ಮಂಗಳೂರು: ಟಿಪ್ಪು ಜಯಂತಿಯ ಹೆಸರಿನಲ್ಲಿ ಮುಗ್ದ ಜನರ ಹತ್ಯೆ – ಎಬಿವಿಪಿ ಖಂಡನೆ

Spread the love

ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ತನ್ನ ಇಲಾಖೆಯ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ.  ಕನ್ನಡ ವಿರೋಧಿಯಾಗಿದ್ದ ಮತ್ತು ಮತಾಂಧ ಟಿಪ್ಪುವಿನ ಜಯಂತಿಯನ್ನು ಸರ್ಕಾರ ತನ್ನ ಅಧಿಕೃತ ಕಾರ್ಯಕ್ರಮವಾಗಿ ಆಚರಿಸಿರುವುದು ಟಿಪ್ಪುವಿನ ವಿರುದ್ದ ಹೋರಾಡಿದ ಕೊಡವರ, ಕರಾವಳಿ, ಮಂಡ್ಯ ಹಾಗೂ ಇನ್ನಿತರ ಭಾಗಗಳ ಜನರ ಭಾವನೆಗೆ ಧಕ್ಕೆ ಉಂಟು ಮಾಡಿದೆ.

ತನ್ನ ಸ್ವಾರ್ಥಕ್ಕೋಸ್ಕರ ಫ್ರೆಂಚರನ್ನು ಹಾಗೂ ಇನ್ನಿತರ ವಿದೇಶಿ ಮುಸ್ಲಿಂ ರಾಜರನ್ನು ಭಾರತಕ್ಕೆ ದಾಳಿ ಮಾಡುವಂತೆ ಆಹ್ವಾನಿಸಿದ್ದ ಟಿಪ್ಪುವನ್ನು ದೇಶ ಪ್ರೇಮಿಯೆಂದು ಬಿಂಬಿಸುವುದು ಹಾಸ್ಯಾಸ್ಪದ. ಮತಾಂಧತೆಯನ್ನು ತಲೆಗೇರಿಸಿಕೊಂಡಿದ್ದ ಟಿಪ್ಪು ಅನೇಕ ದೇವಾಲಯಗಳನ್ನು ನೆಲಸಮ ಗೊಳಿಸಿದ್ದನ್ನು, ಹಿಂದುಗಳನ್ನು ಮತ್ತು ಕ್ರಿಶ್ಚಿಯರನ್ನು ಸಾಮೂಹಿಕವಾಗಿ ಹತ್ಯೆ ಮಾಡಿರುವುನ್ನು ಅನೇಕ ಸಂಶೋಧಕರು ತಮ್ಮ ಸಂಶೋಧನೆಯಲ್ಲಿ ತಿಳಿಸಿದ್ದರೂ ಆತನನ್ನು ಜ್ಯಾತ್ಯಾತೀತನೆಂದು ಚಿತ್ರಿಸಿರುವ ಸರ್ಕಾರದ ನಿಲುವನ್ನು ಎಬಿವಿಪಿ ತೀವ್ರವಾಗಿ ಖಂಡಿಸುತ್ತದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಬೇಕಾದ ರಾಜ್ಯ ಸರ್ಕಾರವೇ ದೇಶದ್ರೋಹಿಯೊಬ್ಬನ ಜಯಂತಿ ಆಚರಿಸುವುದರ ಮೂಲಕ ಸಮಾಜದಲ್ಲಿ ಅಸಹಿಷ್ಣುತೆ ಬಿತ್ತುತ್ತಿದೆ. ಬಹುಜನರ ವಿರೋಧದ ನಡುವೆಯೂ ಸರ್ಕಾರ ತನ್ನ ಪ್ರತಿಷ್ಟೆ ಎಂಬಂತೆ ಈ ಕಾರ್ಯಕ್ರವನ್ನು ನಡೆಸಿರುವುದು ಅಕ್ಷಮ್ಯ ಅಪರಾಧ.

ಮಡಿಕೇರಿಯಲ್ಲಿ ನಡೆದ ಟಿಪ್ಪು ಜಯಂತಿಯ ಸಂದರ್ಭದಲ್ಲಿ ನಡೆದಿರುವ ಮುಗ್ದ ಜನರ ಹತ್ಯೆಯನ್ನು ಎಬಿವಿಪಿ ಖಂಡಿಸುತ್ತದೆ. ಸ್ಥಳೀಯರು ಹೊರ ರಾಜ್ಯಗಳಿಂದ ಬಂದಿರುವವರೊಂದಿಗೆ ಕೈ ಜೋಡಿಸಿ ಟಿಪ್ಪು ಜಯಂತಿಯನ್ನು ವಿರೋಧಿಸಿದವರನ್ನು ಹತ್ಯೆ ಮಾಡಿರುವುದು  ಮೇಲ್ನೋಟಕ್ಕೆ ಸಾಬೀತಾಗಿದೆ.  ಪೂರ್ವನಿಯೋಜಿತವಾಗಿದ್ದ ಈ ಹತ್ಯೆಗೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಸರ್ಕಾರ ಈ ಕೂಡಲೇ ಹತ್ಯೆ ಮತ್ತು ಗಲಭೆಗೆ ಕಾರಣರಾದವರನ್ನು ಶೀಘ್ರವೇ ಬಂಧಿಸಿ ಶೀಘ್ರವೇ ಶಾಂತಿಯನ್ನು ಕಾಪಾಡಬೇಕೆಂದು ಎಬಿವಿಪಿ ಒತ್ತಾಯಿಸುತ್ತದೆ

ಇನ್ನೊಂದೆಡೆ ಬೆಂಗಳೂರಿನಲ್ಲಿ ನಡೆದ ಟಿಪ್ಪುಜಯಂತಿಯಲ್ಲಿ ಗಿರೀಶ್ ಕಾರ್ನಾಡ್ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡ ಪ್ರಭು ಕೆಂಪೇಗೌಡರ ಬದಲು ಟಿಪ್ಪು ಹೆಸರಿಡಬೇಕು, ಕೆಂಪೇಗೌಡ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಹೇಳಿರುವುದು ಕೆಂಪೇಗೌಡರಿಗೆ ಮಾಡಿದ ಅವಮಾನವಾಗಿದೆ ಮತ್ತು ಈ ಹೇಳಿಕೆಯನ್ನು ಎಬಿವಿಪಿ ಖಂಡಿಸುತ್ತದೆ. ಈ ರೀತಿಯ ಹೇಳಿಕೆಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿರುವ ಗಿರೀಶ್ ಕಾರ್ನಡರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಎಬಿವಿಪಿ ಆಗ್ರಹಿಸುತ್ತದೆ.


Spread the love