ಮಂಗಳೂರು: ಅರ್ಥಾ ಪೆರ್ಲ ಅವರು ಮಂಗಳೂರು ವಿಶ್ವವಿದ್ಯಾಲಯವು ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಇಂಗ್ಲಿಷ್ ಎಂ.ಎ. ಪರೀಕ್ಷೆಯಲ್ಲಿ ನಾಲ್ಕು ನಗದು ಪುರಸ್ಕಾರ ಹಾಗೂ ಬಂಗಾರದ ಪದಕಗಳೊಂದಿಗೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಲೇಖಕಿ ಮತ್ತು ಕವಯಿತ್ರಿಯಾಗಿಯೂ ಹೆಸರು ಮಾಡಿರುವ ಇವರು, ಪ್ರಸ್ತುತ ನಿಟ್ಟೆ ವಿಶ್ವವಿದ್ಯಾಲಯದ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿಭಾವಂತ ಭರತನಾಟ್ಯ ಕಲಾವಿದೆಯಾಗಿರುವ ಈಕೆ ಮೈಸೂರು ದಸರಾ, ರಾಷ್ಟ್ರೀಯ ಯುವಜನೋತ್ಸವ, ಕರಾವಳಿ ಉತ್ಸವ, ಚೆನ್ನೈ ಕನ್ನಡ ಸಂಘ ಅಲ್ಲದೆ ಬೆಂಗಳೂರು, ಹಾಸನ, ಕೇರಳ ಮೊದಲಾದೆಡೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶಿಸಿದ್ದಾರೆ. ಮೊದಲ ದರ್ಜೆಯಲ್ಲಿ ಭರತನಾಟ್ಯದ ವಿದ್ವತ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಅಭ್ಯಸಿಸುತ್ತಿದ್ದು, ಸ್ನಾತಕೋತ್ತರ ಇಂಗ್ಲಿಷ್ ಡಿಪ್ಲೊಮಾ ಅಧ್ಯಯನ ಮಾಡುತ್ತಿದ್ದಾರೆ.
ಬೆಂಗಳೂರು ದೂರದರ್ಶನದಲ್ಲಿ ಭರತನಾಟ್ಯದ ’ಬಿ’ ಗ್ರೇಡ್ ಕಲಾವಿದೆಯಾಗಿದ್ದಾರೆ. ೧೯೯೭ ರಲ್ಲಿ ಇವರ ಕವನ ಸಂಕಲನ ’ನನ್ನ ಪುಟ್ಟ ತಮ್ಮ’ ಪ್ರಕಟವಾಗಿದ್ದು, ಉಡುಪಿಯಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ಸಚಿವ ಡಾ. ವಿ.ಎಸ್. ಆಚಾರ್ಯ ಬಿಡುಗಡೆಗೊಳಿಸಿದ್ದರು. ಹಲವು ಸಾಹಿತ್ಯ ಸಮ್ಮೇಳನ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ’ಬಿಜ಼್ ಬಜ಼್’ ಎಂಬ ಇಂಗ್ಲಿಷ್ ಪತ್ರಿಕೆ ನಡೆಸಿದ ಅಖಿಲ ಭಾರತ ಇಂಗ್ಲಿಷ್ ಕವನ ರಚನಾ ಸ್ಪರ್ಧೆಯಲ್ಲಿ ಮೂರು ಬಾರಿ ದ್ವಿತೀಯ ಹಾಗೂ ಒಂದು ಬಾರಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇವರ ಕಥೆ ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದು, ಆಕಾಶವಾಣಿಯಲ್ಲೂ ಹಲವು ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಪತ್ರಿಕೆಗಳಲ್ಲಿ ಶಾಸ್ತ್ರೀಯ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳ ವಿಮರ್ಶೆ ಪ್ರಕಟಿಸುತ್ತಿದ್ದಾರೆ. ಹಲವು ಟಿ. ವಿ. ವಾಹಿನಿಗಳಲ್ಲಿ ಇವರ ಭರತನಾಟ್ಯ ಪ್ರಸಾರವಾಗಿದೆ. ಅರ್ಥಾ ಪೆರ್ಲ ಅವರು ಕವಿ-ಸಾಹಿತಿ ದಂಪತಿಗಳಾದ ಡಾ. ವಸಂತಕುಮಾರ ಪೆರ್ಲ ಹಾಗೂ ಕೆ. ಶೈಲಾಕುಮಾರಿಯವರ ಹಿರಿಯ ಪುತ್ರಿ.