ಮಂಗಳೂರು:  ಕುಖ್ಯಾತ ಸರಕಳ್ಳರಿಬ್ಬರ ಬಂಧನ

Spread the love

 ಮಂಗಳೂರು:  ಕುಖ್ಯಾತ ಸರಕಳ್ಳರಿಬ್ಬರ ಬಂಧನ

ಮಂಗಳೂರು:  ಕಮೀಷನರೇಟ್ ವ್ಯಾಪ್ತಿಯಲ್ಲಿ ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ನಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಸರಕಳ್ಳರಿಬ್ಬರನ್ನು ಕೃತ್ಯ ನಡೆದ 24 ಗಂಟೆ ಒಳಗಡೆ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಚಿನ್ನದ ಸರ ಹಾಗೂ ಕಳವುಗೈದ ಬೈಕ್ ನ್ನು ವಶಪಡಿಸಿಕೊಂಡು ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣ -1: ದಿನಾಂಕ: 06-12-2024 ರಂದು ನರಿಂಗಾನ ಗ್ರಾಮದ ತೌಡುಗೋಳಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದ ಸುಜಿನಾ ಡಿಸೊಜಾ ರವರು ಅಂಗನವಾಡಿಯಲ್ಲಿ ಕೆಲಸದಲ್ಲಿರುವ ಸಮಯ ಮದ್ಯಾಹ್ನ 1.15 ಗಂಟೆ ಸುಮಾರಿಗೆ ಇಬ್ಬರು ಬೈಕಿನಲ್ಲಿ ಅಂಗನವಾಡಿಗೆ ಬಂದು, ಬೈಕಿನಿಂದ ಇಳಿದು ಮಂಜನಾಡಿಗೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದು, ಸುಜಿನಾ ಡಿಸೊಜಾ ರವರು ಮಂಜನಾಡಿಗೆ ಹೋಗುವ ದಾರಿಯನ್ನು ಹೇಳಿ, ಅಂಗನವಾಡಿಯ ಬಾಗಿಲನ್ನು ಹಾಕುವಷ್ಟರಲ್ಲಿ ಬಾಗಿಲನ್ನು ದೂಡಿ ಅಂಗನವಾಡಿಯ ಒಳಗೆ ಪ್ರವೇಶಿಸಿ, ಸುಜಿನಾ ಡಿಸೊಜಾ ರವರ  ಕುತ್ತಿಗೆಯ ಚಿನ್ನದ ಸರವನ್ನು ಸುಲಿಗೆ  ಮಾಡಿ ಆರೋಪಿಗಳು ಬೈಕ್ ಸಮೇತ ಪರಾರಿಯಾಗಿರುತ್ತಾರೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಕರಣ-2 : ದಿನಾಂಕ:09-12-2024 ರಂದು ಉಡುಪಿ ಜಿಲ್ಲೆಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಬೋಳ ಗ್ರಾಮದ ಸುಂಕಮಾರು- ಮಂಜರಪಲ್ಕೆ ಎಂಬಲ್ಲಿ  ಸಾರ್ವಜನಿಕ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವಸಂತಿ ಎಂಬವರಲ್ಲಿ ಬೈಕ್ ನಲ್ಲಿ ಬಂದ ಯುವಕ ಮತ್ತು ಯುವತಿ ಬಾಸ್ಕರ್ ಎಂಬವರ ಮನೆಗೆ ಹೋಗುವ ದಾರಿ ಯಾವುದೆಂದು ಕೇಳಿ ಬೈಕ್ ಸವಾರನು ವಸಂತಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ  ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಂಗಳೂರು ಸಿಸಿಬಿ ಪೊಲೀಸರು ಸಿಸಿ ಟಿವಿ ಫೂಟೇಜ್ ಗಳನ್ನು ಸಂಗ್ರಹಿಸಿ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಈ ಹಿಂದೆ ಹಲವು ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಸುಮಾರು 4 ದಿನಗಳ ಹಿಂದೆ ಜೈಲ್ ನಿಂದ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ ಹಬೀಬ್ ಹಸನ್ ಹಾಗೂ ಆತನ ಸಹಚರನು ಭಾಗಿಯಾಗಿರುವ ಕುರಿತು ಖಚಿತಗೊಂಡ ಮೇರೆಗೆ ಅವರ ಪತ್ತೆಗಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಸಮಯ ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿಯಲ್ಲಿದ್ದಾನೆ ಮಾಹಿತಿ ಬಂದಂತೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ  ನಡೆಸಿ  ಆರೋಪಿಗಳಾದ   ಸುರತ್ಕಲ್ ಕೃಷ್ಣಾಪುರ ನಿವಾಸಿ ಹಬೀಬ್ ಹಸನ್@ ಚೊಂಬುಗುಡ್ಡೆ ಹಬೀಬ್ @ ಅಬ್ಬಿ,(43) ಮತ್ತು ಬಂಟ್ವಾಳ ಅದ್ದೆಡ್ಡಿ ಹೌಸ್ ನಿವಾಸಿ ಉಮ್ಮರ್ ಶಿಯಾಫ್ (29) ಎಂಬವರನ್ನು ದಸ್ತಗಿರಿ ಮಾಡಿ ಹಬೀಬ್ ಹಸನ್ @ಚೊಂಬುಗುಡ್ಡೆ ಹಬೀಬ್ @ ಅಬ್ಬಿ ಎಂಬಾತನ ವಶದಿಂದ ಕಾರ್ಕಳದಿಂದ ಸುಲಿಗೆ ಮಾಡಿದ 17.43 ಗ್ರಾಂ ಚಿನ್ನದ ಸರ, ಸರಕಳ್ಳತನ ಮಾಡಲು ಉಪಯೋಗಿಸಿದ ಕೆಎ-19-ವಿ-9160 ನೇ ಹೀರೋ ಹೊಂಡಾ ಬೈಕ್, ಚೂರಿ-1 ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಈತನನ್ನು ದಸ್ತಗಿರಿ ಮಾಡಲು ಪೊಲೀಸರು ಬಂದಾಗ ಅವರಿಗೆ ಹಲ್ಲೆ ನಡೆಸಲು ಈ ಚೂರಿಯನ್ನು ಇಟ್ಟುಕೊಂಡಿದ್ದನು.
ಆರೋಪಿಗಳಿಬ್ಬರು ಈ ಹಿಂದೆ 2 ತಿಂಗಳ ಹಿಂದೆ ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಕಡೆ ಮಹಿಳೆಯರ ಕುತ್ತಿಗೆಯಿಂದ ಸರಕಳ್ಳತನ ಮಾಡಿ ದಸ್ತಗಿರಿಯಾಗಿ ಮಂಗಳೂರು ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದವರು ದಿನಾಂಕ: 06-12-2024 ರಂದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದು, ಅದೇ ದಿನವೇ ಮಂಗಳೂರು ನಗರದ ಜೈಲ್ ರಸ್ತೆಯ ಪರಿಸರದಲ್ಲಿ ಬೈಕ್ ಕಳ್ಳತನ ಮಾಡಿ ಮರುದಿನ ಆರೋಪಿಗಳಿಬ್ಬರು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೌಡುಗೋಳಿ ಬಳಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದರು. ಅಲ್ಲದೇ 2 ದಿನ ಬಿಟ್ಟು ಮಂಗಳೂರು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಇನ್ನೊಂದು ಬೈಕ್ ನ್ನು ಕಳವು ಮಾಡಿ ಅದೇ ಬೈಕ್ ನಲ್ಲಿ ಆರೋಪಿ ಹಬೀಬ್ ನು ಆತನ ಸ್ನೇಹಿತೆ ಮಹಿಳೆಯ ಜೊತೆಗೂಡಿ ಕಾರ್ಕಳದಲ್ಲಿ ಮಹಿಳೆಯೋರ್ವರ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿರುವುದಾಗಿದೆ.
ಆರೋಪಿಗಳ ಪೈಕಿ ಹಬೀಬ್ ಹಸನ್ @ ಅಬ್ಬಿ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರಿ, ಸುರತ್ಕಲ್, ಉಳ್ಳಾಲ,, ಕೊಣಾಜೆ, ಬಜ್ಪೆ, ವಿಟ್ಲ, ಬಂಟ್ವಾಳ ನಗರ, ಕಾರ್ಕಳ ಗ್ರಾಮಾಂತರ  ಪೊಲೀಸ್ ಠಾಣೆಗಳಲ್ಲಿ ಒಟ್ಟು 39 ಕಳವು, ಜಾನುವಾರು ಕಳವು, ಸರಕಳ್ಳತನ ಪ್ರಕರಣಗಳು  ದಾಖಲಾಗಿರುತ್ತದೆ. ಆರೋಪಿ ಉಮ್ಮರ್ ಶಿಯಾಫ್ ಎಂಬಾತನು ಈ ಹಿಂದೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಹಾಗೂ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ 2 ಸರಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಆರೋಪಿಗಳಿಬ್ಬರು ದಿನಾಂಕ: 06-12-2024 ಕಾರಾಗೃಹದಿಂದ ಬಿಡುಗಡೆಗೊಂಡಿರುವುದಾಗಿದೆ.
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಸುಲಿಗೆ ಮಾಡಿದ 24 ಗಂಟೆ ಒಳಗಡೆ ಆರೋಪಿಯನ್ನು ಹಾಗೂ ಸುಲಿಗೆ ಮಾಡಿದ ಸೊತ್ತನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಸರಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ  ಹಾಗೂ ಸೊತ್ತುಗಳ ಪತ್ತೆ ಕಾರ್ಯವನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ರವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐಯವರಾದ ಸುದೀಪ್ ಎಂ ವಿ, ಎಎಸ್ಐ ಯವರಾದ ಮೋಹನ್ ಕೆ ವಿ, ರಾಮ ಪೂಜಾರಿ, ಸುಜನ್ ಶೆಟ್ಟಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.

Spread the love