Home Mangalorean News Kannada News ಮಂಗಳೂರು ಗೋಲಿಬಾರ್ : ಮೃತರಿಗೆ ನೀಡಿದ್ದ ಪರಿಹಾರಕ್ಕೆ ತಡೆ – ಸಿಎಂ ಘೋಷಣೆ

ಮಂಗಳೂರು ಗೋಲಿಬಾರ್ : ಮೃತರಿಗೆ ನೀಡಿದ್ದ ಪರಿಹಾರಕ್ಕೆ ತಡೆ – ಸಿಎಂ ಘೋಷಣೆ

Spread the love

ಮಂಗಳೂರು ಗೋಲಿಬಾರ್ : ಮೃತರಿಗೆ ನೀಡಿದ್ದ ಪರಿಹಾರಕ್ಕೆ ತಡೆ – ಸಿಎಂ ಘೋಷಣೆ

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆ ಹಾಗೂ ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರಿಗೆ ಘೋಷಣೆ ಮಾಡಲಾಗಿದ್ದ ಪರಿಹಾರವನ್ನು ತಡೆ ಹಿಡಿಯಲಾಗಿದೆ. ಈ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿಕೆ ನೀಡಿದ್ದು ಪರಿಹಾರ ನೀಡುವ ಕುರಿತಾಗಿ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದರು.

ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್‌ನಲ್ಲಿ ಜಲೀಲ್ ಹಾಗೂ ನೌಶೀನ್ ಎಂಬ ಇಬ್ಬರು ಯುವಕರು ಮೃತಪಟ್ಟಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಘಟನೆಗೆ ರಾಜ್ಯ ಸರಕಾರ ನೇರ ಹೊಣೆ ಎಂದು ಆರೋಪಿಸಿದ್ದರು.

ಡಿಸೆಂಬರ್ 22 ರಂದು ಮಂಗಳೂರಿಗೆ ಭೇಟಿ ನೀಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಮೃತಪಟ್ಟ ಇಬ್ಬರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದರು. ಮೃತರ ಕುಟುಂಬಸ್ಥರು ಹಾಗೂ ಮುಸ್ಲಿಂ ಮುಖಂಡರು ಸಿಎಂ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡಿದ್ದರು. ಇದಾದ ಬಳಿಕ ಸಿಎಂ ಪರಿಹಾರದ ಮೊತ್ತವನ್ನು ಕೂಡಲೇ ಕುಟುಂಬಸ್ಥರಿಗೆ ತಲುಪಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ಸೂಚನೆ ನೀಡಿದ್ದರು.

ಮಂಗಳವಾರ ಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಕೆಲವೊಂದು ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು. ವಿಡಿಯೋದಲ್ಲಿ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸುತ್ತಿರುವುದು ಬಹಿರಂಗಗೊಂಡಿತ್ತು. ಅಲ್ಲದೆ ಕೆಲವೆಡೆ ಸಿಸಿ ಕ್ಯಾಮರಾಗಳನ್ನು ಧ್ವಂಸ ಮಾಡುವುದು ಸೆರೆಯಾಗಿತ್ತು.

ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಅಧಿಕಾರಿಗಳ ಹಾಗೂ ಶಾಸಕರ ಜೊತೆ ಸಭೆ ನಡೆಸಿದ ಸಿಎಂ ಬಿಎಸ್‌ವೈ ಮೃತರ ಕುಟುಂಬಕ್ಕೆ ನೀಡಬೇಕಾದ ಪರಿಹಾರ ಮೊತ್ತವನ್ನು ತಡೆ ಹಿಡಿದಿದ್ದಾರೆ. ಮೃತಪಟ್ಟ ಯುವಕರು ಗಲಭೆಯಲ್ಲಿ ಭಾಗಿಯಾಗಿದ್ದಾರಾ ಎಂಬ ಕುರಿತಾಗಿ ತನಿಖೆ ನಡೆಸಿದ ಬಳಿಕ ಪರಿಹಾರ ನೀಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಒಂದು ವೇಳೆ ಮೃತಪಟ್ಟವರು ಅಪರಾಧಿಗಳು ಎಂದು ರುಜುವಾತಾದರೆ ಪರಿಹಾರ ನೀಡಿದ್ದು ತಪ್ಪಾಗುತ್ತದೆ. ಈ ಕಾರಣದಿಂದಾಗಿ ನೀಡಲಾಗಿದ್ದ ಪರಿಹಾರವನ್ನು ತಡೆಹಿಡಿಯಲಾಗಿದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಗಲಭೆಯ ಬಳಿಕ ನಡೆದ ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟು ಐದಾರು ಮಂದಿ ಗಾಯಗೊಂಡಿದ್ದಾರೆ. ಘಟನೆಯ ಹಿನ್ನಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ.


Spread the love

Exit mobile version