ಮಂಗಳೂರು: ಎಳೆಯ ವಯಸ್ಸಿನಿಂದಲೇ ಕ್ರೀಡಾಕ್ಷೇತ್ರದಲ್ಲಿ ಒಲವನ್ನು ಬೆಳೆಸಿಕೊಂಡು ಕಠಿಣ ಶ್ರಮದೊಂದಿಗೆ ಕ್ರೀಡಾರಂಗದಲ್ಲಿ ಯಶಸ್ಸನ್ನು ಸಾಧಿಸಬಹುದು ಎನ್ನುವುದಕ್ಕೆ ಕೆನರಾ ಕಾಲೇಜಿನ ದ್ವಿತೀಯ ಬಿ.ಕಾಂನ ವಿದ್ಯಾರ್ಥಿನಿ ಕು. ನಮ್ರಶಾ ಎನ್ ಗಾಣಿಗ ಸಾಕ್ಷಿ. ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ನಮ್ರಶಾ ರವರ ಗಮನ ಸೆಳೆದದ್ದು ಕರಾಟೆ. ರಾಜ್ಯಮಟ್ಟದಿಂದ ಹಿಡಿದು, ಅಂತರಾಷ್ಟ್ರೀಯ ಮಟ್ಟದವರೆಗೂ ಕರಾಟೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದ ಈಕೆ ಉತ್ತಮ ಕ್ರೀಡಾ ಸಾಧಕಿ.
ನಮ್ರಶಾ ಕೇವಲ ಕರಾಟೆಯಲ್ಲಿ ಮಾತ್ರವಲ್ಲದೆ, ಉಷು (Wushu), ಭಾರ ಎತ್ತುವಿಕೆ ಕ್ರೀಡೆಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾಳೆ. ಉಷು ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಮೊದಲ ಬಹುಮಾನವನ್ನು ಪಡೆದಿರುತ್ತಾಳೆ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುತ್ತಾಳೆ. ಇವರ ಈ ಸಾಧನೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರೋತ್ಸಾಹಿಸಿವೆ. ಈವರೆಗೆ ಒಟ್ಟು 38 ಚಿನ್ನ, 15 ಬೆಳ್ಳಿ, 12 ಕಂಚಿನ ಪದಕಗಳನ್ನು ಗಳಿಸಿರುವುದು ಈಕೆಯ ಹೆಗ್ಗಳಿಕೆ. ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ 4ನೇ ಏಷ್ಯಾ ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ 1 ಬೆಳ್ಳಿ ಮತ್ತು 1 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿರುವ ಈಕೆ ಕೆನರಾ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿನಿ.
ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗಲೇ ಕ್ರೀಡೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮುಂದೆ ತಾನು ಒಬ್ಬ ಉತ್ತಮ ಕ್ರೀಡಾಪಟು ಆಗಬೇಕೆಂದು ಕನಸನ್ನು ಕಂಡವರು. ಅವರ ಈ ಕನಸಿಗೆ ತಂದೆ – ನಾಗೇಶ್, ತಾಯಿ – ವಿದ್ಯಾ ನಾಗೇಶ್ ಹಾಗೂ ತರಬೇತುದಾರರಾದ ಶ್ರೀ ಕಿಶೋರ್ ಬಂಗೇರರವರ ಪ್ರೋತ್ಸಾಹವು ದೊರೆತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಮಾಡುವಂತಾಯಿತು. ಕೆನರಾ ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕ ಶಿಕ್ಷಕೇತರ ವೃಂದ, ವಿದ್ಯಾರ್ಥಿವೃಂದ ನಿರಂತರ ಪ್ರೋತ್ಸಾಹವನ್ನು ನೀಡಿ ಶುಭವನ್ನು ಹಾರೈಸಿರುತ್ತಾರೆ.