Home Mangalorean News Kannada News ಮಂಗಳೂರು: ಗುಡ್ಡ ಜರಿದು ಮೂವರು ಕಟ್ಟಡ ಕಾರ್ಮಿಕರು ಸಮಾಧಿ

ಮಂಗಳೂರು: ಗುಡ್ಡ ಜರಿದು ಮೂವರು ಕಟ್ಟಡ ಕಾರ್ಮಿಕರು ಸಮಾಧಿ

Spread the love

ಮಂಗಳೂರು: ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ದಾರುಣವಾಗಿ ಮೃತಪಟ್ಟ ಘಟನೆ  ಫರಂಗಿಪೇಟೆಯ ಪುದು ಗ್ರಾಮ ಪಂಚಾಯತ್ ಕಚೇರಿ ಬಳಿ ನಡೆದಿದೆ.
ಮೃತರನ್ನು ಪಶ್ಚಿಮ ಬಂಗಾಳ ಮೂಲದವರಾಗಿರುವ ಮಿಲೋನ್, ತೇರಿಕ್ವೆಲ್ ಮತ್ತು ಮೈನೋಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಕುತುಬ್, ರಾಜೀವ್ ಮತ್ತು ಜಿತೇಂದ್ರ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಫರಂಗಿಪೇಟೆಯ ಸೈಯದ್ ಬಾವ ಎಂಬವರಿಗೆ ಸೇರಿದ ಈ ನಿರ್ಮಾಣ ಹಂತದಲ್ಲ್ಲಿರುವ ಕಟ್ಟಡವು ಪುದು ಗ್ರಾಮ ಪಂಚಾಯತ್ ಕಚೇರಿಯ ಹಿಂಭಾಗದಲ್ಲಿದೆ. ಇಲ್ಲಿ ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದ 10ಕ್ಕೂ ಅಧಿಕ ಕಾರ್ಮಿಕರು ನಿರ್ಮಾಣ ಕೆಲಸದಲ್ಲಿ ನಿರತರಾಗಿದ್ದರು. ಇಂದು ಮಧ್ಯಾಹ್ನ ಇವರು ಕೆಲಸ ಮಾಡುತ್ತಿದ್ದ ಸಂದರ್ಭ ಗುಡ್ಡವು ಹಠಾತ್ ಕುಸಿದಿದೆ. ಈ ವೇಳೆ ಭಾರೀ ಪ್ರಮಾಣದ ಮಣ್ಣು ನಿರ್ಮಾಣ ಹಂತದ ಕಟ್ಟಡ ಸೇರಿದಂತೆ ಏಳು ಮಂದಿ ಕಾರ್ಮಿಕರು ಅದರಡಿ ಸಿಲುಕಿಕೊಂಡಿದ್ದರು. ಈ ಸುದ್ದಿ ಪರಿಸರದಲ್ಲಿ ಹರಡು ತ್ತಿದ್ದಂತೆ ಸ್ಥಳೀಯರು ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಸಿಲುಕಿಕೊಂಡವರಲ್ಲಿ ನಾಲ್ವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಸ್ಥಳೀಯರ ನೆರೆವಿನೊಂದಿಗೆ ಜೇಸಿಬಿ ಯಂತ್ರವನ್ನು ಸ್ಥಳಕ್ಕೆ ಕರೆಸಿ ಕುಸಿದು ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಸಲಾಯಿತು. ಅಷ್ಟರಲ್ಲಿ ಮಂಗಳೂರು ಹಾಗೂ ಬಂಟ್ವಾಳದಿಂದ ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಆಗಮಿಸಿ ರಕ್ಷಣೆ ಕಾರ್ಯಾಚರಣೆ ಚುರುಕುಗೊಳಿಸಿದರು.
ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯ ಬಳಿಕ ಓರ್ವನ ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲು ಸಾಧ್ಯವಾಯಿತು. ಸಂಜೆ ಆರು ಗಂಟೆಯ ವೇಳೆಗೆ ಇನ್ನಿಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು. ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್, ಪ್ರಮುಖರಾದ ಆಸೀರ್, ರಮ್ಲಾನ್, ಟಿ.ಕೆ.ಬಶೀರ್, ಖಾದರ್ ಪಾವೂರು, ಇಸ್ಮಾಯೀಲ್ ಪಾವೂರು, ಅಖ್ತರ್ ಹುಸೈನ್ ಮುಂತಾದವರು ಮೃತದೇಹ ಮೇಲಕ್ಕೆತ್ತುವಲ್ಲಿ ಸಹಕರಿಸಿದರು.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಶರಣಪ್ಪ, ವಿ.ಎಸ್.ಕುಮಾರ್, ಬಂಟ್ವಾಳ ಎಎಸ್ಪಿ ರಾಹುಲ್‌ಕುಮಾರ್, ಬಂಟ್ವಾಳ ಸಿಐ ಬೆಳ್ಳಿಯಪ್ಪ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದರು.


Spread the love

Exit mobile version