ಮಂಗಳೂರು: ಕೆಪಿಎಸ್ಸಿ ಪರೀಕ್ಷೆ- ನಿಷೇಧಾಜ್ಞೆ ಜಾರಿ
ಮಂಗಳೂರು: ನವೆಂಬರ್ 4 ಮತ್ತು 5 ರಂದು ಮಂಗಳೂರು ತಾಲೂಕಿನ ಒಟ್ಟು ಮೂರು ಪರೀಕ್ಷೆ ಕೇಂದ್ರಗಳಲ್ಲಿ ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಈ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು, ಅಹಿತಕರ ಘಟನೆಗಳು ನಡೆಯದಂತೆ ಪರೀಕ್ಷೆಗಳನ್ನು ಶಾಂತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಮಂಗಳೂರು ನಗರದ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳೂ ಆಗಿರುವ ಉಪ ಪೊಲೀಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಆದೇಶ ಹೊರಡಿಸಿದ್ದಾರೆ.
ನವೆಂಬರ್ 04ರಂದು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ ವರೆಗೆ ಮತ್ತು ನವೆಂಬರ್ 5 ರಂದು ಬೆಳಿಗ್ಗೆ 10 ರಿಂದ 11.30 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ನಗರದ ಕಾರ್ ಸ್ಟ್ರೀಟ್ನ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ ಸ್ಟ್ರೀಟ್ ಮಹಿಳಾ ಪದವಿಪೂರ್ವ ಕಾಲೇಜು, ಬಲ್ಮಠ ಮಹಿಳಾ ಪದವಿಪೂರ್ವ ಕಾಲೇಜಿನ ಸುತ್ತಮುತ್ತಲ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ.