ಮಂಗಳೂರು : ಬರವಣಿಗೆ ಮೂಲಕ ಕಯ್ಯಾರರು ನೀಡಿದ ಸಂದೇಶ ಮತ್ತು ಅವರ ಬದುಕಿನ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರು ಹೇಳಿದರು.
ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕವಿ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಅವರಿಗೆ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‍ಕ್ಲಬ್ ವತಿಯಿಂದ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಕಯ್ಯಾರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಂಗಳವಾರ ಮಾತನಾಡಿದರು.
ಕಯ್ಯಾರರ ಕಾವ್ಯ ರಚನಾ ಶೈಲಿ, ಭಾಷಾ ಲಾಲಿತ್ಯ, ಚಿಂತನಾಶೀಲ ವ್ಯಕ್ತಿತ್ವ ಉತ್ತುಂಗವಾಗಿತ್ತು. ಯಾವುದೇ ವರ್ಗ, ಪಂಗಡಗಳಿಗೆ ಸೀಮಿತರಾಗದೆ ಎಲ್ಲಾ ರೀತಿಯ ಕಾವ್ಯಗಳನ್ನು ರಚಿಸಿದ ಹೆಗ್ಗಳಿಕೆ ಅವರದು. ಅವರ ಪ್ರತಿ ಬರವಣಿಗೆಯಲ್ಲಿ ಉತ್ತಮ ಸಂದೇಶ ನೀಡುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟರು.
ಉದಯವಾಣಿ ಮಂಗಳೂರು ಸುದ್ದಿ ವಿಭಾಗ ಮುಖ್ಯಸ್ಥ ಮನೋಹರಪ್ರಸಾದ್ ಅವರು ಮಾತನಾಡಿ, ಕಯ್ಯಾರ ಕಿಂಞಣ್ಣ ರೈ ಅವರ ಕಾವ್ಯ ಲಹರಿ, ಭಾಷಾ ಬಳಕೆ ವಿಭಿನ್ನವಾಗಿತ್ತು. ದೇಶದ ಇತಿಹಾಸದಲ್ಲೇ ಅವರಂತಹ ವ್ಯಕ್ತಿತ್ವ ವಿರಳ ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಯ್ಯಾರ ಕಿಂಞಣ್ಣ ರೈ ಅವರ ಪುತ್ರ ದುರ್ಗಾಪ್ರಸಾದ್ ರೈ, ಕಳ್ಳಿಗೆ ತಾರನಾಥ ಶೆಟ್ಟಿ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ ಶ್ರೀನಿವಾಸ ನಾಯಕ್ ಇಂದಾಜೆ, ಮಾಜಿ ಅಧ್ಯಕ್ಷ ಪಿ. ಬಿ. ಹರೀಶ್ ರೈ, ಪ್ರೆಸ್‍ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್. ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.