ಮಂಗಳೂರು: ಕೋಮು ಗಲಭೆ ಪ್ರಕರಣ ಹಿಂದೆಗೆತ ರದ್ಧತಿಗೆ ಬಿಜೆಪಿ ಆಗ್ರಹ

Spread the love

ಮಂಗಳೂರು: ವಿವಾದಾತ್ಮಕ ನಿರ್ಧಾರವೊಂದರಲ್ಲಿ 2009ರಲ್ಲಿ ಮೈಸೂರಿನಲ್ಲಿ ಮತ್ತು 2010ರಲ್ಲಿ ಶಿವಮೊಗ್ಗ, ಹಾಸನಗಳಲ್ಲಿ ನಡೆದ ಕೋಮುಗಲಭೆಗಳ ಆರೋಪಿಗಳ ವಿರುದ್ಧದ ಕೇಸುಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದನ್ನು ದುರದೃಷ್ಟಕರವೆಂದು ಬಿಜೆಪಿ ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

2009ರ ಏಪ್ರಿಲ್ ಮತ್ತು ಜುಲೈನಲ್ಲಿ ಮೈಸೂರಿನ ಉದಯಗಿರಿ ಮತ್ತು ನರಸಿಂಹರಾಜ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ವದಂತಿಯನ್ನು ಮುಂದಿರಿಸಿ ಕೋಮುಗಲಭೆಗಳನ್ನು ಉಂಟುಮಾಡಿ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮತ್ತು ಅರಾಜಕ ವಾತಾವರಣ ಸೃಷ್ಟಿಯಾಗಿತ್ತು. ಪಿ.ಎಫ್.ಐ. ಮತ್ತು ಕೆ.ಎಫ್.ಡಿ ಕಾರ್ಯಕರ್ತರು ಅಕ್ರಮ ಗುಂಪುಗಳನ್ನು ಕಟ್ಟಿಕೊಂಡು ಕೋಮುಗಲಭೆಯನ್ನು ಉಂಟು ಮಾಡಿ, ಕರ್ತವ್ಯನಿರತ ಪೆÇಲೀಸರ ಮೇಲೆ ಹಲ್ಲೆ ನಡೆಸಿದ್ದರು. ಸಾರ್ವಜನಿಕರ ಮೇಲೆ ಕಲ್ಲು ತೂರಾಟ, ಅಪಾರ ಪ್ರಮಾಣದ ಸಾರ್ವಜನಿಕ ಸೊತ್ತುಗಳಿಗೆ ಜಖಂ, ವಾಹನಗಳಿಗೆ ಬೆಂಕಿ, ಅಂಗಡಿ ಮುಗ್ಗಟ್ಟುಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಪ್ರಕರಣಗಳಲ್ಲಿ 214 ಮಂದಿಯ ಮೇಲೆ ಕೇಸು ದಾಖಲಿಸಲಾಗಿತ್ತು. 2010ರಲ್ಲಿ ಬಾಂಗ್ಲಾದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್‍ರ “ಪರ್ದಾ ಏ ಪರ್ದಾ” ಕಾದಂಬರಿಯನ್ನು ಕನ್ನಡದ ದೈನಿಕ ಒಂದರಲ್ಲಿ ಅನುವಾದಿಸಿ ಪ್ರಕಟಿಸಿರುವುದನ್ನು ವಿರೋಧಿಸಿ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗಲಭೆ ಸೃಷ್ಟಿಯಾಗಿತ್ತು. ಈ ಸಂದರ್ಭದಲ್ಲಿಯೂ ಅಪಾರ ಪ್ರಮಾಣದ ಸಾರ್ವಜನಿಕ ಸೊತ್ತುಗಳ ನಾಶ, ಹಲ್ಲೆ, ಧ್ವಂಸ ಪ್ರಕರಣಗಳು ದಾಖಲಾಗಿತ್ತು. ಶಿವಮೊಗ್ಗದಲ್ಲಿ 114 ಮತ್ತು ಹಾಸನದಲ್ಲಿ 21 ಪ್ರಕರಣದಲ್ಲಿ 1400 ಮಂದಿಯನ್ನು ಆರೋಪಿಗಳೆಂದು ಪರಿಗಣಿಸಲಾಗಿತ್ತು. ಈ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದು ಅಲ್ಪಸಂಖ್ಯಾತರ ತುಷ್ಟಿಕರಣಕ್ಕೆ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ಆರೋಪಿಸಿದೆ.
ರಾಜ್ಯ ಸರಕಾರದ ಎರಡು ವರುಷಗಳ ಅನಂತರದ ಶೂನ್ಯ ಸಾಧನೆಯಿಂದಾಗಿ ಕಂಗೆಟ್ಟಿರುವ ರಾಜ್ಯ ಆಡಳಿತ ವೈಫಲ್ಯವನ್ನು ಮರೆಮಾಚಿ, ಮುಂದಿನ ಪಂಚಾಯತ್ ಚುನಾವಣೆಗಳಲ್ಲಿ ಮತಗಳಿಕೆಯ ಉದ್ದೇಶದಿಂದ ಇದನ್ನು ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ದೇಶದ ಜಾತ್ಯಾತೀತ ನಿಲುವಿಗೆ ಸಂಪೂರ್ಣ ತಿಲಾಂಜಲಿಯನ್ನಿತ್ತು ಕೇವಲ ಒಂದು ವರ್ಗದ ಓಲೈಕೆಗಾಗಿ ತೆಗೆದುಕೊಂಡಿರುವ ಈ ನಿರ್ಧಾರದ ದೂರಗಾಮಿ ಪರಿಣಾಮಗಳ ಬಗ್ಗೆ ರಾಜ್ಯ ಸರಕಾರ ಚಿಂತಿಸುತ್ತಿಲ್ಲ. ರಾಜ್ಯದ ಅಭಿವೃದ್ಧಿಗೆ ಮಾರಕವಾಗಿರುವ ಕೋಮು ಗಲಭೆಗಳನ್ನು ಹತ್ತಿಕ್ಕುವ ಬದಲಾಗಿ ಮತಾಂಧ ಶಕ್ತಿಗಳಿಗೆ ಪರೋಕ್ಷ ಬೆಂಬಲವನ್ನು ರಾಜ್ಯ ಸರಕಾರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಗಲಭೆಕೋರರಿಗೆ ತಮ್ಮ ಕುಕೃತ್ಯಗಳಿಗೆ ಕುಮ್ಮಕ್ಕು ಮತ್ತು ಪೊಲಿಸ್ ಇಲಾಖೆಯ ನೈತಿಕ ಸ್ಥೈರ್ಯ ಇದರಿಂದ ಕುಸಿಯಲಿದೆ. ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ನೆಲೆ, ಕಾರ್ಯಸ್ಥಾನದ ಬಗ್ಗೆ ಹಲವಾರು ಬಾರಿ ತನಿಖೆಗಳಲ್ಲಿ ಸಾಬೀತುಗೊಂಡಿದ್ದರೂ, ರಾಜ್ಯ ಸರಕಾರ ಕೇವಲ ಮತ ಬ್ಯಾಂಕ್ ರಾಜಕೀಯಕ್ಕಾಗಿ ಜನತೆಯ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತಂದೊಡ್ಡುತ್ತಿರುವುದಕ್ಕೆ ಬಿಜೆಪಿ ಜಿಲ್ಲಾ ಸಮಿತಿ ಕಟುವಾಗಿ ಟೀಕಿಸಿದೆ.
ಪೋಲಿಸ್ ಇಲಾಖೆ ಈಗಾಗಲೇ ತಮ್ಮ ನೈತಿಕ ಸ್ಥೈರ್ಯ ಕಳೆದುಕೊಂಡಿದ್ದು, ಅಕ್ರಮ ಗೋ ದರೋಡೆಕೋರರು, ಕಳ್ಳ ಸಾಗಣಿಕೆದಾರರನ್ನು ನಿಗ್ರಹಿಸುವಲ್ಲಿ ವೈಫಲ್ಯವನ್ನು ಎದುರಿಸುತ್ತಿದೆ. ರಾಜ್ಯ ಸರಕಾರ ಈ ಪ್ರಮಾದವನ್ನು ಮನಗಂಡು, ಕೋಮುಶಕ್ತಿಗಳನ್ನು ನಿಗ್ರಹಿಸುವಲ್ಲಿ ಕ್ರಮಕೈಗೊಳ್ಳಬೇಕು. ಆಡಳಿತಾತ್ಮಕ ಮತ್ತು ಪೋಲಿಸ್ ವ್ಯವಸ್ಥೆಯಲ್ಲಿ ಮತೀಯ ವಿಚಾರಗಳನ್ನು ತಂದು ವಿವಾದವನ್ನು ಸೃಷ್ಟಿಸಬಾರದು ಎಂದು ರಾಜ್ಯ ಸರಕಾರವನ್ನು ಬಿಜೆಪಿ ಆಗ್ರಹಿಸಿದೆ.


Spread the love