ಮಂಗಳೂರು : ಎತ್ತಿನಹೊಳೆ ಯೋಜನೆ ಸ್ಥಗಿತಗೊಳ್ಳಲು ಇಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಸಂದರ್ಭ ಉರುಳು ಸೇವೆ ಮಾಡಿದರು.
ಪೂಜಾರಿ ಜೊತೆ ಮನಪಾ ಸದಸ್ಯ ರಾಧಾಕೃಷ್ಣ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಶ್, ಸೇರಿದಂತೆ ಹಲವರು ಉರುಳು ಸೇವೆಗೈದರು. ಎತ್ತಿನಹೊಳೆ ಯೋಜನೆಯ ಮೂಲಕ ನೀರಿಗಾಗಿ ಸಂಕಷ್ಟಪಡುತ್ತಿರುವ ಬಯಲು ಸೀಮೆಯ ಜಿಲ್ಲೆಗಳಿಗೆ ಮೋಸ ಮಾಡಲು ಸರಕಾರ ಹೊರಟಿದ್ದು, ಕರಾವಳಿಯ ನಾಶಕ್ಕೆ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ , ರಾಜ್ಯ ಸರಕಾರ, ಮುಖ್ಯಮಂತ್ರಿ, ಪ್ರಧಾನಮಂತ್ರಿ, ಕರಾವಳಿಯ ಸಚಿವರು, ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಸಚಿವರು ಈ ಯೋಜನೆಯ ಬಗ್ಗೆ ವೌನವಾಗಿದ್ದಾರೆ. ಮಂಗಳೂರು ಸಂಸದರ ಕೂಗಿಗೂ ಬೆಲೆ ಇಲ್ಲದಂತಾಗಿದೆ. ಎಲ್ಲರೂ ಸೇರಿಕೊಂಡು ಕೋಲಾರದಂತೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಬರಡು ಮಾಡಲು ಹೊರಟಿರುವುದು ರಾಜಧರ್ಮವೇ? ಎಂದು ಪ್ರಶ್ನಿಸಿದರು.
ತುಳುರಾಜ್ಯದ ಬೇಡಿಕೆಗೆ ಆಸ್ಪದ ಕೊಡದಂತೆ ಸರಕಾರಕ್ಕೆ ಸಲಹೆ ನೀಡಿದರು. ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಯ ಸಿ.ಸುವರ್ಣ, ಕ್ಷೇತ್ರ ಆಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕೋಶಾಧಿಕಾರಿ ಪದ್ಮರಾಜ್, ಮೊಕ್ತೇಸರರಾದ ರವಿಶಂಕರ್ ಮಿಜಾರ್, ಕೆ ಮಹೇಶ ಚಂದ್ರ, ಕ್ಷೇತ್ರ ಆಡಳಿತ ಮಂಡಳಿ ಸದಸ್ಯರಾದ ಎಂ. ವೇದ ಕುಮಾರ್, ದೇವೇಂದ್ರ ಪೂಜಾರಿ, ವಿಶ್ವನಾಥ್ ಕಾಸರಗೋಡು, ಎಸ್ ಜಯವಿಕ್ರಮ್, ಹರಿಕೃಷ್ಣ ಬಂಟ್ವಾಳ, ಪಿ ಕೆ ಲೋಹಿತ್ ಪೂಜಾರಿ, ಪ್ರೊ.ಬಿ.ಜೆ.ಸುವರ್ಣ, ಎಂ ಶೇಖರ ಪೂಜಾರಿ, ಡಾ. ಅನುಸೂಯ, ಬಿ.ಜಿ. ಸಾಲ್ಯಾನ್, ಜತೀನ್ ಅತ್ತಾವರ, ರಾಧಾಕೃಷ್ಣ, ಕೆ, ಚಿತ್ತರಂಜನ್ ಗರೋಡಿ, ಡಿ.ಡಿ.ಕಟ್ಟೆಮಾರ್ , ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸುಧೀರ್ ಟಿ.ಕೆ. ಉಪಸ್ಥಿತರಿದ್ದರು