ಮಂಗಳೂರು| ಕರಾವಳಿಯಲ್ಲಿ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ
ಮಂಗಳೂರು : ಪವಿತ್ರ ರಮಝಾನ್‌ನ 29 ವೃತಗಳನ್ನು ಅನುಷ್ಠಾನಗೊಳಿಸಿದ ಕರಾವಳಿಯ ಮುಸ್ಲಿಮರು ಇಂದು ಮುಂಜಾನೆಯಿಂದ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್’ ಆಚರಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಜುಮಾ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು.
ಜಿಲ್ಲೆಯ ಬಹುತೇಕ ಎಲ್ಲಾ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ನಗರದ ಬಾವುಟಗುಡ್ಡದ ಈದ್ಗಾ ಜುಮಾ ಮಸ್ಜಿದ್‌ನಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಖುತ್ಬಾ ಪಾರಾಯಣಗೈದರು. ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಈದ್ ನಮಾಝ್ ಗೆ ನೇತೃತ್ವ ನೀಡಿದರು.
ಈ ಸಂದರ್ಭ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಮತ್ತು ಈದ್ಗಾ ಜುಮಾ ಮಸೀದಿಯ ಅಧ್ಯಕ್ಷ ಅಲ್ಹಾಜ್ ಯೆನೆಪೊಯ ಅಬ್ದುಲ್ಲಾ ಕುಂಞಿ, ಉಪಾಧ್ಯಕ್ಷ ಕೆ. ಅಶ್ರಫ್, ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ, ಸಮದ್ ಹಾಜಿ, ಅದ್ದು ಹಾಜಿ ಮತ್ತಿತರರು ಪಾಲ್ಗೊಂಡಿದ್ದರು.
ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ಶಾಸಕ ಐವನ್ ಡಿಸೋಜ, ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈದ್ಗಾ ಮಸೀದಿಗೆ ಭೇಟಿ ನೀಡಿ ಶುಭ ಹಾರೈಸಿದರು.