ಮಂಗಳೂರು-ಕಾರ್ಕಳ ಮಧ್ಯೆ ಸರಕಾರಿ ಬಸ್‌! ಬುಧವಾರದಿಂದ ಸಂಚಾರ, ಸಮಯ-ನಿಲ್ದಾಣಗಳ ವಿವರ ಇಲ್ಲಿದೆ

Spread the love

ಮಂಗಳೂರು-ಕಾರ್ಕಳ ಮಧ್ಯೆ ಸರಕಾರಿ ಬಸ್‌! ಬುಧವಾರದಿಂದ ಸಂಚಾರ, ಸಮಯ-ನಿಲ್ದಾಣಗಳ ವಿವರ ಇಲ್ಲಿದೆ

ಮಂಗಳೂರು: ದಶಕಗಳ ಹೋರಾಟಕ್ಕೆ ಜಯ ಸಂದಿದೆ. ಮಂಗಳೂರು-ಕಾರ್ಕಳ ನಡುವೆ ಕಡೆಗೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಸದ್ಯ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್‌ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್‌ಗಳು ಸೇವೆ ನೀಡಲಿವೆ. ಒಂದು ಬಸ್‌ ದಿನಕ್ಕೆ 7 ಟ್ರಿಪ್‌ನಂತೆ ನಾಲ್ಕು ಬಸ್‌ಗಳು ಒಟ್ಟು 28 ಟ್ರಿಪ್‌ ಈ ಮಾರ್ಗದಲ್ಲಿ ನಡೆಸಲಿವೆ.

ಮಂಗಳೂರಿನಿಂದ ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ಸರಕಾರಿ ಬಸ್‌ ಸೇವೆ ಆರಂಭಿಸುವ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರುತ್ತಿದೆ. ಖಾಸಗಿ ಬಸ್‌ ಮಾಲೀಕರ ಭಾರಿ ಲಾಬಿಯ ಹೊರತಾಗಿಯೂ, ತಾತ್ಕಾಲಿಕ ಎರಡು ಪರ್ಮಿಟ್‌ನಡಿ ನಾಲ್ಕು ಬಸ್‌ಗಳ ಓಡಾಟ ಡಿ.11ರಿಂದ ಆರಂಭಗೊಳ್ಳಲಿದೆ.

ಆ ಮೂಲಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲೊಂದಾದ ಶಕ್ತಿ ಯೋಜನೆಯ ಪ್ರಯೋಜನ ಮೊದಲ ಬಾರಿಗೆ ಮಂಗಳೂರು, ಕೈಕಂಬ, ಎಡಪದವು, ಮೂಡುಬಿದಿರೆ, ಬೆಳುವಾಯಿ ಪ್ರದೇಶದ ಜನರಿಗೂ ತಲುಪಲಿದೆ.

ಸಾರ್ವಜನಿಕರ ಹಲವು ದಶಕಗಳ ಬೇಡಿಕೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ದಶಕದ ಪ್ರಸ್ತಾವನೆಯ ತೀರ್ಪು ಬಾಕಿ ಇರುವಾಗಲೇ ಮಂಗಳೂರು ಪ್ರಾದೇಶಿಕ ಸಾರಿಗೆ ಉಪ ಆಯುಕ್ತರ ಕಚೇರಿಯಿಂದ ನಾಲ್ಕು ಬಸ್‌ಗಳ ಸೇವೆ ಆರಂಭಿಸಲು ಎರಡು ಪರ್ಮಿಟ್‌ನ ನಡವಳಿ ಸೋಮವಾರ ಸಿದ್ಧಪಡಿಸಲಾಗಿದೆ. ಎಲ್ಲ ಬಸ್‌ಗಳು ಸಂಚರಿಸುವ ಸ್ಟೇಟ್‌ ಬ್ಯಾಂಕ್‌ ಪ್ರದೇಶದಿಂದ ಹೊಸ ಬಸ್‌ ಸಂಚಾರ ಆರಂಭಿಸಲು 1993ರ ಜಿಲ್ಲಾದಂಡಾಧಿಕಾರಿ ಅಧಿಸೂಚನೆ(ಡಿಎಂ ನೋಟಿಫಿಕೇಶನ್‌) ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಸದ್ಯ ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದಲೇ ಬಸ್‌ ಸೇವೆ ಆರಂಭಗೊಳ್ಳಲಿದೆ.

ಒಂದು ವೇಳೆ ಸ್ಟೇಟ್‌ಬ್ಯಾಂಕ್‌ ಪರಿಸರದಿಂದ ಅನುಮತಿ ಕೇಳಿ, ಬಸ್‌ ಸಂಚಾರ ಆರಂಭಿಸಿದರೆ, ಡಿಎಂ ನೋಟಿಫಿಕೇಶನ್‌ ಮೂಲಕ ಕಾನೂನು ತೊಡಕು ಸಂಭವಿಸಿ, ಖಾಸಗಿಯವರು ನ್ಯಾಯಾಲಯದಲ್ಲಿ ಪ್ರಶ್ನಿಸಿ, ಸಂಚಾರಕ್ಕೆ ಅಡ್ಡಿ ಮಾಡುವ ಆತಂಕವಿರುವ ಹಿನ್ನೆಲೆಯಲ್ಲಿ ಬಿಜೈಯಿಂದ ಸಂಚಾರ ಆರಂಭಿಸಲು ಅನುಮತಿ ಕೋರಲಾಗಿತ್ತು.

ಸದ್ಯ ನಾಲ್ಕು ಬಸ್‌ಗಳು ಮಾತ್ರ ಸಂಚರಿಸಲಿವೆ. ಪ್ರತಿದಿನ ಮಂಗಳೂರು ಕಡೆಯಿಂದ ಎರಡು ಬಸ್‌ಗಳು ಮತ್ತು ಕಾರ್ಕಳ ಕಡೆಯಿಂದ ಎರಡು ಬಸ್‌ಗಳು ಸೇವೆ ನೀಡಲಿವೆ. ಒಂದು ಬಸ್‌ ದಿನಕ್ಕೆ 7 ಟ್ರಿಪ್‌ನಂತೆ ನಾಲ್ಕು ಬಸ್‌ಗಳು ಒಟ್ಟು 28 ಟ್ರಿಪ್‌ ನಡೆಸಲಿವೆ. ಕೆಎಸ್‌ಆರ್‌ಟಿಸಿ ಹಿರಿಯ ಪ್ರಾದೇಶಿಕ ನಿಯಂತ್ರಕರ ಕಚೇರಿಯಿಂದ ಡಿ.10ರಂದು ಎರಡು ಬಸ್‌ಗಳ ನೋಂದಣಿ ಸಂಖ್ಯೆ ಕೊಟ್ಟು ಪರ್ಮಿಟ್‌ ಪಡೆಯಲಿದ್ದು, ಬಸ್‌ ಸಂಚಾರ ಡಿ.11ರಿಂದ ಆರಂಭಿಸಲು ಬಸ್‌ ಮತ್ತು ಸಿಬ್ಬಂದಿಗೆ ವ್ಯವಸ್ಥೆ ಮಾಡಲಾಗಿದೆ.

ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ 8 ಬಸ್‌ಗಳ ಏಳು ಸಿಂಗಲ್‌ ಟ್ರಿಪ್‌ಗೆ ಕೆಎಸ್‌ಆರ್‌ಟಿಸಿಯಿಂದ 2014ರಲ್ಲಿಅರ್ಜಿ ಸಲ್ಲಿಸಿರುವ ವಿಷಯ ಬಗ್ಗೆ ನ.5ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅಧ್ಯಕ್ಷತೆಯಲ್ಲಿಆರ್‌ಟಿಎ ಸಭೆ ನಡೆದು, ಪರ-ವಿರೋಧ ವಾದ ಮಂಡನೆಯಾಗಿತ್ತು. ಉಭಯ ಕಡೆಯ ವಾದ ಆಲಿಸಿದ ಡಿಸಿ, ಆದೇಶ ಕಾಯ್ದಿರಿಸಿದ್ದಾರೆ.

ನಾವು ಎಂಟು ಬಸ್‌ಗಳ ಸಂಚಾರಕ್ಕೆ ಅನುಮತಿ ಕೋರಿದ್ದು, ಅದರ ವಿಚಾರಣೆ ನ.5ರ ಆರ್‌ಟಿಎ ಸಭೆಯಲ್ಲಿ ನಡೆದು, ತೀರ್ಪು ಇನ್ನಷ್ಟೇ ಬರಬೇಕಿದೆ. ಈ ಮಧ್ಯೆ ನಾಲ್ಕು ತಿಂಗಳ ಅವಧಿಗೆ ನಾಲ್ಕು ಬಸ್‌ಗಳಿಗೆ ಅನುಮತಿ ಸಿಕ್ಕಿದೆ. ಒಂದೆರಡು ದಿನಗಳಲ್ಲಿ ಬಸ್‌ ಓಡಿಸುತ್ತೇವೆ ಎಂದು ರಾಜೇಶ್‌ ಶೆಟ್ಟಿ, ಹಿರಿಯ ಪ್ರಾದೇಶಿಕ ನಿಯಂತ್ರಕ, ಕೆಎಸ್‌ಆರ್‌ಟಿಸಿ ತಿಳಿಸಿದ್ದಾರೆ


Spread the love
Subscribe
Notify of

0 Comments
Inline Feedbacks
View all comments