ಮಂಗಳೂರು : ಭಾನುವಾರ ಅಗಲಿದ ಹಿರಿಯ ಸಾಹಿತಿ, ಕವಿ ನಾಡೋಜ ಡಾ.ಕಯ್ಯಾರ ಕಿಙ್ಞಣ್ಣ ರೈ ಅವರ ಅಗಲುವಿಕೆಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರು ತಮ್ಮ ಸಂತಾಪದಲ್ಲಿ, ಕಯ್ಯಾರ ಅವರು ಕನ್ನಡ ನಾಡಿನ ಏಕೀಕರಣಕ್ಕೆ ದೊಡ್ಡ ಧ್ವನಿಯಾಗಿದ್ದರು. ಕಾಸರಗೋಡಿನ ಕನ್ನಡ ಧ್ವನಿಯನ್ನು ಎತ್ತರಕ್ಕೇರಿಸುವಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನವು ಕನ್ನಡ ಹೋರಾಟಕ್ಕೆ ದೊಡ್ಡ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರು, ಕರ್ನಾಟಕ ಮತ್ತು ಕೇರಳದ ಕನ್ನಡಿಗರ ಬೆಸುಗೆಯಾಗಿದ್ದ ಕಯ್ಯಾರರು, ಸದಾ ಕನ್ನಡಪರ ಚಿಂತನೆಯನ್ನು ಹೊಂದಿದ್ದರು. ಕನ್ನಡಿಗರ ಐಕ್ಯತೆ, ಒಗ್ಗಟ್ಟನ್ನು ಪ್ರತಿಪಾದಿಸುತ್ತಿದ್ದ ಅವರ ಅಗಲುವಿಕೆಯು ವಿಶೇಷವಾಗಿ ಕರಾವಳಿ ಕರ್ನಾಟಕ ಹಾಗೂ ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ, ಯುವಜನಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್, ಶಾಸಕರಾದ ಮೊೈದೀನ್ ಬಾವಾ, ಜೆ.ಆರ್.ಲೋಬೋ, ಐವನ್ ಡಿಸೋಜಾ, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಅವರು ಕಯ್ಯಾರ ಕಿಙ್ಞಣ್ಣ ರೈ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಕಯ್ಯಾರ ಅವರ ನಿಧನದ ಸುದ್ದಿ ತಿಳಿದು, ಬದಿಯಡ್ಕದಲ್ಲಿರುವ ಕಯ್ಯಾರರ ಮನೆಗೆ ಭೇಟಿ ನೀಡಿ ಪಾರ್ಥೀವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸಿದರು.