ಮಂಗಳೂರು: ಜಿಲ್ಲೆಯಲ್ಲಿ 116ಶಾಲೆಗಳು ಶೇ.100 ಫಲಿತಾಂಶ ಗಳಿಸಿವೆ – ಎ.ಬಿ.ಇಬ್ರಾಹಿಂ

Spread the love

ಮಂಗಳೂರು : ಜಿಲ್ಲೆಯ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದ ಪರಿಶ್ರಮದ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 8ನೇ ಸ್ಥಾನದಲ್ಲಿದ್ದು ಜಿಲ್ಲೆಯ 116 ಶಾಲೆಗಳು ಶೇ.100 ರಷ್ಟು ಫಲಿತಾಂಶ ದಾಖಲಿಸಿವೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ. ಫಲಿತಾಂಶ ಸಂಬಂಧ ಉತ್ತಮ ಫಲಿತಾಂಶ ಗಳಿಸಿರುವ ಶಾಲೆಗಳ ಮುಖ್ಯಸ್ಥರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಬಂಟ್ವಾಳ 37,ಬೆಳ್ತಂಗಡಿ 15, ಮಂಗಳೂರು ಉತ್ತರ 11, ಮಂಗಳೂರು ದಕ್ಷಿಣ 14, ಮೂಡಬಿದರೆ 8, ಪುತ್ತೂರು 19 ಮತ್ತು ಸುಳ್ಯ 12 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.

ಶೇ.31-50 ಫಲಿತಾಂಶವನ್ನು 2 ಸರಕಾರಿ ಮತ್ತು ಒಂದು ಅನುದಾನೇತರ ಶಾಲೆ ಪಡೆದಿದ್ದು, ಶೇ.51-60 ನ್ನು ಒಟ್ಟು 7 ಶಾಲೆಗಳು ಪಡೆದಿದ್ದು, 2 ಸರ್ಕಾರಿ, 3 ಅನುದಾನಿತ ಹಾಗೂ 2 ಅನುದಾನ ರಹಿತ ಶಾಲೆಗಳು, ಶೇ.61-80ರಷ್ಟು ಫಲಿತಾಂಶವನ್ನು 47 ಸರ್ಕಾರಿ,14ಅನುದಾನಿತ ಮತ್ತು 20 ಅನುದಾನೇತರ ಶಾಲೆಗಳು ಪಡೆದಿವೆ, 271 ಶಾಲೆಗಳು ಶೇ.81-99 ರಷ್ಟು ಫಲಿತಾಂಶ ಗಳಿಸಿದ್ದು ಅವುಗಳಲ್ಲಿ 98 ಸರ್ಕಾರಿ, 86 ಅನುದಾನಿತ ಮತ್ತು 87 ಅನುದಾನ ರಹಿತ ಶಾಲೆಗಳಾಗಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಹೆಚ್. ಡಿ ಮೆಲ್ಲೋ ಅವರು ತಿಳಿಸಿದರು.

ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪರಿಶಿಷ್ಟ ಜಾತಿಯ 1145 ಹುಡುಗರು ಮತ್ತು 1216 ಹುಡುಗಿಯರು ಸೇರಿ ಒಟ್ಟು 2361 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಇವರಲ್ಲಿ 897 ಹುಡುಗರು ಮತ್ತು 1041 ಹುಡುಗಿಯರು ಸೇರಿದಂತೆ ಒಟ್ಟು 1938 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡಾ.82.08 ಫಲಿತಾಂಶ ದಾಖಲಾಗಿದೆ.

ಇಂದು ನಡೆದ ಎಸ್.ಎಸ್.ಎಲ್.ಸಿ. ವಿಶ್ಲೇಷಣಾ ಫಲಿತಾಂಶ ಸಭೆಯಲ್ಲಿ ಹಲವಾರು ಶಾಲೆಗಳು ತಮ್ಮ ಶಾಲೆಗಳಲ್ಲಿ ಗಣಿತ, ಇಂಗ್ಲೀಷ್ ವಿಷಯಗಳ ಶಿಕ್ಷಕರ ಕೊರತೆ ಇದ್ದರೂ ಸತತ ಪ್ರಯತ್ನದ ಫಲವಾಗಿ ಉತ್ತಮ ಫಲಿತಾಂಶ ಪಡೆದಿರುವುದಾಗಿ ತಿಳಿಸಿದ್ದಲ್ಲದೆ, ಈ ಬಾರಿ ಜೂನ್ ಮಾಹೆಯಿಂದಲೇ ಹೆಚ್ಚು ಕಾಳಜಿ ವಹಿಸುವ ಮೂಲಕ ಶೇ.100 ಫಲಿತಾಂಶ ದಾಖಲೆಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಸತತ ಪ್ರತೀ ವರ್ಷ ಶೇ.100 ಫಲಿತಾಂಶ ದಾಖಲಿಸುತ್ತಿರುವ ಗುರುವಾಯನಕೆರೆ ಶಾಲೆ ಮತ್ತು ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಹಾಗೂ ಶೇ.100 ರಷ್ಟು ಫಲಿತಾಂಶ ಪಡೆದಿರುವ ಕೊಯಿಲಾ ಶಾಲೆ ಮುಖ್ಯಸ್ಥರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಹೆಚ್ ಡಿ ಮೆಲ್ಲೋ ಅವರನ್ನು ಸನ್ಮಾನಿಸಲಾಯಿತು. ರಾಜ್ಯದಲ್ಲಿ ಪಿ.ಯು.ಸಿ. ಫಲಿತಾಂಶದಲ್ಲಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿರುವ ಬಗ್ಗೆ ಸಂತಸ ಹಂಚಿಕೊಂಡ ಜಿಲ್ಲಾಧಿಕಾರಿಗಳು ಇದಕ್ಕೆ ಶ್ರಮವಹಿಸಿದ ವಿದ್ಯಾರ್ಥಿಗಳು ಶಿಕ್ಷಕರುಗಳಿಗೆ ಶುಭಾಶಯ ಕೋರಿ ಪಿ.ಯು. ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಆರ್.ತಿಮ್ಮಯ್ಯ ಅವರನ್ನು ಸನ್ಮಾನಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ.ಶ್ರೀವಿದ್ಯಾ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ನಾಗೇಂದ್ರ ಮಧ್ಯಸ್ಥ ಮತ್ತು ಡಯಟ್ ಪ್ರಾಂಶುಪಾಲರಾದ ಸಿಪ್ರಿಯನ್ ಮೊಂತೆರೊ ಮುಂತಾದವರು ಹಾಜರಿದ್ದರು.

2014ನೇ ಸಾಲಿನಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ಎಮ್.ಬಿ.ಕಾವ್ಯ ಶ್ರೀ ಪಿ.ಯು.ಸಿ.ಯಲ್ಲಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಕ್ಕಾಗಿ ದೆಹಲಿಯ ಡಾ||ಅಂಬೇಡ್ಕರ್ ಪ್ರತಿಷ್ಠಾನದ ವತಿಯಿಂದ ರೂ.50,000/- ಬಹುಮಾನ ಹಾಗೂ ಪ್ರಶಸ್ತಿಯನ್ನು ನೀಡಲಾಗಿದ್ದು ಅದನ್ನು ಅಕೆಯ ತಂದೆಗೆ ಜಿಲ್ಲಾಧಿಕಾರಿಗಳು ಇಂದು ನೀಡಿದರು.


Spread the love