Home Mangalorean News Kannada News ಮಂಗಳೂರು ಚಲೋ ರ‍್ಯಾಲಿಗೆ ನಿರ್ಬಂಧ: ಬಿಜೆಪಿ ಕಾರ್ಯಕರ್ತರ ಬಂಧನ

ಮಂಗಳೂರು ಚಲೋ ರ‍್ಯಾಲಿಗೆ ನಿರ್ಬಂಧ: ಬಿಜೆಪಿ ಕಾರ್ಯಕರ್ತರ ಬಂಧನ

Spread the love

ಮಂಗಳೂರು ಚಲೋ ರ‍್ಯಾಲಿಗೆ ನಿರ್ಬಂಧ: ಬಿಜೆಪಿ ಕಾರ್ಯಕರ್ತರ ಬಂಧನ

ಬೆಂಗಳೂರು (ಪ್ರಜಾವಾಣಿ): ಸಂಘ– ಪರಿವಾರದವರ ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ರಾಜ್ಯದ ವಿವಿಧ ಕಡೆಗಳಿಂದ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ಬೈಕ್ ರ‍್ಯಾಲಿಗೆ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಅನುಮತಿ ನಿರಾಕರಿಸಿ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಉಡುಪಿ, ಮಂಡ್ಯ, ರಾಮನಗರ, ಕೋಲಾರ ಜಿಲ್ಲೆಗಳಲ್ಲಿ ರ‍್ಯಾಲಿಗೆ ನಿರ್ಬಂಧ ಹಾಕಿರುವುದನ್ನು ಬಿಜೆಪಿ ಕಾರ್ಯಕರ್ತರು ಖಂಡಿಸಿದ್ದು, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ಕೋಲಾರದಲ್ಲಿ ಶಾಸಕ ವೈ.ಸಂಪಂಗಿ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಚಲೋಗೆ ನಿರ್ಬಂಧ ಹಾಕಿರುವುದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ’ ಎಂದು ಸಿ.ಟಿ.ರವಿ ಅವರು ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ. ಇತ್ತ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ‘ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿನ ಶೀತಲ ಸಮರ ಖಂಡನೀಯ’ ಎಂದು ದಾವಣಗೆರೆಯಲ್ಲಿ ಹೇಳಿದ್ದಾರೆ.

ಕೋಲಾರ ಜಿಲ್ಲಾ ಕೇಂದ್ರದಿಂದ ಬೈಕ್‌ ರ‍್ಯಾಲಿ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ವೈ.ಸಂಪಂಗಿ ಸೇರಿ 50ಕ್ಕೂ ಹೆಚ್ಚು ಕಾರ್ಯಕರ್ತರು ಪೊಲೀಸ್‌ ವಶಕ್ಕೆ
ಕೋಲಾರ: ‘ಮಂಗಳೂರು ಚಲೋ’ ಹೋರಾಟದಲ್ಲಿ ಭಾಗವಹಿಸಲು ಜಿಲ್ಲೆಯ ವಿವಿಧೆಡೆಯಿಂದ ಮಂಗಳವಾರ ರ‍್ಯಾಲಿ ಹೊರಟಿದ್ದ ಬಿಜೆಪಿ ಶಾಸಕ ವೈ.ಸಂಪಂಗಿ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲದಲ್ಲಿ ಪೊಲೀಸರು ಸಂಪಂಗಿ ಮತ್ತು ಕಾರ್ಯಕರ್ತರ ಬೈಕ್‌ಗಳನ್ನು ತಡೆದಿದ್ದರಿಂದ ಪರಸ್ಪರ ಮಧ್ಯೆ ವಾಗ್ವಾದ ನಡೆದು ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಪೊಲೀಸರು ಬೈಕ್‌ ರ‍್ಯಾಲಿ ನಡೆಸದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೊರಡಿಸಿದ್ದ ಆದೇಶದ ಪ್ರತಿ ತೋರಿಸಿ ರ‍್ಯಾಲಿ ತಡೆಯಲು ಮುಂದಾದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು ರ‍್ಯಾಲಿ ಮುಂದುವರಿಸಲು ಯತ್ನಿಸಿದಾಗ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು. ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವದಲ್ಲಿ ರ‍್ಯಾಲಿ ಹೊರಟಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೈಕ್ ಜಾಥಾ, ಮೆರವಣಿಗೆ ನಿಷೇಧ
ಮಂಡ್ಯ: ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಇದೇ 7ರ ಸಂಜೆ 6ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬೈಕ್ ಜಾಥಾ, ಮೆರವಣಿಗೆ, ಪ್ರತಿಭಟನೆ, ಪಾದಯಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.

ಎರಡು ಪಕ್ಷಗಳ ಶೀತಲ ಸಮರ ಖಂಡನೀಯ: ದೇವೇಗೌಡ
ದಾವಣಗೆರೆ: ಮಂಗಳೂರು ಚಲೊ ಕುರಿತಂತೆ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿನ ಶೀತಲ ಸಮರ ಖಂಡನೀಯ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಟೀಕಿಸಿದರು.

ಪ್ರತಿಭಟನೆ ನಿಷೇಧ
ರಾಮನಗರ: ಇದೇ 5ರಿಂದ 9ರವರೆಗೆ ಜಿಲ್ಲೆಯಾದ್ಯಂತ ಪ್ರತಿಭಟನೆ, ರ‍್ಯಾಲಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮಮತಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಮಂಗಳೂರಿಗೆ ಬೈಕಿನಲ್ಲಿ ತೆರಳಲು ಸಿದ್ಧರಾಗಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು ಸಹಿತ ಹತ್ತಾರು ಕಾರ್ಯಕರ್ತರನ್ನು ಪೊಲೀಸರು ಬೆಳಿಗ್ಗೆ ಚನ್ನಪಟ್ಟಣದಲ್ಲಿ ಬಂಧಿಸಿದರು.

ರಾಮನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಿಂದಲೂ ಮೆರವಣಿಗೆ ಹೊರಡಲು ಕಾರ್ಯಕರ್ತರು ಅಣಿಯಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ಕೈಗೊಂಡಿದ್ದಾರೆ. ರಾಮನಗರ ಡಿವೈಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲೂ ಅಲ್ಲಲ್ಲಿ ಚೆಕ್ ಪೋಸ್ಟ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ.

ನಿರ್ಬಂಧ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ: ಸಿ.ಟಿ.ರವಿ
ಚಿಕ್ಕಮಗಳೂರು: ಬಿಜೆಪಿಯ ಮಂಗಳೂರು ಚಲೋಗೆ ನಿರ್ಬಂಧ ಹಾಕಿರುವುದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಸಿ.ಟಿ.ರವಿ ಹೇಳಿದರು.
ಬೈಕ್ ರ‍್ಯಾಲಿ ಕೈಬಿಡುವುದಿಲ್ಲ. ಮಂಗಳೂರಿಗೆ ಹೋಗುತ್ತೆವೆ ಎಂದು ಅವರು ಪ್ರತಿಕ್ರಿಯಿಸಿದರು.

ಕಾರ್ಯಕರ್ತರ ಬಂಧನ

ತುಮಕೂರು: ಮಂಗಳೂರು ಚಲೋ ಬೆಂಬಲಿಸಿ ತುಮಕೂರು ನಗರದಲ್ಲಿ ಬೈಕ್ ರ‍್ಯಾಲಿ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.


Spread the love

Exit mobile version