Home Mangalorean News Kannada News ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಗತಿ

ಮಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಪ್ರಗತಿ

Spread the love

ಮಂಗಳೂರು : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಂತೆ ಎಪ್ರಿಲ್ 11 ರಿಂದ ಮನೆ-ಮನೆ ಗಣತಿ ಕಾರ್ಯವನ್ನು ಕೈಗೊಂಡಿದ್ದು, ಗಣತಿ ಕಾರ್ಯದ ಈವರೆಗಿನ ಪ್ರಗತಿ ಪರಿಶೀಲನಾ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ-ಇವರ ಅಧ್ಯಕ್ಷತೆಯಲ್ಲಿ ಮೇ 04 ರಂದು ಪೂರ್ವಾಹ್ನ 10.30 ಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಸಲಾಯಿತು ಹಾಗೂ ಚಾರ್ಜ್‍ವಾರು ಪ್ರಗತಿಯನ್ನು ಪರಿಶೀಲಿಸಲಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 3930 ಬ್ಲಾಕುಗಳಿದ್ದು, ಗಣತಿ ಕಾರ್ಯವು ಸುಮಾರು ಶೇ.99%ರಷ್ಟು ಅಂದರೆ ಒಟ್ಟು 4,30,677 ರಷ್ಟು ಜನ ಗಣತಿ ಪೂರ್ಣಗೊಂಡಿರುತ್ತದೆ ಹಾಗೂ ಕುಟುಂಬದ ಅನುಸೂಚಿ-3ರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗುತ್ತಿದ್ದು, ಡಾಟಾ ಎಂಟ್ರಿ ಕಾರ್ಯವು ಪ್ರಗತಿಯಲ್ಲಿರುತ್ತದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆಗೆ ಎಪ್ರಿಲ್ 30 ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಇದೀಗ ಸಮೀಕ್ಷೆಗೆ ಒಳಪಡದಿರುವ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲು ಹಾಗೂ ಸಾರ್ವಜನಿಕರಿಗೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಲ್ಪಿಸುವ ಸಲುವಾಗಿ ಮತ್ತು ಯಾವುದಾದರೂ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಸರಿಪಡಿಸಲು ಸಮೀಕ್ಷಾ ಅವಧಿಯನ್ನು ಮೇ 05  ರ ವರೆಗೆ  ಮುಂದೂಡಲಾಗಿರುತ್ತದೆ. ಆದ್ದರಿಂದ ಪ್ರತೀ ಗಣತಿದಾರರು ತಮ್ಮ ತಮ್ಮ ಬ್ಲಾಕಿಗೆ ಸಂಬಂಧಿಸಿದಂತೆ ಸಮೀಕ್ಷೆಗೆ ಒಳಪಡದಿರುವ/ಬಿಟ್ಟುಹೋಗಿರುವ ಕುಟುಂಬಗಳನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಗಿದೆ. ಅಂತೆಯೇ ಸಮೀಕ್ಷೆಯನ್ನು ನಡೆಸದೇ ಬಿಟ್ಟುಹೋಗಿರುವ ಕುಟುಂಬದ ಮುಖ್ಯಸ್ಥರು/ಸದಸ್ಯರು ಸಂಬಂಧಿಸಿದ ತಾಲೂಕು ತಹಶೀಲ್ದಾರರು, ನಗರ/ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳನ್ನು ಅಥವಾ ಸಮೀಕ್ಷೆಯ  ಸಹಾಯವಾಣಿ ಸಂಖ್ಯೆ:080-44554444 ನ್ನು ಕೂಡಲೇ ಸಂಪರ್ಕಿಸುವಂತೆ ಕೋರಲಾಗಿದೆ.ಅಂತೆಯೇ, ತಹಶೀಲ್ದಾರರು, ನಗರ/ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಸಾರ್ವಜನಿಕರಿಂದ ಬಂದಿರುವ ಮಾಹಿತಿಯನ್ನು ದಾಖಲಿಸಿ ತಮ್ಮ ತಮ್ಮ ಚಾರ್ಜ್‍ಗಳಲ್ಲಿ ಯಾವುದೇ ಕಾರಣ ನಿಮಿತ್ತ ಸಮೀಕ್ಷೆಗೆ ಒಳಪಡದಿರುವ ಮನೆಗಳ ಮಾಹಿತಿಯನ್ನು ಸಂಬಂಧಿಸಿದ ಗಣತಿದಾರರಿಗೆ ತಕ್ಷಣ ಮಾಹಿತಿ ನೀಡಿ ಸಮೀಕ್ಷೆ ನಡೆಸಲು ಅಗತ್ಯ  ಕ್ರಮವಹಿಸುವಂತೆಯೂ ಹಾಗೂ ಅನುಸೂಚಿ-3ರಲ್ಲಿ ಯಾವುದೇ ನ್ಯೂನತೆಗಳು ದಾಖಲಾಗಿರುವುದಿಲ್ಲವೆಂದು ದೃಢಪಡಿಸಿಕೊಳ್ಳುವಂತೆ ಜಿಲ್ಲಾ ಪ್ರಧಾನ ಸಮೀಕ್ಷಾಧಿಕಾರಿ ಮತ್ತು ದ.ಕ.ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.


Spread the love

Exit mobile version