ಮಂಗಳೂರು: ಕೊಲೆಯತ್ನ ಪ್ರಕರಣದ ಆರೋಪಿಗಳ ಬಂಧನ
ಮಂಗಳೂರು: ಜೈಲಿನಿಂದ ಬಿಡುಗಡೆ ಹೊಂದಿ ಮನೆಯವರೊಂದಿಗೆ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿರುವಾಗ ಆಯುಧಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ ಸಹಿತ ನಾಲ್ವರನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಸುರತ್ಕಲ್ ನಿವಾಸಿ ಅಣ್ಣಪ್ಪ ಸ್ವಾಮಿ @ ಮನು (24), ತಲಪಾಡಿ ನಿವಾಸಿ ಸಚಿನ್ (24) ಮತ್ತು ಪಜೀರ್ ನಿವಾಸಿ ಕುಶಿತ್ (18) ಎಂದು ಗುರುತಿಸಲಾಗಿದೆ.
ನವೆಂಬರ್ 8 ರಂದು ತಲಪಾಡಿ ಗ್ರಾಮದ ಕೆಸಿರೋಡ್-ಉಚ್ಚಿಲ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಳೇಯ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆ ಹೊಂದಿ ಕಾಸರಗೋಡು ಬಡಾಜೆ ನಿವಾಸಿ ಮೊಹಮ್ಮದ್ ಆಸೀಫ್ (33) ಎಂಬವರು ತನ್ನ ಮನೆಯವರ ಜೊತೆಯಲ್ಲಿ ವಾಹನದಲ್ಲಿ ಮಂಗಳೂರಿನಿಂದ ಕೇರಳ ಕಡೆಗೆ ಹೋಗುತ್ತಿರುವಾಗ ಆರೋಪಿಗಳು ಸದ್ರಿ ಮೊಹಮ್ಮದ್ ಆಸೀಫ್ ರವರನ್ನು ಹತ್ಯಾರುಗಳಲ್ಲಿ ಧಾಳಿ ಮಾಡಿ ಕೊಲೆ ಮಾಡಲು ಯತ್ನಿಸಿರುತ್ತಾರೆ ಎಂಬ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದರಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿರುತ್ತದೆ. ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಬಾಲಕ ಈತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್, ಐಪಿಎಸ್. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಸಿದ್ಧಾರ್ಥ ಗೋಯೆಲ್, ಅಪರಾಧ ಮತ್ತು ಸಂಚಾರ ವಿಭಾಗದ ಮಾನ್ಯ ಉಪ-ಪೊಲೀಸ್ ಆಯುಕ್ತರಾದ ದಿನೇಶ್ ಕುಮಾರ್, ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ.ಎನ್.ನಾಯಕ್ ರವರ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಬಾಲಕೃಷ್ಣ,ಹೆಚ್.ಎನ್. ಮತ್ತು ಪೊಲೀಸ್ ಉಪ-ನಿರೀಕ್ಷಕರು ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ.