ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಗೆಗೊಳಿಸುವ ಸರಕಾರದ ಕ್ರಮಕ್ಕೆ ಗಣೇಶ್ ಕಾರ್ಣಿಕ್ ವಿರೋಧ

Spread the love

ಮಂಗಳೂರು: ಕರಾವಳಿಯ ಜನಜೀವನಕ್ಕೆ ಮಾರಕವಾಗಲಿರುವ “ನೇತ್ರಾವತಿ ತಿರುವು” ಯೋಜನೆ ಮತ್ತು ಚಿಕ್ಕಬಳ್ಳಾಪುರ ಕೋಲಾರ ಭಾಗದ ಜನರ ಕುಡಿಯುವ ನೀರಿನ ಪೂರೈಕೆಗಾಗಿ ಕರಾವಳಿಯ ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಹಾಗೂ ಪ್ರಾಕೃತಿಕ ವಿನಾಶಕ್ಕೆ ಮುನ್ನುಡಿಯಾಗಲಿರುವ “ಎತ್ತಿನಹೊಳೆ ಯೋಜನೆ” ಸಂಪೂರ್ಣ ಅವೈಜ್ಞಾನಿಕವಾಗಿರುವುದರಿಂದ ಹಾಗೂ ನೇತ್ರಾವತಿ ಯೋಜನೆಯ ಪ್ರವರ್ತಕರಾದ ದಿವಂಗತ ಡಾ| ಪರಮಶಿವಯ್ಯನವರು “ಎತ್ತಿನಹೊಳೆ ಯೋಜನೆ ಒಂದು ಅವೈಜ್ಞಾನಿಕ ಕಲ್ಪನೆ” ಎಂದು ತಮ್ಮ ಕೊನೆಯ ದಿನಗಳಲ್ಲಿ ಹೇಳಿದ್ದರೂ, ಯಾವುದನ್ನೂ ಲೆಕ್ಕಿಸದ ಸರಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವುದನ್ನು ತೀವ್ರವಾಗಿ ವಿರೋದಿಸುತ್ತೇವೆ.

“ಎತ್ತಿನಹೊಳೆ ಯೋಜನೆ”ಯನ್ನು ಕೈಗೆತ್ತಿಕೊಳ್ಳದೆ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಹೊಸ ಚಿಂತನೆಯೊಂದನ್ನು ತಮ್ಮ ಮೂಲಕ ಪ್ರಸ್ತುತಪಡಿಸುತ್ತಾ, ಸರಕಾರ ಪ್ರಾಕೃತಿಕ ಅಸಮತೋಲನಕ್ಕೆ ಕಾರಣವಾಗಲಿರುವ “ಎತ್ತಿನಹೊಳೆ ಯೋಜನೆ”ಯನ್ನು ಕೈ ಬಿಟ್ಟು ಈ ಕೆಳಗಿನ ಸಲಹೆಯನ್ನು ಪರಿಗಣಿಸಬೇಕಾಗಿ ಆಗ್ರಹಿಸುತ್ತೇವೆ.

“ಲಿಂಗನಮಕ್ಕಿ ಜಲಾಶಯ”ದಿಂದ ಜೋಗದಲ್ಲಿ ಸುಮಾರು 500ಒW ರಷ್ಟು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇದರಿಂದಾಗಿ ಮಳೆಗಾಲದ ಒಂದೆರಡು ತಿಂಗಳು ಬಿಟ್ಟರೆ ಜಗದ್ವಿಖ್ಯಾತ ಜೋಗ ಜಲಪಾತ ಪ್ರವಾಸಿಗರ ಆಕರ್ಷಣೆಯನ್ನು ಕಳೆದುಕೊಂಡಿದೆ. ಈಗಾಗಲೇ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾಗಿರುವ ಪ್ರದೇಶದಲ್ಲಿ ಯಾವುದೇ ಹೊಸ ಭೂಸ್ವಾಧೀನದ ಅಗತ್ಯ ಇಲ್ಲ. ಭೂಮಿ ಮುಳುಗಡೆಯಾಗುವ ಸಾಧ್ಯತೆಯೂ ಇಲ್ಲ. ಲಿಂಗನಮಕ್ಕಿ ಜಲಾಶಯದಲ್ಲಿ ಸುಮಾರು 36ಖಿಒಅಗಳಷ್ಟು ನೀರು ಲಭ್ಯವಿರುತ್ತದೆ. ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ವರ್ಷ ಪೂರ್ತಿ ಸಾಕಷ್ಟು ಬಿಸಿಲಿನ ಲಭ್ಯತೆ ಇರುವುದರಿಂದ ಸರಕಾರ ಜೋಗದಲ್ಲಿ ಉತ್ಪತ್ತಿಯಾಗುತ್ತಿರುವ ವಿದ್ಯುತ್ ಅನ್ನು ಸರಿದೂಗಿಸಲು ಸುಮಾರು 750-1000 ಮೆಗಾವ್ಯಾಟ್ ಉತ್ಪಾದನಾ ಸಾಮಾರ್ಥ್ಯದ ಸೋಲಾರ್ ಪಾರ್ಕನ್ನು ಕೋಲಾರ-ಚಿಕ್ಕಬಳ್ಳಾಪುರ ಭಾಗದಲ್ಲಿ ಸ್ಥಾಪಿಸಬೇಕು. ಲಿಂಗನಮಕ್ಕಿ ಜಲಾಶಯದಲ್ಲಿ ಲಭ್ಯವಿರುವ ಸುಮಾರು 36ಖಿಒಅ ಗಳಷ್ಟು ನೀರಿನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸಲು ಅಗತ್ಯವಿರುವಷ್ಟು ನೀರನ್ನು ಪೈಪ್‍ಲೈನ್‍ನ ಮೂಲಕ ಆ ಭಾಗಕ್ಕೆ ಕಳುಹಿಸುವಂತೆ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಲಿಂಗನಮಕ್ಕಿಯಲ್ಲಿ ಲಭ್ಯವಿರುವ ಹೆಚ್ಚಿನ ನೀರನ್ನು ಮತ್ತೆ ಜೋಗಜಲಪಾತ ಮೈ ತುಂಬುವಂತೆ ಮಾಡಿ ಪ್ರವಾಸಿ ಕೇಂದ್ರವಾಗಿ ಬೆಳೆಸಬೇಕು. ಇದರಿಂದಾಗಿ ಉದ್ಯೋಗ ಸೃಷ್ಠಿ ಮತ್ತು ಆರ್ಥಿಕ ಚಟುವಟಿಕೆಗಳಿಗೂ ಅವಕಾಶ ನೀಡಿದಂತಾಗುತ್ತದೆ.

ಈ ಕುರಿತಾಗಿ ಈಗಾಗಲೇ ಸಾಕಷ್ಟು ಮಾಹಿತಿಗಳು ಲಭ್ಯವಿದ್ದು, ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಂಡು “ಎತ್ತಿನಹೊಳೆ ಯೋಜನೆ”ಯ ಮೂಲಕ ಮುಂದಾಗಬಹುದಾದ ಅಪಾರ ಪ್ರಾಕೃತಿಕ ಹಾನಿಯನ್ನು ತಡೆಗಟ್ಟುವಂತೆ ಸರಕಾರವನ್ನು ಆಗ್ರಹಿಸುತ್ತೇವೆ.

ಕರಾವಳಿ ಕರ್ನಾಟಕದ ಜನತೆ ಹಾಗೂ ಜನಪ್ರತಿನಿಧಿಗಳು ಈ ಕುರಿತಾಗಿ ಸರಕಾರವನ್ನು ಒತ್ತಾಯಿಸುವಂತೆಯೂ ವಿನಂತಿಸುತ್ತೇವೆ.


Spread the love