ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ನಿಷೇಧಾಜ್ಞೆ ಜಾರಿ
ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನೂತನ ಸರ್ಕಾರ ಶನಿವಾರ ವಿಶ್ವಾಸಮತ ಯಾಚನೆ ನಡೆಸಲಿದ್ದು, ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಘರ್ಷಣೆಗೆ ಇಳಿಯುವ ಸಾಧ್ಯತೆ ಇದೆ ಎಂಬ ವರದಿಗಳನ್ನು ಆಧರಿಸಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಾದ್ಯಂತ ಶನಿವಾರ ಬೆಳಿಗ್ಗೆ 8 ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ಸಲ್ಲಿಸಿದ ವರದಿ ಆಧರಿಸಿ ನಗರ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ನಿಷೇಧಾಜ್ಞೆ ಜಾರಿಗೊಳಿಸಿ ಶುಕ್ರವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ಈ ಅವಧಿಯಲ್ಲಿ ಗುಂಪು ಸೇರುವುದು, ಪ್ರತಿಭಟನೆ, ಮೆರವಣಿಗೆ, ಪ್ರದರ್ಶನ, ಘೋಷಣೆ ಕೂಗುವುದು, ಕರಪತ್ರಗಳನ್ನು ಹಂಚುವುದನ್ನು ನಿಷೇಧಿಸಲಾಗಿದೆ. ನಗರದಾದ್ಯಂತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.