ಮಂಗಳೂರು ತಾಲೂಕು ಪಲ್ಸ್ ಪೋಲಿಯೋ ಲಸಿಕಾ ಸಮಿತಿ ಸಭೆ

Spread the love

ಮಂಗಳೂರು ತಾಲೂಕು ಪಲ್ಸ್ ಪೋಲಿಯೋ ಲಸಿಕಾ ಸಮಿತಿ ಸಭೆ

ಮಂಗಳೂರು : ಮಾರ್ಚ್ 11 ರಂದು ಜರುಗಲಿರುವ ದ್ವಿತೀಯ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮಂಗಳೂರು ತಾಲೂಕಿನಲ್ಲಿ ಅನುಷ್ಟಾನಗೊಳಿಸುವ ಸಲುವಾಗಿ ತಾಲೂಕು ಆರೋಗ್ಯಾಧಿಕಾರಿ ಇವರ ವತಿಯಿಂದ ತಾಲೂಕು ಟಿ.ಟಿ.ಎಫ್ ಸಮಿತಿಯ ಟಿ.ಟಿ.ಎಫ್ ಸಭೆಯು ತಹಶೀಲ್ದಾರ ಗುರುಪ್ರಸಾದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮಹಾನಗರಪಾಲಿಕೆಯ ವತಿಯಿಂದ ತ್ಯಾಜ ವಿಲೇವಾರಿ ಗಾಡಿಯಲ್ಲಿ ಘೋಷಣೆ ಕೂಗುವ ಪ್ರಚಾರಪಡಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಲ್ಲಿ, ಪಟ್ಟಣ ಪಂಚಾಯತ್‍ಗಳಲ್ಲಿ ಸಾಕಷ್ಟು ಪ್ರಚಾರ ಕಾರ್ಯನಡೆಯಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ನವೀನ್ ಕುಲಾಲ್ ಹೇಳಿದರು.

ಜನವರಿ ತಿಂಗಳ ಪಲ್ಸ್ ಪೋಲಿಯೋ ಕಾರ್ಯಕ್ರಮದ ನಂತರ ನಡೆಸಿದ ಸಮೀಕ್ಷೆಯ ಪ್ರಕಾರ ಬೊಳಿಯಾರ್, ನಾಟೆಕಲ್, ಕೋಟೆಕಾರ್ ಮತ್ತು ಉಳ್ಳಾಲ ಪ್ರದೇಶಗಳೂ ಸೇರಿ ಇನ್ನೂ ಕೆಲವು ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲಾಗಿಲ್ಲ ಎಂದು ವರದಿಯಾಗಿದೆ. ಈ ಭಾರಿ ಇಂತಹ ತಪ್ಪು ನಡೆಯದಂತೆ ಎಚ್ಚರವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇನ್ನಷ್ಟು ಶ್ರಮವಹಿಸಬೇಕಾಗಿದೆ. ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಪ್ರತಿದಿನ ಅಸೆಂಬ್ಲಿಯಲ್ಲಿ ಪಲ್ಸ್ ಪೋಲಿಯೋದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಬೇಕು.

ಮೆಸ್ಕಾಂ ಅಧಿಕಾರಿಗಳು ಈ ಭಾರಿಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೋಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹತ್ತಿರದ ವಿದ್ಯುತ್ ಇಲಾಖೆ ಸಿಬ್ಬಂದಿಗಳ ಜೊತೆ ಸಂಪರ್ಕದಲ್ಲಿ ಇದ್ದು ಕಾರ್ಯ ನಿರ್ವಹಿಸಬೇಕಾಗಿದೆ. ಲಸಿಕೆಯನ್ನು ಶಿಥಿಕರಣಗೊಳಿಸಿದ ಸಣ್ಣ ಪೆಟ್ಟಿಗೆಯಲ್ಲಿ ಕೊಂಡೊಯ್ಯುವ ಅವಶ್ಯಕತೆ ಇರುತ್ತದೆ. ಅರ್ಧ ಗಂಟೆ ವಿದ್ಯುತ್ ಸ್ಥಗಿತವಾದರೂ ಕೂಡ ತೊಂದರೆ ಉಂಟಾಗುತ್ತದೆ. ಆರ್.ಬಿ.ಎಸ್.ಕೆ. ವೈದ್ಯರು ತಮ್ಮ ಸಿಬಂದಿಗಳನ್ನು ಬೋಳಿಯಾರ್, ನಾಟೇಕಲ್, ಕೋಟೆಕಾರ್ ಮತ್ತು ಉಳ್ಳಾಲ ಪರಿಸರದಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ನವೀನ್ ಕುಲಾಲ್ ಹೇಳಿದರು.

ತಹಶೀಲ್ದಾರ್ ಗುರುಪ್ರಸಾದ್ ಪಂಚಾಯತ್, ಪಿಡಿಓಗಳಿಗೂ ಹೆಚ್ಚಿನ ಪ್ರಚಾರ ಕಾರ್ಯ ಮಾಡುವಂತೆ ನಿರ್ದೇಶನ ನೀಡಲಾಗಿದೆ. ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಸಮಸ್ಯೆ ಎದುರಾದಲ್ಲಿ ನೇರವಾಗಿ ನಮ್ಮ ಗಮನಕ್ಕೆ ತರಬೇಕು. ಇದಕ್ಕೆ ಎಲ್ಲಾ ಇಲಾಖಾ ಸಿಬ್ಬಂದಿಗಳು ಉತ್ತಮ ರಿತಿಯಲ್ಲಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು ಎಂದು ಹೇಳಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಧಿಕಾರಿ ಡಾ.ಮಂಜಯ್ಯ ಶೆಟ್ಟಿ, ಮಂಗಳೂರು ಗ್ರಾಮಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ ಇನ್ನಿತರರು ಉಪಸ್ಥಿತರಿದ್ದರು.


Spread the love