ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಿಸಿದ ರೈಲ್ವೆ ಮಂಡಳಿ

Spread the love

ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ ವಿಸ್ತರಿಸಿದ ರೈಲ್ವೆ ಮಂಡಳಿ

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪ್ರಯತ್ನಕ್ಕೆ ಈಡೇರಿದ ಕರಾವಳಿಗರ ಬಹುಕಾಲದ ರೈಲ್ವೆ ಬೇಡಿಕೆ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರ ಅವಿರತ ಪ್ರಯತ್ನಕ್ಕೆ ಬಹುದೊಡ್ಡ ಯಶಸ್ಸು ಲಭಿಸಿದ್ದು, ದಶಕಗಳ ಪ್ರಮುಖ ಬೇಡಿಕೆಯಾಗಿರುವ ಮಂಗಳೂರು-ಕಬಕ ಪ್ಯಾಸೆಂಜರ್‌ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಇದರಿಂದ ಇನ್ನುಮುಂದೆ ಮಂಗಳೂರು-ಪುತ್ತೂರು-ಸುಬ್ರಹ್ಮಣ್ಯ ನಡುವೆ ಪ್ರತಿದಿನ ಸಂಚರಿಸುವ ಪ್ರಯಾಣಿಕರು ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.

ಹೊಸ ವೇಳಾಪಟ್ಟಿ ಪ್ರಕಾರ ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್‌ ರೈಲು(56625) ಮುಂಜಾನೆ 4 ಗಂಟೆಗೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಕಬಕ-ಪುತ್ತೂರಿಗೆ ಮುಂಜಾನೆ 5.18ಕ್ಕೆ ತಲುಪಲಿದೆ. ಅಲ್ಲಿ ಅದು 2 ನಿಮಿಷ ನಿಲುಗಡೆಯಾಗಿ ಬೆಳಗ್ಗೆ 6.30ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ಬಂದು ತಲುಪಲಿದೆ. ಅದೇರೀತಿ ಸುಬ್ರಹ್ಮಣ್ಯ-ಮಂಗಳೂರು(56626) ಪ್ಯಾಸೆಂಜರ್‌ ರೈಲು ಬೆಳಗ್ಗೆ 7ಕ್ಕೆ ಸುಬ್ರಹ್ಮಣ್ಯ ರಸ್ತೆಯಿಂದ ಹೊರಟು 7.48ಕ್ಕೆ ಕಬಕ-ಪುತ್ತೂರು ತಲುಪಲಿದೆ. ಅಲ್ಲಿ 2 ನಿಮಿಷ ನಿಲುಗಡೆಯಾಗಿ 9.30ಕ್ಕೆ ಮಂಗಳೂರು ಸೆಂಟ್ರಲ್‌ಗೆ ತಲುಪಲಿದೆ.

ಇನ್ನೊಂದೆಡೆ, ಮಂಗಳೂರು ಸೆಂಟ್ರಲ್‌-ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್‌ ರೈಲು(56627) ಸಂಜೆ 5.45ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಸಂಜೆ 7.03ಕ್ಕೆ ಪುತ್ತೂರಿಗೆ ತಲುಪಲಿದೆ. ಬಳಿಕ ಎರಡು ನಿಮಿಷ ನಿಲುಗಡೆಯಾಗಿ ರಾತ್ರಿ 8.10ಕ್ಕೆ ಸುಬ್ರಹ್ಮಣ್ಯ ರಸ್ತೆಗೆ ತಲುಪಲಿದೆ. ಹಾಗೆಯೇ, ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಪ್ಯಾಸೆಂಜರ್‌ ರೈಲು(56628) ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಿಂದ ಹೊರಟು ರಾತ್ರಿ 9.28ಕ್ಕೆ ಕಬಕ-ಪುತ್ತೂರಿಗೆ ತಲುಪಿ ಅಲ್ಲಿ 2 ನಿಲುಗಡೆಯಾಗಿ ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್‌ ತಲುಪಲಿದೆ. ನೈಋತ್ಯ ರೈಲ್ವೆ ಹಾಗೂ ದಕ್ಷಿಣ ರೈಲ್ವೆಯು ಅನುಕೂಲತೆ ಪರಿಶೀಲಿಸಿ ಆದಷ್ಟು ಬೇಗ ಈ ರೈಲು ವಿಸ್ತರಣೆ ಸೇವೆಯನ್ನು ಆರಂಭಿಸುವಂತೆ ರೈಲ್ವೆ ಮಂಡಳಿಯು ತನ್ನ ಆದೇಶದಲ್ಲಿ ಸೂಚಿಸಿದೆ.

ಸಂತಸ ವ್ಯಕ್ತಪಡಿಸಿದ ಕ್ಯಾ. ಚೌಟ
ಈ ರೈಲು ವಿಸ್ತರಣೆಗೆ ಮಂಜೂರಾತಿ ಲಭಿಸಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು, ಮಂಗಳೂರು ಸೆಂಟ್ರಲ್‌-ಕಬಕ ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಿರುವುದಕ್ಕೆ ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಹಾಗೂ ರೈಲ್ವೆ ರಾಜ್ಯ ಖ್ಯಾತೆ ಸಚಿವರಾದ ವಿ. ಸೋಮಣ್ಣ ಹಾಗೂ ರೈಲ್ವೆ ಮಂಡಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸೇವೆಯನ್ನು ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಜನರು-ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸುಬ್ರಹ್ಮಣ್ಯ ರಸ್ತೆ ಸ್ಟೇಷನ್‌ಗೆ ವಿಸ್ತರಿಸಬೇಕೆಂಬುದು ಸುಮಾರು ಎರಡು ದಶಕಗಳ ಬೇಡಿಕೆಯಾಗಿತ್ತು. ಸಂಸದನಾದ ಬಳಿಕ ನಡೆದ ಸಂಸತ್ತಿನ ಮೊದಲ ಅಧಿವೇಶನದಲ್ಲೇ ಈ ರೈಲು ವಿಸ್ತರಣೆ ಬೇಡಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿ ರೈಲ್ವೆ ಸಚಿವರ ಗಮನಸೆಳೆದಿದ್ದೆ. ಇತ್ತೀಚೆಗಷ್ಟೇ ರೈಲ್ವೆ ಮಂಡಳಿ ಅಧ್ಯಕ್ಷರನ್ನು ಖುದ್ದು ಭೇಟಿಯಾಗಿ ಈ ಪ್ಯಾಸೆಂಜರ್‌ ರೈಲನ್ನು ಆದಷ್ಟು ಬೇಗ ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದ್ದೆ. ಇದೀಗ ಕರಾವಳಿ ರೈಲ್ವೆ ಯಾತ್ರಿಕರ ಅನುಕೂಲಕರವಾಗುವಂತೆ ಬಹುಬೇಡಿಕೆಯಾಗಿರುವ ಮಂಗಳೂರು-ಕಬಕ ಪುತ್ತೂರು ಪ್ಯಾಸೆಂಜರ್‌ ಟ್ರೈನ್‌ ಅನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಿ ಪರಿಷ್ಕೃತ ವೇಳಾಪಟ್ಟಿಯನ್ನು ಕೂಡ ರೈಲ್ವೆ ಮಂಡಳಿ ಪ್ರಕಟಿಸಿರುವುದು ನಮ್ಮ ಜಿಲ್ಲೆಯ ಜನತೆ ಹಾಗೂ ಸಂಸದನ ನೆಲೆಯಲ್ಲಿ ನಮ್ಮೆಲ್ಲರ ಸಾಂಘಿಕ ಪ್ರಯತ್ನಕ್ಕೆ ಸಂದ ಜಯ ಎಂದು ಕ್ಯಾ. ಚೌಟ ಹೇಳಿದ್ದಾರೆ.

ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಿರುವುದರಿಂದ ಪ್ರಮುಖವಾಗಿ ಕರಾವಳಿಯ ಇತರೆಡೆಗಳಿಂದ ಹಾಗೂ ಹೊರ ಊರುಗಳಿಗೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದು ಹೋಗುವ ಯಾತ್ರಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ. ಅಷ್ಟೇಅಲ್ಲದೆ ಸುಳ್ಯ-ಸುಬ್ರಹ್ಮಣ್ಯ-ಪುತ್ತೂರು-ಬಂಟ್ವಾಳ ಕಡೆಯಿಂದ ಹಾಗೂ ಇತ್ತ ಮಂಗಳೂರು ಕಡೆಯಿಂದ ಪುತ್ತೂರು-ಸುಬ್ರಹ್ಮಣ್ಯ-ಪುತ್ತೂರು ಕಡೆಗೆ ಉದ್ಯೋಗದ ನಿಮಿತ್ತ ಮತ್ತು ಕಲಿಕೆಗಾಗಿ ಪ್ರತಿದಿನ ಓಡಾಡುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಇದರಿಂದ ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೂ ಹೆಚ್ಚಿನ ಉತ್ತೇಜನ ದೊರೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಿಲ್ಲೆಯ ಪ್ರಮುಖ ಬೇಡಿಕೆಗೆ ಆದ್ಯತೆ ಮೇರೆಗೆ ಸ್ಪಂದಿಸಿರುವುದಕ್ಕೆ ಇದೊಂದು ನಿದರ್ಶನವಾಗಿದೆ. ಹೀಗಾಗಿ, ದಕ್ಷಿಣ ಕನ್ನಡದ ಸಮಸ್ತ ಜನತೆ ಹಾಗೂ ಹೊರ ಊರಿನ ನಾಗರಿಕರು ಹೊಸದಾಗಿ ವಿಸ್ತರಣೆಯಾಗುತ್ತಿರುವ ಈ ಪ್ಯಾಸೆಂಜರ್‌ ರೈಲು ಸೇವೆಯ ಸದುಪಯೋಗ ಪಡೆದುಕೊಳ್ಳಬಹುದೆಂದು ಕ್ಯಾ. ಚೌಟ ಅವರು ತಿಳಿಸಿದ್ದಾರೆ.

ಕ್ಯಾ. ಚೌಟ ಪ್ರಯತ್ನದಿಂದ ಈಡೇರಿದ ಬಹುಕಾಲದ ರೈಲು ಬೇಡಿಕೆ

ಮಂಗಳೂರು-ಕಬಕ-ಪುತ್ತೂರು ರೈಲನ್ನು ಸುಬ್ರಹ್ಮಣ್ಯ ರಸ್ತೆವರೆಗೆ ವಿಸ್ತರಿಸಬೇಕೆಂಬುದು ಇಂದು-ನಿನ್ನೆಯ ಬೇಡಿಕೆಯಾಗಿರಲಿಲ್ಲ. ಸುಮಾರು ಎರಡು ದಶಕದಿಂದಲೂ ಜಿಲ್ಲೆಯ ಬಹುಬೇಡಿಕೆಯ ಈ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸಬೇಕೆಂದು ಜಿಲ್ಲೆಯ ರೈಲು ಪ್ರಯಾಣಿಕರು ಹಾಗೂ ಸುಬ್ರಹ್ಮಣ್ಯಕ್ಕೆ ಬಂದು ಹೋಗುವ ಯಾತ್ರಾರ್ಥಿಗಳ ಒತ್ತಾಸೆಯಾಗಿತ್ತು. ಈ ಬೇಡಿಕೆಯನ್ನು ಈಡೇರಿಸುವುದಕ್ಕೆ ಕ್ಯಾ. ಚೌಟ ಅವರು ಕೂಡ ಸಂಸದರಾದ ಕೂಡಲೇ ಹೆಚ್ಚಿನ ಮುತುವರ್ಜಿ ವಹಿಸಿದ್ದು, ತಮ್ಮ ಚೊಚ್ಚಲ ಅದಿವೇಶನದಲ್ಲೇ ರೈಲು ವಿಸ್ತರಣೆ ಬಗ್ಗೆ ಸದನದ ಗಮನಕ್ಕೆ ತಂದಿದ್ದರು. ರೈಲ್ವೆ ಸಚಿವರಾದ ಅಶ್ವಿನ್‌ ವೈಷ್ಣವ್‌ ಅವರು ಕೂಡ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದರು. ಈ ನಡುವೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮಂಗಳೂರಿಗೆ ದಕ್ಷಿಣ ಕನ್ನಡದ ಪ್ರಮುಖ ರೈಲ್ವೆ ಬೇಡಿಕೆಗಳ ಬಗ್ಗೆ ಚರ್ಚಿಸುವುದಕ್ಕೆ ಬಂದಾಗಲೂ ಸಂಸದ ಕ್ಯಾ. ಚೌಟ ಅವರು ಖುದ್ದು ಮನವಿ ಸಲ್ಲಿಸಿದ್ದರು. ಇದೀಗ ರೈಲ್ವೆ ಸಚಿವಾಲಯ ಹಾಗೂ ರೈಲ್ವೆ ಮಂಡಳಿ ಅಧಿಕಾರಿಗಳ ಸಹಕಾರದಿಂದ ಕರಾವಳಿಗರ ಪ್ರಮುಖ ಬೇಡಿಕೆ ಈಡೇರುವುದು ಗಮನಾರ್ಹ.


Spread the love
Subscribe
Notify of

0 Comments
Inline Feedbacks
View all comments