ಮಂಗಳೂರು: ‘ಇದು ಹಿಂದೂರಾಷ್ಟ್ರ’ ಎಂದ ಯುವಕನಿಗೆ ಸಾರ್ವಜನಿಕರಿಂದ ಥಳಿತ!
ಮಂಗಳೂರು: “ಭಾರತ ಹಿಂದೂರಾಷ್ಟ್ರ” ಎಂದ ಯುವಕನೊಬ್ಬನ ಮೇಲೆ ಸಾರ್ವಜನಿಕರ ಗುಂಪೊಂದು ಅಮಾನವೀಯ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನ ಫೋರಂ ಪಿಜ್ಜಾ ಮಾಲ್ ನಲ್ಲಿ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಬಂಟ್ವಾಳದ ಮಂಜುನಾಥ್ ಎಂದು ಗುರುತಿಸಲಾಗಿದ್ದು ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಪಾಂಡೇಶ್ವರ ಠಾಣೆಯಲ್ಲಿ ದುರು ದಾಖಲಾಗಿದ್ದು ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಫಿ ಸೇವನೆಗಾಗಿ ಮಂಗಳೂರಿನ ನಗರದ ಫೋರಂ ಫಿಜ್ಜಾ ಮಾಲ್ಗೆ ಬಂದಿದ್ದ ಬಂಟ್ವಾಳದ ಯುವಕ ಅಲ್ಲಿ ಕಾಲೇಜು ವಿದ್ಯಾರ್ಥಿಗಳು ಯುವತಿಯರನ್ನು ಚುಡಾಯಿಸುವುದನ್ನು ಕಂಡಿದ್ದಾನೆ. ಅಲ್ಲದೆ “ಇಲ್ಲಿ ಹೀಗೆ ಮಾಡುವುದು ತಪ್ಪು, ಇದು ಹಿಂದೂರಾಷ್ಟ್ರ” ಎಂದು ಬುದ್ದಿವಾದ ಹೇಳಿದ್ದಾನೆ. ಇದರಿಂದ ಕೆರಳಿದ ಗುಂಪು ದಿಢೀರನೆ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕ ಮಂಜುನಾಥ್ ನನ್ನುಅಟ್ಟಾಡಿಸಿಕೊಂಡು ಹೊಡೆದ ಗುಂಪು ಆತನನ್ನು ಸುತ್ತುವರಿದು “ಈಗೇನು ಹೇಳುವೆ ಹೇಳು ನೋಡೋಣ” ಎಂದು ಆವಾಜ್ ಹಾಕಿದೆ.
ಆಗ ಮಂಜುನಾಥ್ ಭಯವಾಗಿ ಅಲ್ಲಿಂದ ತಪ್ಪಿಸಿಕೊಂಡು ತೆರಳಲು ಯತ್ನಿಸಿದ್ದಾನೆ. ಆದರೆ ಅದಕ್ಕೆ ಅವಕಾಶ ನಿಡದೆ ಗುಂಪು ಮತ್ತೆ ಹಲ್ಲೆ ಮಾಡಿದೆ. ಆ ವೇಳೆ ಗುಂಪಿನ ಸದಸ್ಯನೊಬ್ಬ ಇದನ್ನು ಮೊಬೈಲ್ ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದು ಅದು ವೈರಲ್ ಆಗಿತ್ತು.
ಘಟನೆ ಕುರಿತಂತೆ ಮಂಜುನಾಥ್ ಪೋಲೀಸರಿಗೆ ದೂರು ಕೊಟ್ಟಿದ್ದು ಇದೀಗ ಪೋಲೀಸರು ಮೊಹಿಯುದ್ದೀನ್ ಸಫಾನ್, ಅಬ್ದುಲ್ ರಹೀಂ ಸಾದ್ ಹಾಗೂ ಇನ್ನೋರ್ವ ಬಾಲಕನನ್ನು ಬಂಧಿಸಿದ್ದಾರೆ.
ಘಟನೆಯಲ್ಲಿ ತೊಡಗಿದ್ದವರ ಮಾಹಿತಿ ಲಭಿಸಿದೆ, ಕೆಲವರು ತಲೆಮರೆಸಿಕೊಂಡಿದ್ದು ಶೋಧಕಾರ್ಯ ನಡೆದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ಪೋಲೀಸರು ಮಾಹಿತಿ ಕೊಟ್ಟಿದ್ದಾರೆ.