ಮಂಗಳೂರು : ಜೋಕಟ್ಟೆಯ ಎಂಆರ್‌ಪಿಎಲ್ ಕೋಕ್-ಸಲ್ಫರ್ ಘಟಕದಲ್ಲಿ ಇಂದು ರಾತ್ರಿ ಭಾರೀ ಸ್ಫೋಟದ ಸದ್ದು ಕೇಳಿಬಂದಿದ್ದು, ಸುತ್ತಮುತ್ತಲಿನ ನಿವಾಸಿಗಳು ಕೆಲವು ಕಾಲ ಆತಂಕಕ್ಕೊಳಗಾದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ 9ರ ಸುಮಾರಿಗೆ ಕೋಕ್-ಸಲ್ಫರ್ ಘಟಕದೊಳಗಿನಿಂದ ಭಾರೀ ಶಬ್ದ ಕೇಳಿಬಂದಿದ್ದು, ಇದು ಸ್ಥಳೀಯರನ್ನು ಭೀತಿಗೊಳಪಡಿಸಿತ್ತು. ಪ್ರಾರಂಭದಲ್ಲಿ ಘಟಕದಲ್ಲಿ ಸ್ಫೋಟ ನಡೆದಿದೆ ಎಂಬ ಸುದ್ದಿ ಹರಡಿತ್ತು. ಇದು ಸ್ಥಳೀಯರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿತ್ತು.
ಎಂಆರ್‌ಪಿಎಲ್‌ನಿಂದ ಹೊರಡುವ ಹೊಗೆಯ ಕೊಳವೆ ಯಲ್ಲಿ ಇಂದು ಎಂದಿಗಿಂತ ಹೆಚ್ಚು ಬೆಂಕಿ ಕಾಣಿಸಿಕೊಂಡಿದ್ದರಿಂದ ಹಾಗೂ ಹಠಾತ್ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಸಹಜವಾಗಿಯೇ ಸ್ಥಳೀಯರು ಹೆದರಿದ್ದರು.
‘‘ಪೆಟ್ರೋಲಿಯಂ ಉತ್ಪನ್ನ ತಯಾರಿಕೆಯ ಸಂದರ್ಭದಲ್ಲಿ ಶಬ್ದ ಆಗುವುದು ಸಾಮಾನ್ಯ. ಹಾಗೂ ಎಂಆರ್‌ಪಿಎಲ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದುದರಿಂದ ಕತ್ತಲು ಆವರಿಸಿ ಕೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’’ ಎಂದು ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿ ಲಕ್ಷ್ಮೀ ಕುಮಾರನ್ ತಿಳಿಸಿದ್ದಾರೆ.