ಮಂಗಳೂರು: ಯಾವುದೇ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದೂ ಸಾಹಿತ್ಯದಲ್ಲಿ ಅತ್ಯಮೂಲ್ಯ ಸೇವೆಗಳಲ್ಲಿ ಒಂದು ಎಂದು ಕನ್ನಡ ಸಾಹಿತ್ಯ ಪರéಿತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಹೇಳಿದರು. ಅರೆಹೊಳೆ ಪ್ರತಿಷ್ಠಾನವು ಈ ದಿಸೆಯಲ್ಲಿ ಕನ್ನಡ-ತುಳುಗಳ ಒಟ್ಟೂ ಏಳು ಕೃತಿಗಳನ್ನು ಈ ವರೆಗೆ ಪ್ರಕಟಿಸಿದ್ದು, ಶ್ಲಾಘನೀಯ ಎಂದೂ ಅವರು ಹೇಳಿದರು.
ಅವರು ಮಂಗಳೂರಿನಲ್ಲಿ ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಹಾಗೂ ಅರೆಹೊಳೆ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ‘ಸಾರಸ್ವತ ಪಯಣ’ದಲ್ಲಿ ಸದಾನಂದ ನಾರಾವಿಯವರ ಚುಟುಕುಗಳ ಸಂಕಲನ ‘ಮುತ್ತು ಮಲ್ಲಿಗೆ’ ಹಾಗೂ ಶೈಲಜಾ ಪುದುಕೋಳಿಯವರ ಲಲಿತ ಬರಹಗಳ ಸಂಕಲನ ‘ಕಾಲುದಾರಿಯ ಗುರುತು’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತಾಡುತ್ತಿದ್ದರು. ಕೃತಿಗಳ ಬಗ್ಗೆ ಸಾಹಿತಿ ರವಿಶಂಕರ ಒಡ್ಡಂಬೆಟ್ಟು ಹಾಗೂ ಡಾ.ರಾಧಾಕೃಷ್ಣ ಬೆಳ್ಳೂರು ಅವರು ಮಾತಾಡಿದರು. ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷ ಶ್ರೀಧರ್ ಅವರು ಅಧ್ಯಕ್ಷತೆ ವಹಿಸಿದ್ದರು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷಿ ರಾವ್ ವಂದಿಸಿದರು. ಲಯನ್ಸ್ ಕ್ಲಬ್ ಕದ್ರಿ ಹಿಲ್ಸ್ ಕಾರ್ಯದರ್ಶಿ ಮಂಜುನಾಥ್, ಕೃತಿಕಾರರಾದ ಶೈಲಜಾ ಪುದಕೋಳಿ ಹಾಗೂ ಸದಾನಂದ ನಾರಾವಿ ಉಪಸ್ಥಿತರಿದ್ದರು. ಶ್ವೇತಾ ಅರೆಹೊಳೆ ಮತ್ತು ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.