ಪರಿಶೀಲಿಸಿದ್ದೇವೆ. ಪೊಲೀಸ್ ವಶದಲ್ಲಿದ್ದ ಆರೋಪಿಯನ್ನು ಠಾಣೆಯ ಸೆಲ್ನಲ್ಲೇ ಇರಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ಮಾತ್ರ ಹೊರಗೆ ಕರೆತರಲಾಗಿತ್ತು. ಆರೋಪಿಗಳಿಗೆ ಯಾವುದೇ ವಿಶೇಷ ಅತಿಥ್ಯ ನೀಡಿದ್ದು ಕಂಡುಬಂದಿಲ್ಲ. ಆರೋಪಿಯ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಮೂಡುಬಿದಿರೆಯ ಭುವನಜ್ಯೋತಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಠಾಣೆಗೆ ಬಂದು, ಇನ್ಸ್ಪೆಕ್ಟರ್ ಅವರನ್ನು ಭೇಟಿ ಮಾಡಿದ್ದರು. ಆಗ ನೆಲದಲ್ಲಿ ಕುಳಿತಿದ್ದ ಆರೋಪಿಯು ಮೇಲಕ್ಕೆ ಎಳುತ್ತಿರುವುದು ಕಂಡುಬಂದಿದೆ. ಆರೋಪಿಯಿಂದ ಯಾವುದೇ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮ ನಡೆಸಿಲ್ಲ’ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments