ಮಂಗಳೂರು ತ್ಯಾಜ್ಯ ನಿರ್ವಹಣೆ 15 ದಿನಗಳಿಗೊಮ್ಮೆ ಪರಿಶೀಲನೆ
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯ ಹೊಣೆ ಹೊತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯ ತ್ಯಾಜ್ಯ ನಿರ್ವಹಣೆ ಕುರಿತು ಪ್ರತಿ 15 ದಿನಗಳಿಗೊಮ್ಮೆ ಪರಿಶೀಲನೆ ನಡೆಸಲು ಶಾಸಕರಾದ ಡಿ ವೇದವ್ಯಾಸ ಕಾಮತ್ ಹಾಗೂ ಡಾ. ವೈ ಭರತ್ ಶೆಟ್ಟಿ ಸೂಚನೆ ನೀಡಿದರು.
ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯ ತ್ಯಾಜ್ಯ ನಿರ್ವಹಣೆಯ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ಪರಿಶೀಲನೆ ಸಭೆ ನಡೆಯಿತು. ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಘನ ತ್ಯಾಜ್ಯ ನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಪಾಲಿಕೆ ವ್ಯಾಪ್ತಿಯ ಕಸ ಸಾಗಾಟಕ್ಕೆ ಸರಿಯಾದ ಪ್ರಮಾಣದಲ್ಲಿ ವಾಹನ ವ್ಯವಸ್ಥೆ ಇಲ್ಲ, ಕಸ ವಿಲೇವಾರಿ ಸರಿಯಾಗಿ ನಡೆಯುತ್ತಿಲ್ಲ ಎಂದು ದೂರು ಸಭೆಯಲ್ಲಿ ಕೇಳಿ ಬಂತು.
ಸಭೆಯಲ್ಲಿ ಶಾಸಕ ಕಾಮತ್ ಮಾತನಾಡಿ ತ್ಯಾಜ್ಯ ಸಂಗ್ರಹ ಮಾಡುವ ಸಣ್ಣ ವಾಹನಗಳಿಗೂ ಜಿಪಿಎಸ್ ಅಳವಡಿಸಬೇಕು ಎಂದು ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯವರಿಗೆ ಸೂಚನೆ ನೀಡಿದರು. ಪ್ರಾಯೋಗಿಕ ನೆಲೆಯಲ್ಲಿ ಪಾಲಿಕೆಯ ಐದು ವಾರ್ಡ್ ಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯವನ್ನು ವರ್ಗಿಕರಿಸಿ ಕೊಡುವ ಪೈಲೆಟ್ ಪ್ರಾಜೆಕ್ಟ್ ಅನ್ನು ಹೆಚ್ಚಿನ ವಾರ್ಡುಗಳಿಗೆ ವಿಸ್ತರಿಸಬೇಕು ಎಂದು ಶಾಸಕರು ಹೇಳಿದರು. ಒಟ್ಟು 112 ಆ್ಯಂಟನಿ ವೇಸ್ಟ್ ನವರ ವಾಹನಗಳಿದ್ದು, 8 ಹೊರಗುತ್ತಿಗೆಯ ವಾಹನಗಳಿದ್ದು ಎಲ್ಲಾ ವಾಹನಗಳ ಸುಸ್ಥಿತಿಯ ಬಗ್ಗೆ ವರದಿ ನೀಡಬೇಕು ಎಂದು ಸೂಚನೆ ನೀಡಲಾಯಿತು. ಕಸ ತೆಗೆಯುವ, ಗುಡಿಸುವ ಎಲ್ಲಾ ಕೆಲಸಗಳನ್ನು ಸರಿಯಾಗಿ ಪಾಲಿಸುವಂತೆ ಕಂಪೆನಿಗೆ ಆದೇಶ ನೀಡಲಾಯಿತು.
ಪಾಲಿಕೆ ಕಮೀಷನರ್ ಮಹಮ್ಮದ್ ನಝೀರ್, ಪಾಲಿಕೆ ಆರೋಗ್ಯಾಧಿಕಾರಿ ಡಾ|ಮಂಜಯ್ಯ ಶೆಟ್ಟಿ, ಪರಿಸರ ಇಂಜಿನಿಯರ್ ಮಧು, ಆ್ಯಂಟನಿ ವೇಸ್ಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಪ್ರತಿನಿಧಿಗಳು ಉಪಸ್ಥಿತರಿದ್ದರು.