ಮಂಗಳೂರು: ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಬರುವ ಈದ್ ಮಿಲಾದ್ ಹಬ್ಬದ ನಿಮಿತ್ತ, ಸಾರ್ವಜನಿಕ ರಸ್ತೆಗಳಲ್ಲಿ ನಡೆಸಲ್ಪಡುವ ಮೆರವಣಿಗೆಗಳನ್ನು ಮತ್ತು ಜಾಥಾಗಳನ್ನು ಶಿಸ್ತು ಬದ್ಧಗೊಳಿಸುವ ನಿಟ್ಟಿನಲ್ಲಿ ಹಾಗೂ ಜಿಲ್ಲೆಯಲ್ಲಿ ಸಾಮರಸ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಚರ್ಚಿಸಲು ಡಿ.05 ರಂದು ಪ್ರಮುಖ ಮುಖಂಡರುಗಳ ಹಾಗೂ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಲಾಗಿರುತ್ತದೆ. ಸಭೆಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮತ್ತು ಇನ್ನಿತರ ಹಬ್ಬಗಳ ಪ್ರಯುಕ್ತ ನಡೆಸಲ್ಪಡುವ ಜಾಥಾ, ಮೆರವಣಿಗೆಗಳು ಮುಂತಾದುವುಗಳ ಕುರಿತು ಚರ್ಚಿಸಲಾಗಿರುತ್ತದೆ. ಇದರಂತೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮತ್ತು ಯಾವುದೇ ಸಾರ್ವಜನಿಕರಿಗೆ ತೊಡಕಾಗದಂತೆ ಜಾಥಾ ಮತ್ತು ಮೆರವಣಿಗೆಗಳನ್ನು ನಡೆಸುವ ಕುರಿತು ಮುಖಂಡರುಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿರುತ್ತಾರೆ. ಸಭೆಯಲ್ಲಿ ಮೆರವಣಿಗೆ ಮತ್ತು ಜಾಥಾಗಳಿಂದ ಸಾರ್ವಜನಿಕರಿಗೆ ಆಗುವ ತೊಡಕುಗಳ ಕುರಿತು ಮತ್ತು ಮೋಟಾರು ವಾಹನ ಕಾಯಿದೆ ಮತ್ತು ರಸ್ತೆ ನಿಯಮವನ್ನು ಉಲ್ಲಂಘಿಸುತ್ತಿರುವ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಮತ್ತು ಚರ್ಚೆ ನಡೆದ ನಂತರ, ಕೆಲವನ್ನು ತೀರ್ಮಾನಿಸಲಾಯಿತು.
1) ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ದಕ್ಕೆಯಾಗದಂತೆ ಕೇವಲ ಕಾಲ್ನಡಿಗೆ ಮೆರವಣಿಗೆಯನ್ನು ಸಂಬಂಧಪಟ್ಟ ಜಮಾಅತ್ ವ್ಯಾಪ್ತಿಗೆ ಸೀಮಿತಗೊಳಿಸಿ ನಡೆಸಲು ಮುಖಂಡರು ಒಪ್ಪಿರುತ್ತಾರೆ.
2) ವಾಹನಗಳ ಜಾಥಾ ಹೊರತು ಪಡಿಸಿ, ಕಾಲ್ನಡಿಗೆ ಮೆರವಣಿಗೆಯನ್ನು ಮಾತ್ರ ಶಾಂತಿಯುತವಾಗಿ ನಡೆಸಲು ಒಪ್ಪಿರುತ್ತಾರೆ.
3) ಯಾವುದೇ ದ್ವಿಚಕ್ರ ವಾಹನ ಸಹಿತ ಅಥವಾ ಕಾರು, ಬಸ್ಸು, ಲಾರಿ ಮುಂತಾದ ವಾಹನಗಳ ಜಾಥಾ ನಡೆಸದಿರಲು ಸಭೆಯಲ್ಲಿ ಒಮ್ಮತದಿಂದ ಚರ್ಚಿಸಲಾಗಿದೆ.
4) ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ದಕ್ಕೆಯಾಗದಂತೆ ಮತ್ತು ರೋಗಿಗಳ ಅಂಬ್ಯುಲೆನ್ಸ್ ಗೂ ಸಹ ಅಡೆತಡೆಯಾಗದ ರೀತಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
5) ವಾಹನ ಜಾಥಾ ಹೊರತುಪಡಿಸಿ, ಬೇರೆ ಮೆರವಣಿಗೆ ಮತ್ತು ಜಾಥಾವನ್ನು ನಡೆಸುವುದಾದಲ್ಲಿ ಮುಂಚಿತವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸೂಕ್ತ ಅನುಮತಿ ಪಡೆದು, ಶಾಂತಿಯುತವಾಗಿ ನಡೆಸಲು ಒಮ್ಮತದಿಂದ ತೀರ್ಮಾನಿಸಲಾಯಿತು.
6) ಯಾವುದೇ ಪಟಾಕಿಗಳನ್ನು ಸಿಡಿಸುವ ಮೂಲಕ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ದೃಷ್ಟಿಯಿಂದ ಪಟಾಕಿ ಸಿಡಿಸಬಾರದಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾಡಳಿತದಿಂದ ಮನವಿ ಮಾಡಲು ತೀರ್ಮಾನಿಸಲಾಯಿತು.
7) ಕಾಲ್ನಡಿಗೆ ಜಾಥಾ ನಡೆಸಲು ಸಹ ಪೊಲೀಸ್ ಇಲಾಖೆಯ ಮತ್ತು ಸ್ಥಳೀಯ ಸಕ್ಷಮ ಪ್ರಾಧಿಕಾರದ ಸೂಕ್ತ ಪೂರ್ವಾನುಮತಿ ಪಡೆದು ನಡೆಸಲು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡಿರುತ್ತಾರೆ.
ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ, ಜಿಲ್ಲೆಯಲ್ಲಿ ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಕ್ರಮ ವಹಿಸಲು ಸಾರ್ವಜನಿಕರು ಸಹಕರಿಸಲು ಕೋರಲಾಯಿತು. ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.
ಸಿ.ಸಿ ಟಿ.ವಿ ಅಳವಡಿಸಿ ಸುರಕ್ಷತೆ ಹೆಚ್ಚಿಸಿ – ಎ.ಬಿ ಇಬ್ರಾಹಿಂ
ಮ0ಗಳೂರು : ಹೆಚ್ಚುತ್ತಿರುವ ಕಳುವು , ಅಪರಾಧಗಳು , ಅತ್ಯಾಚಾರ ಪ್ರಕರಣಗಳು, ಅಪರಿಚಿತರ ಆಗಮನ, ಹೋರಾಟ, ಜಗಳ, ಹೊಡೆದಾಟ ಇನ್ನೂ ಮುಂತಾದ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ದೃಷ್ಠಿಯಿಂದ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ, ಸರಕಾರಿ ಕಚೇರಿಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣ, ಮೀನುಗಾರಿಕೆ ಬಂದರುಗಳು (ದಕ್ಕೆ), ಮಾರುಕಟ್ಟೆಗಳು, ಸಿನಿಮಾ ಮಂದಿರಗಳು ಸೇರಿದಂತೆ ವಿವಿಧ ಸಂಸ್ಥೆಗಳು ತಮ್ಮಲ್ಲಿ ಸಿಸಿ ಕ್ಯಾಮರಾಗಳನ್ನು ಆಧ್ಯತೆಯ ಮೇರೆಗೆ ಅಳವಡಿಸಿಕೊಳ್ಳುವಂತೆ ದ.ಕ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ರವರು ಸೂಚಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಬಹುತೇಕ ದೇವಾಲಯಗಳು, ಮಸೀದಿಗಳು, ಚರ್ಚ್‍ಗಳು ಹಾಗೂ ಬ್ಯಾಂಕಿಂಗ್ ಸಂಸ್ಥೆಗಳು ಮುಖ್ಯ ಮಾರ್ಗಗಳಲ್ಲೇ ಇರುವುದರಿಂದ ಅವುಗಳ ಸುರಕ್ಷತೆಗಾಗಿ ಅಗತ್ಯಕ್ಕೆ ತಕ್ಕಷ್ಟು ಸಿಸಿ. ಕ್ಯಾಮರಾಗಳನ್ನು ಅಳವಡಿಸಿಕೊಳ್ಳಲು ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸುಮಾರು 500 ರಷ್ಟು ಮುಜರಾಯಿ ಆಡಳಿತಕ್ಕೊಳಪಟ್ಟ ದೇವಾಲಯಗಳಿದ್ದು ಇವುಗಳಲ್ಲಿ ಪ್ರವರ್ಗ “ಎ” ಗೆ ಸೇರಿದ ಅಧಿಕ ವರಮಾನವಿರುವ 40 ದೇವಾಲಯಗಳಿದ್ದು ಈ ಎಲ್ಲಾ ದೇವಾಲಯಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ, ಪ್ರವರ್ಗ “ಬಿ” ಗೆ ಸೇರಿದ 25 ದೇವಾಲಯಗಳಲ್ಲಿ 23 ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರವರ್ಗ “ಸಿ” ಗೆ ಸೇರಿದ 427 ದೇವಾಲಯಗಳಲ್ಲಿ 162 ಕಡೆಗಳಲ್ಲಿ ಮಾತ್ರ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಈ ಎಲ್ಲಾ ಸಿಸಿ ಕ್ಯಾಮರಾಗಳ ಗುಣಮಟ್ಟ ಹಾಗೂ ಕಾರ್ಯಕ್ಷಮತೆ ಬಗ್ಗೆ ಪರಿಶೀಲಿಸಲು ಸಭೆಯಲ್ಲಿ ಹಾಜರಿದ್ದ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಇದೇ ರೀತಿ ದ.ಕ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ 605 ಮಸೀದಿಗಳು ಇದ್ದು ಇವುಗಳಲ್ಲಿ ಅಧಿಕ ಆಧಾಯ ತರುವ 95 ಪ್ರಮುಖ ಮಸೀದಿಗಳು ಸೇರಿದ್ದರೂ ಬೆರಳಣಿಕೆಯಷ್ಟು ಮಸೀದಿಗಳನ್ನು ಬಿಟ್ಟರೆ ಬೇರೆ ಯಾವುದೇ ವಕ್ಫ್ ಮಂಡಳಿಯ ಮಸೀದಿಗಳಲ್ಲಿ ಇಲ್ಲಿಯ ತನಕ ಸಿಸಿ ಕ್ಯಾಮರಾಗಳನ್ನು ಅಳವಡಿಸದೇ ಇರುವುದು ಅಸಮಾಧಾನ ತಂದಿದೆ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಮಂಡಳಿಯು ಕಾರ್ಯಪ್ರವೃತ್ತವಾಗಿ ಸಿಸಿ ಕ್ಯಾಮರಾವನ್ನು ಅಳವಡಿಸುವಂತೆ ಸಭೆಯಲ್ಲಿ ಹಾಜರಿದ್ದ ವಕ್ಫ್ ಮಂಡಳಿಯ ಕಾರ್ಯದರ್ಶಿಗೆ ಸೂಚಿಸಿದರು.
ದ.ಕ ಜಿಲ್ಲೆಯಲ್ಲಿ ಒಟ್ಟು 1975 ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಶಾಲೆಗಳಿದ್ದು ಇವುಗಳಲ್ಲಿ 620 ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಉಳಿದೆಡೆ ಎಲ್ಲಾ ಶಾಲೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಡಿ.ಡಿ.ಪಿ.ಐ ವಾಲ್ಟರ್ ಡಿ. ಮೆಲ್ಲೋ ಅವರು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ 451 ಬಾರ್‍ಗಳು (ಮಧ್ಯದಂಗಡಿ) ಇದ್ದು ಇವುಗಳಲ್ಲಿ 440 ರಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದು ಅಭಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ್ ಅವರು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 147 ಪೆಟ್ರೋಲ್ ಬಂಕ್ ಗಳಿದ್ದು 76 ಬಂಕ್‍ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ, 37 ಗ್ಯಾಸ್ ಏಜನ್ಸಿಗಳಲ್ಲಿ 18 ಏಜನ್ಸಿಗಳು ತಮ್ಮ ಕಚೇರಿಗೆ ಸಿಸಿ ಕ್ಯಾಮರಾ ಅಳವಡಿಸಿರುವುದಾಗಿ ಆಹಾರ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿರುವ 53 ಪ್ರಥಮ ದರ್ಜೆಕಾಲೇಜುಗಳಲ್ಲಿ 40 ಕಾಲೇಜುಗಳಲ್ಲಿ ಸಿಸಿ ಕ್ಯಾಮರಾಅಳವಡಿಸಲಾಗಿದೆ ಎಂದು ಸಂಬಂದಿಸಿದ ಅಧಿಕಾರಿ ಸಭೆಗೆ ತಿಳಿಸಿದರು.
ಮಂಗಳೂರು ನಗರದ ಕೇಂದ್ರ ಮಾರುಕಟ್ಟೆ, ದಕ್ಕೆ, ಕದ್ರಿಪಾರ್ಕ್ ಹಾಗೂ ಇತರೆ ಪಾರ್ಕ್‍ಗಳು ಸರ್ವಿಸ್ ಬಸ್ ನಿಲ್ದಾಣ, ಎಲ್ಲಾ ಪ್ರಮುಖ ವೃತ್ತಗಳಲ್ಲಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮಾರಾಗಳನ್ನು ಕೂಡಲೆ ಅಳವಡಿಸಲು ಸಭೆಯಲ್ಲಿ ಹಾಜರಿದ್ದ ನಗರಪಾಲಿಕೆ ಆಯುಕ್ತರಾದ ಗೋಪಾಲಕೃಷ್ಣ ಅವರಿಗೆ ಜಿಲ್ಲಾಧಿಕಾರಿ ಹಾಗೂ ಪೋಲೀಸ್ ಅಧೀಕ್ಷಕರಾದ ಶರಣಪ್ಪ ಅವರು ತಿಳಿಸಿದರು. ಮಂಗಳೂರು ನಗರದಲ್ಲಿ ಅಳವಡಿಸಲು ಸೂಚಿಸಿರುವಂತೆ ಜಿಲ್ಲೆಯ ಇತರ ತಾಲೂಕು ಕೇಂದ್ರಗಳಲ್ಲಿ ಸಹ ಅಳವಡಿಸಲು ಪೋಲೀಸ್ ಅಧೀಕ್ಷಕರಾದ ಶರಣಪ್ಪ ಅವರು ಸೂಚಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ, ಉಪ ಪೋಲೀಸ್ ಆಯುಕ್ತ ಶಾಂತಾರಾಮ್ ಮುಂತಾದವರು ಭಾಗವಹಿಸಿದರು.
ಪಿಲಿಕುಳದಲ್ಲಿ ಕ್ರಿಸ್‍ಮಸ್ ಹಬ್ಬ
ಮ0ಗಳೂರು : ವಿವಿಧ ಅಕಾಡೆಮಿಗಳ ವತಿಯಿಂದ ಡಿ: 24 ರಿಂದ 27 ರವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಮಕ್ಕಳ ಹಬ್ಬವನ್ನು ಆಯೋಜಿಸಲು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ಶನಿವಾರದಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಡಿ: 24 ರಂದು ಕೊಡವ, ಅರೆಭಾಷೆ, ಬ್ಯಾರಿ ಅಕಾಡೆಮಿಗಳ ವತಿಯಿಂದ ಉದ್ಘಾಟನಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಡಿ. 25 ರಂದು ಕೊಂಕಣಿ ಅಕಾಡೆಮಿ ವತಿಯಿಂದ ಕೊಂಕಣಿ ಭಾಷೆಯ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಡಿ.26 ರಂದು ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಡಿ:27 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗುವುದು.
ಪಿಲಿಕುಳದಲ್ಲಿ ನಡೆಯುವ ಕ್ರಿಸ್ ಮಸ್ ಮೇಳದಲ್ಲಿ ವಿವಿಧ ಬಗೆಯ ಕೇಕ್ ಗಳ ತಯಾರಿಕೆ ಪ್ರದರ್ಶನ , ಮಾರಾಟ ಮತ್ತು ಕೇಕ್ ಗಳ ತಯಾರಿಕೆ ಸ್ಫರ್ಧೆಯನ್ನು ಏರ್ಪಡಿಸಲಾಗುವುದು. ಇದಲ್ಲದೆ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಫರ್ಧೆ ಮತ್ತು ಮನೆಯಲ್ಲೇ ತಯಾರಿಸಿಕೊಂಡು ಬಂದ ಗ್ರೀಟಿಂಗ್ ಕಾರ್ಡುಗಳ ಸ್ಫರ್ಧೆಯನ್ನು ಏರ್ಪಡಿಸಲಾಗುವುದು.
ಇದೇ ಸಂದರ್ಭದಲ್ಲಿ ಬ್ಯಾರಿ, ಕ್ರಿಶ್ಚಿಯನ್, ಹಿಂಧೂ ಸೇರಿದಂತೆ ಇತರೇ ಜನಾಂಗಗಳ ಸಾಂರ್ಪದಾಯಿಕ ಅಹಾರ ಮೇಳವನ್ನೂ ಸಹ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕಾ ಅಧಿಕಾರಿ ಪ್ರಭಾಕರ ಶರ್ಮಾ, ಸಾಹಿತಿ .ಬಿ.ಎ. ವಿವೇಕ ರೈ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ರಾಯ್ ಕ್ಯಸ್ಟಲಿನೋ, ಬ್ಯಾರಿ ಅಕಾಡೆಮಿಯ ಅಧ್ಯಕ್ಷ ಹನೀಫ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮುಂತಾದವರು ಭಾಗವಹಿಸಿದರು.